ADVERTISEMENT

₹45 ಲಕ್ಷ ಮೌಲ್ಯದ ಚಿನ್ನಾಭರಣ ವಶ

ಏಳು ಮಂದಿ ಕಳವು ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 20 ಜನವರಿ 2021, 18:28 IST
Last Updated 20 ಜನವರಿ 2021, 18:28 IST
ಬಂಧಿತ ಆರೋಪಿಗಳು
ಬಂಧಿತ ಆರೋಪಿಗಳು   

ಬೆಂಗಳೂರು: ಬೀಗ ಹಾಕಿರುವ ಮನೆಗಳನ್ನು ಗುರುತಿಸಿ, ರಾತ್ರಿ ವೇಳೆ ಬಾಗಿಲು ಮುರಿದು ಚಿನ್ನಾಭರಣ ಹಾಗೂ ಇತರೆ ವಸ್ತುಗಳನ್ನು ಕದಿಯುತ್ತಿದ್ದ ಏಳು ಮಂದಿ ಆರೋಪಿಗಳನ್ನು ದಕ್ಷಿಣ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಅಬ್ರಾಹಂ (19), ