ADVERTISEMENT

ಹೂವಾಡಿಗರ ಬದುಕು ಬಾಡಿಸಿದ ಕೋವಿಡ್‌

ಮಾರುಕಟ್ಟೆಗಳಲ್ಲಿ ಬೇಡಿಕೆ ಕುಸಿತl ವ್ಯಾಪಾರವಾಗದೆ ಕೊಳೆಯುತ್ತಿರುವ ಹೂವು

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2022, 19:42 IST
Last Updated 4 ಫೆಬ್ರುವರಿ 2022, 19:42 IST
ಗ್ರಾಹಕರಿಗೆ ಎದುರು ನೋಡುತ್ತಿರುವ ಕೆ.ಆರ್. ಮಾರುಕಟ್ಟೆ ಹೂವು ಮಾರಾಟಗಾರರು.ಪ್ರಜಾವಾಣಿ ಚಿತ್ರ/ ಅನೂಪ್ ರಾಘ ಟಿ.
ಗ್ರಾಹಕರಿಗೆ ಎದುರು ನೋಡುತ್ತಿರುವ ಕೆ.ಆರ್. ಮಾರುಕಟ್ಟೆ ಹೂವು ಮಾರಾಟಗಾರರು.ಪ್ರಜಾವಾಣಿ ಚಿತ್ರ/ ಅನೂಪ್ ರಾಘ ಟಿ.   

ಬೆಂಗಳೂರು: ‘ಕೋವಿಡ್‌ ಬಂದ ದಿನದಿಂದಲೇ ನಮ್ಮ ಬದುಕು ಬೀದಿಗೆ ಬಿದ್ದಂತಾಗಿದೆ. ಲಾಕ್‌ಡೌನ್‌ ಹೇರಿದ ಮೇಲೆ ಉಂಟಾದ ಪರಿಸ್ಥಿತಿ ಈಗಲೂ ಮುಂದುವರೆದಿದ್ದು, ಒಂದು ಹೊತ್ತಿನ ಅನ್ನಕ್ಕೂ ಕಷ್ಟವಾಗುತ್ತಿದೆ...’

ಇದು ಯಶವಂತಪುರದಲ್ಲಿ ಕಳೆದ 20 ವರ್ಷಗಳಿಂದ ಹೂವು ಮಾರುತ್ತಿರುವ ಹನುಮಕ್ಕ ಅವರ ನೋವಿನ ಮಾತು.

ದೇವರ ಗುಡಿ ಸೇರಲು ತವಕಿಸುತ್ತಿರುವ ಮಲ್ಲಿಗೆ, ಸುಗಂಧರಾಜ, ಸಂಪಿಗೆ, ಹೆಂಗಳೆಯರ ಮುಡಿ ಸೇರಲು ಹಾತೊರೆಯುತ್ತಿರುವ ಗುಲಾಬಿ, ಇತರ ಅಲಂಕಾರಕ್ಕೆ ಸಜ್ಜುಗೊಂಡಿರುವ ಚೆಂಡು, ಇನ್ನಿತರ ಹೂವುಗಳ ಮಾಲೆ.. ಇಂದು ಕೊಳ್ಳುವವರಿಲ್ಲದೆ ಕಸ ಸೇರುತ್ತಿರುವ ನೋವಿನಿಂದ ಪರಿತಪಿಸುತ್ತಿವೆ.

ADVERTISEMENT

ನೀರು ಸಿಂಪಡಿಸಿದ ಹೂವುಗಳ ರಾಶಿ ಒಂದೆಡೆಯಾದರೆ, ಪೈಪೋಟಿಗೆ ಬಿದ್ದಂತೆ ಮಾಲೆ ಕಟ್ಟುವಲ್ಲಿ ನಿರತರಾಗಿರುವವರು ಇನ್ನೊಂದು ಕಡೆ. ಇವು ಬಹುತೇಕ ಹೂವು ಮಾರುಕಟ್ಟೆಗಳಲ್ಲಿ ಕಂಡು ಬರುವ ದೃಶ್ಯ. ಆದರೆ, ಇಲ್ಲಿ ಮೊದಲಿನ ಜೀವಂತಿಕೆ ಇಲ್ಲ.

ಸದಾ ಜನಜಂಗುಳಿಯಿಂದ ಕೂಡಿರುತ್ತಿದ್ದ ನಗರದ ಹೂವು ಮಾರುಕಟ್ಟೆಗಳು ಈಗ ಜನರ ಸುಳಿದಾಟ ಇಲ್ಲದೆ ಬಿಕೋ ಎನ್ನುತ್ತಿವೆ. ಆದರೆ, ವ್ಯಾಪಾರಿಗಳು ಇಂದಿಗೂ ಪ್ರತಿ ದಿನ ನಸುಕಿನ ಜಾವ ಎದ್ದು ಕೆ.ಆರ್‌. ಮಾರುಕಟ್ಟೆಗೆ ಹೋಗಿ ಮಣಗಟ್ಟಲೆ ಹೂವು ತಂದು ಮಾಲೆ ಕಟ್ಟುತ್ತಾರೆ. ಹೂವು ತರುವ ಖರ್ಚಿನ ಅರ್ಧದಷ್ಟು ಹಣವೂ ವ್ಯಾಪಾರಿಗಳ ಕೈಸೇರುತ್ತಿಲ್ಲ.

