ADVERTISEMENT

ನವಜಾತ ಶಿಶುಗಳಿಗೂ ಕೋವಿಡ್

ವಿವಿಧ ಆಸ್ಪತ್ರೆಗಳಲ್ಲಿ ಮುನ್ನೆಚ್ಚರಿಕೆಯೊಂದಿಗೆ ಆರೈಕೆ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2020, 22:05 IST
Last Updated 10 ನವೆಂಬರ್ 2020, 22:05 IST
ಕೊರೊನಾ ವೈರಸ್‌ ಸೋಂಕು–ಪ್ರಾತಿನಿಧಿಕ ಚಿತ್ರ
ಕೊರೊನಾ ವೈರಸ್‌ ಸೋಂಕು–ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ನವಜಾತ ಶಿಶುಗಳಿಗೂ ಕೊರೊನಾ ಸೋಂಕು ತಗುಲುತ್ತಿದ್ದು, ನಗರದ ವಾಣಿ ವಿಲಾಸ ಸೇರಿದಂತೆ ವಿವಿಧ ಆಸ್ಪತ್ರೆಗಳಲ್ಲಿ ಈ ಮಕ್ಕಳಿಗೆ ಆರೈಕೆ ಮಾಡಲಾಗುತ್ತಿದೆ. ಅಗತ್ಯ ಮುನ್ನೆಚ್ಚರಿಕೆಯೊಂದಿಗೆ ತಾಯಂದಿರಿಗೆ ಎದೆಹಾಲು ಉಣಿಸಲು ಅವಕಾಶ
ಮಾಡಿಕೊಡಲಾಗುತ್ತಿದೆ.

ಮಗು ಜನಿಸಿದ 24 ಗಂಟೆಗಳಿಂದ 48 ಗಂಟೆಗಳ ನಡುವೆ ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ವಾಣಿ ವಿಲಾಸ ಆಸ್ಪತ್ರೆಯಲ್ಲಿ ಕೋವಿಡ್ ಪೀಡಿತ 300 ಮಹಿಳೆಯರಿಗೆ ಹೆರಿಗೆ ಮಾಡಿಸಲಾಗಿದ್ದು, ಅದರಲ್ಲಿ 7 ಶಿಶುಗಳು ಕೋವಿಡ್‌ ಪೀಡಿತರಾಗಿರುವುದು ಪರೀಕ್ಷೆಯಿಂದ ದೃಢಪಟ್ಟಿದೆ. ಗೋಶಾ ಆಸ್ಪತ್ರೆಯಲ್ಲಿ 168 ಹೆರಿಗೆಗಳಲ್ಲಿ 15 ನವಜಾತ ಶಿಶುಗಳು, ಮದರ್‌ಹುಡ್ ಆಸ್ಪತ್ರೆಯಲ್ಲಿ 35 ಹೆರಿಗೆಗಳಲ್ಲಿ ಇಬ್ಬರು ಮಕ್ಕಳು ಹಾಗೂ ಫೋರ್ಟಿಸ್ ಲಾ ಫೆಮ್ಮೆ ಆಸ್ಪತ್ರೆಯಲ್ಲಿ 42 ಹೆರಿಗೆಗಳಲ್ಲಿ ಒಂದು ಶಿಶು ಸೋಂಕಿತವಾಗಿರುವುದು ಖಚಿತಪಟ್ಟಿದೆ.

ಕೋವಿಡ್‌ ಪ್ರಕರಣಗಳು ವರದಿಯಾದ ಪ್ರಾರಂಭಿಕ ದಿನಗಳಲ್ಲಿ ತಾಯಿ ಸೋಂಕಿತೆಯಾಗಿದ್ದಲ್ಲಿ ಎದೆಹಾಲನ್ನು ಸಂಗ್ರಹಿಸಿ, ಮಗುವಿಗೆ ನೀಡಲಾಗುತ್ತಿತ್ತು. ತಾಯಿ ಹಾಗೂ ಮಗುವನ್ನು ಕೆಲ ದಿನಗಳವರೆಗೆ ಬೇರ್ಪಡಿಸಲಾಗುತ್ತಿತ್ತು. ಈಗ ನೇರವಾಗಿ ಎದೆಹಾಲುಣಿಸಲು ಅವಕಾಶ ನೀಡಲಾಗಿದೆ. ಒಂದೇ ಕೊಠಡಿಯಲ್ಲಿ ತಾಯಿ ಮತ್ತು ಮಗು ಇರಬಹುದಾಗಿದ್ದು, ಅಂತರ ಕಾಯ್ದುಕೊಳ್ಳಬೇಕು ಎನ್ನುತ್ತಾರೆ ವೈದ್ಯರು.

ADVERTISEMENT

ಬನ್ನೇರುಘಟ್ಟ ರಸ್ತೆಯ ಅಪೋಲೊ ಆಸ್ಪತ್ರೆಯ ಡಾ. ಪ್ರಶಾಂತ್ ಎಸ್. ಅರಸ್, ‘ನಮ್ಮ ಆಸ್ಪತ್ರೆಯಲ್ಲಿ ಆರರಿಂದ ಏಳು ಕೋವಿಡ್ ಪೀಡಿತ ಮಹಿಳೆಯರಿಗೆ ಹೆರಿಗೆ ಮಾಡಿಸಲಾಗಿದೆ. ಇದರಲ್ಲಿ ಒಂದು ಮಗು ಅವಧಿಪೂರ್ಣ ಜನಿಸಿತ್ತು. ಶಿಶುಗಳಿಗೂ ಕೋವಿಡ್
ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಈ ವೈರಾಣು ಯಾವರೀತಿ ವರ್ತಿಸುತ್ತದೆ ಎನ್ನುವುದರ ಬಗ್ಗೆ ಯಾರಿಗೂ ಸ್ಪಷ್ಟತೆಯಿಲ್ಲ. ತಾಯಿ ಕೋವಿಡ್ ಪೀಡಿತೆಯಾದರೆ ಮಗುವಿನ ಕಾಳಜಿಯನ್ನು ಕುಟುಂಬದ ಸದಸ್ಯರು ಮಾಡಲಿದ್ದಾರೆ’ ಎಂದರು.

ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕಿ ಡಾ. ಅನಿತಾ ಜಿ.ಎಸ್., ‘ಗೋಶಾ ಆಸ್ಪತ್ರೆಯಲ್ಲಿ ನಾವು ತಾಯಿ ಮತ್ತು ಮಗುವನ್ನು ಬೇರ್ಪಡಿಸುತ್ತಿಲ್ಲ. ಟ್ರಾಮಾ ಕೇರ್ ಸೆಂಟರ್‌ನಲ್ಲಿ ತಾಯಿ ಮತ್ತು ಮಗುವನ್ನು ಬೇರ್ಪಡಿಸಲಾಗುತ್ತಿತ್ತು. ಆದರೆ, ಈಗ ತಾಯಿ ಮತ್ತು ಮಗುವಿಗೆ ಒಟ್ಟಿಗೆ ಇರಲು ಅವಕಾಶ ನೀಡಲಾಗುತ್ತಿದೆ. ನವಜಾತ ಶಿಶುಗಳಿಗೆ ಸ್ತನ್ಯಪಾನ ಅತ್ಯವಶ್ಯಕ’ ಎಂದು ತಿಳಿಸಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.