ADVERTISEMENT

ಕ್ರಿಕೆಟ್ ಲೀಗ್ ಹೆಸರಿನಲ್ಲಿ ವಂಚನೆ; ದೂರು

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2019, 20:55 IST
Last Updated 14 ಡಿಸೆಂಬರ್ 2019, 20:55 IST

ಬೆಂಗಳೂರು: ಕ್ರಿಕೆಟ್ ಲೀಗ್ ಹೆಸರಿನಲ್ಲಿ ಹಣ ಪಡೆದುಕೊಂಡು ಯುವ ಆಟಗಾರರನ್ನು ವಂಚಿಸಲಾಗಿದ್ದು, ಈ ಸಂಬಂಧ ಕೆಲ ಆಟಗಾರರು ಸಂಪಿಗೆಹಳ್ಳಿ ಠಾಣೆಗೆ ದೂರು ನೀಡಿದ್ದಾರೆ.

‘ಕ್ರಿಕೆಟ್‌ ಲೀಗ್‌ ನಡೆಸುವುದಾಗಿ ಹೇಳಿದ್ದ ಸಂಸ್ಥೆಯೊಂದು ತನ್ನ ವೆಬ್‌ಸೈಟ್‌ನಲ್ಲಿ ಜಾಹೀರಾತು ಪ್ರಕಟಿಸಿತ್ತು. ಲೀಗ್‌ನಲ್ಲಿ ಆಟಗಾರರನ್ನು ಆಯ್ಕೆ ಮಾಡಿಕೊಂಡು ರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಆಡಲು ಅವಕಾಶ ಮಾಡಿಕೊಡುವುದಾಗಿ ಭರವಸೆ ನೀಡಿತ್ತು’ ಎಂದು ಆಟಗಾರರೊಬ್ಬರು ಹೇಳಿದರು.

‘ಲೀಗ್‌ನಲ್ಲಿ ಪಾಲ್ಗೊಳ್ಳಲು ₹ 500 ಪ್ರವೇಶ ಶುಲ್ಕ ಹಾಗೂ ₹5,000 ನೋಂದಣಿ ಶುಲ್ಕ ನಿಗದಿ ಮಾಡಿತ್ತು. ಸಂಸ್ಥೆಯ ಜಾಹೀರಾತು ನೋಡಿದ್ದ ದೇಶದ ವಿವಿಧ ರಾಜ್ಯಗಳ 50ಕ್ಕೂ ಹೆಚ್ಚು ಆಟಗಾರರು ಹಣ ಪಾವತಿ ಮಾಡಿದ್ದರು.’

ADVERTISEMENT

‘ಆಟಗಾರರನ್ನು ಬೆಂಗಳೂರಿಗೆ ಕರೆಸಿದ್ದ ಸಂಸ್ಥೆ,ಸಂಪಿಗೆಹಳ್ಳಿಯ ಬ್ರಿಜೇಶ್ ಪಟೇಲ್ ಕ್ರಿಕೆಟ್ ಅಕಾಡೆಮಿ ಮೈದಾನದಲ್ಲಿ ಅರ್ಹತಾ ಪಂದ್ಯಗಳನ್ನು ನಡೆಸಿತ್ತು. ಯಾರನ್ನೂ ಆಯ್ಕೆ ಮಾಡದೇ ಇನ್ನೊಮ್ಮೆ ಶುಲ್ಕ ಪಾವತಿ ಮಾಡಿ ಬರುವಂತೆ ಸಂಸ್ಥೆಯ ಸಿಬ್ಬಂದಿ ಹೇಳಿದ್ದರು. ಸಂಸ್ಥೆಯ ವಂಚನೆ ಅರಿತ ಕೆಲ ಆಟಗಾರರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲೇ ತರಬೇತುದಾರರು ಪರಾರಿಯಾಗಿದ್ದಾರೆ’ ಎಂದು ಆಟಗಾರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.