ADVERTISEMENT

ಕೋವಿಡ್‌ ಸಾವು ಹೆಚ್ಚಳ: ಉನ್ನತ ಮಟ್ಟದ ಸಮಿತಿ ರಚನೆಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2020, 0:13 IST
Last Updated 5 ಆಗಸ್ಟ್ 2020, 0:13 IST

‌ಬೆಂಗಳೂರು: ನಗರದಲ್ಲಿ ಕೋವಿಡ್‌ ಕಾಯಿಲೆಯಿಂದ ಸಾಯುವವರ ಸಂಖ್ಯೆ ಹೆಚ್ಚುತ್ತಿದ್ದು, ಈ ಬಗ್ಗೆ ನಿಖರ ಕಾರಣ ತಿಳಿಯಲು ಪ್ರತ್ಯೇಕವಾದ ಉನ್ನತಮಟ್ಟದ ಸಮಿತಿ ರಚಿಸಬೇಕು ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ಅವರು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅವರಿಗೆ ಸೂಚಿಸಿದರು.

ಕೋವಿಡ್ ಸಂಬಂಧ ಬಿಬಿಎಂಪಿ ಆಯುಕ್ತರ ಜೊತೆ ಮಂಗಳವಾರ ಸಭೆ ನಡೆಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಸಾವಿನ ಪ್ರಕರಣಗಳು ಹೆಚ್ಚಾಗಲು ಕಾರಣ ಏನು, ಚಿಕಿತ್ಸೆ ತಡವಾಗಿದ್ದಕ್ಕೆ ಸಾವು ಸಂಭವಿಸಿತೇ ಅಥವಾ ಚಿಕಿತ್ಸಾ ವಿಧಾನದಲ್ಲಿ ಏನಾದರೂ ಲೋಪಗಳು ಇತ್ತೇ ಎಂಬ ಬಗ್ಗೆ ಸಮಿತಿ ಅಧ್ಯಯನ ನಡೆಸಬೇಕು. ಸಮಿತಿ ಕೊಡುವ ವರದಿಯನ್ನಾಧರಿಸಿ, ಲೋಪಗಳನ್ನು ಸರಿಪಡಿಸಿಕೊಂಡು ಸಾವಿನ ಪ್ರಮಾಣ ಶೂನ್ಯಕ್ಕೆ ಇಳಿಸಲು ಪ್ರಯತ್ನಿಸಬೇಕು’ ಎಂದು ಹೇಳಿದರು.

ADVERTISEMENT

‘ಯಾವ ಆಸ್ಪತ್ರೆಯಲ್ಲಿ ಎಷ್ಟು ಬೆಡ್‌ಗಳು ಖಾಲಿ ಇವೆ, ಎಷ್ಟು ರೋಗಿಗಳು ತೀವ್ರ ನಿಗಾ ಘಟಕದಲ್ಲಿ ಇದ್ದಾರೆ, ಎಷ್ಟು ಮಂದಿ ಗುಣಮುಖರಾಗಿ ಮನೆಗೆ ಹೋಗಿದ್ದಾರೆ... ಹೀಗೆ ಎಲ್ಲ ಮಾಹಿತಿಯೂ ಕ್ಷಣಕ್ಷಣಕ್ಕೂ ಆನ್‌ಲೈನ್‌ನಲ್ಲಿ ಅಪ್‌ಡೇಟ್‌ ಆಗಬೇಕು. ಈ ಮಾಹಿತಿ ಸಾರ್ವಜನಿಕರಿಗೂ ಆನ್‌ಲೈನ್‌ನಲ್ಲಿ ಸಿಗುವ ಹಾಗೆ ಮಾಡಬೇಕು’ ಎಂದು ಅವರು ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.