ಸೇವಂತಿಗೆ, ಮಲ್ಲಿಗೆ, ಕನಕಾಂಬರ, ಜಾಜಿ, ಕಾಕಡ, ಗುಲಾಬಿ, ಚೆಂಡು ಮೊದಲಾದ ಹೂವುಗಳನ್ನು ತಂದು ಪೋಣಿಸಿ ಅವುಗಳ ವ್ಯಾಪಾರಕ್ಕೆ ಅಣಿಯಾಗುತ್ತಿದ್ದ ಹೂವು ವ್ಯಾಪಾರಸ್ಥರ ಮೊಗದಲ್ಲಿ ಈಗ ಉತ್ಸಾಹವಿಲ್ಲ. ಬಹುತೇಕ ಸಾರ್ವಜನಿಕರು ಈಗ ಮಾರುಕಟ್ಟೆಗಳಿಗೆ ಹೋಗದೆ ಆನ್‌ಲೈನ್‌ ಮೊರೆ ಹೋಗಿರುವುದು ಕೂಡ ಹೂವಾಡಿಗರ ಸಂಕಷ್ಟಕ್ಕೆ ಕಾರಣ ಎನ್ನಲಾಗಿದೆ.

ಕೆ.ಆರ್‌.ಮಾರುಕಟ್ಟೆ, ಮಲ್ಲೇಶ್ವರ, ಯಶವಂತಪುರ, ರಾಜರಾಜೇಶ್ವರಿ ನಗರ, ಬಸವನಗುಡಿ, ಗಾಂಧಿ ಬಜಾರ್‌, ಜಯನಗರ, ಹನುಮಂತನಗರ, ಮೆಜೆಸ್ಟಿಕ್‌, ರಾಜಾಜಿನಗರ, ಜೆ.ಪಿ.ನಗರ, ಬನಶಂಕರಿ, ಜೆ.ಸಿ. ನಗರ ಮೊದಲಾದ ಪ್ರದೇಶಗಳಲ್ಲಿ ಹೂವು ಮಾರುವವರ ಬೀದಿ ಈಗ ಮೌನ ತಾಳಿದೆ. ದಿನವೆಲ್ಲಾ ಕಾದರೂ ಹೂವು ಖರೀದಿಸುವವರ ಸಂಖ್ಯೆ ಮಾತ್ರ ಬೆರಳೆಣಿಕೆಯಷ್ಟು. ಹೂವು ಮಾರಾಟವಾಗದಿದ್ದರೆ ಎರಡು ದಿನದಲ್ಲಿ ಬಾಡುತ್ತದೆ. ಮರುದಿನ ಮಾರಾಟಕ್ಕೆ ಹೊಸ ಹೂವು ಕೊಂಡು ತರಬೇಕು. ಎಲ್ಲಿಂದ ಹಣ ತರುವುದು? ತುತ್ತಿನ ಚೀಲ ತುಂಬುವುದೂ ಕಷ್ಟವಾಗಿದೆ ಎಂದು ಹೂವು ಮಾರುವವರು ಅಳಲು ತೋಡಿಕೊಳ್ಳುತ್ತಾರೆ.

ಜನರ ಬಳಿ ದುಡ್ಡಿಲ್ಲ. ಅವರೂ ಮಾರುಕಟ್ಟೆಗಳತ್ತ ಬರುತ್ತಿಲ್ಲ. ಈಗ ಬಡ್ಡಿ ಕಟ್ಟಲೂ ಹಣ ದೊರೆಯುತ್ತಿಲ್ಲ. ಬಿಡಲೂ ಕಷ್ಟ, ಮಾಡದೇ ಇರಲೂ ಕಷ್ಟವಾಗಿದೆ. ದಿನದ ಖರ್ಚು, ಬಡ್ಡಿ ಹಣ ಎರಡನ್ನೂ ತೂಗಿಸುವುದು ಕಷ್ಟವಾಗಿದೆ. ಮೊದಲನೇ ಲಾಕ್‌ಡೌನ್‌ಗಿಂತ ಎರಡನೇ ಲಾಕ್‌ಡೌನ್‌ ಬಹಳ ದೊಡ್ಡ ಹೊಡೆತ ನೀಡಿದೆ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ ಹೂವು ವ್ಯಾಪಾರಿ ಉಮಾ.

ಮನೆ ಬಾಡಿಗೆ ಕಟ್ಟಬೇಕು. ಮಕ್ಕಳ ಓದು ನಿಭಾಯಿಸಬೇಕು. ಈ ಮೊದಲು ಜೀವನ ನಿರ್ವಹಣೆಗೆ ಆಗುವಷ್ಟು ವ್ಯಾಪಾರವಾಗುತ್ತಿತ್ತು. ಈಗ ಎಲ್ಲವೂ ಕಷ್ಟವಾಗಿದ್ದು ಸಾಲ ಮಾಡಿ ಜೀವನ ನಡೆಸುವಂತಾಗಿದೆ ಎನ್ನುವಾಗ ಉಮಾ ಅವರ ಕಣ್ಣಂಚಲ್ಲಿ ನೀರು ತುಂಬಿತ್ತು.

ಐದು ಸಾವಿರಕ್ಕೆ ಹೂವು ತಂದರೆ ಒಂದು ಸಾವಿರದಷ್ಟು ವ್ಯಾಪಾರ ಆದರೆ ಹೆಚ್ಚು ಎನ್ನುತ್ತಾರೆ ಮಲ್ಲೇಶ್ವರ ಹೂವು ಮಾರುಕಟ್ಟೆಯ ವ್ಯಾಪಾರಿ ಗೋವಿಂದರಾಜು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.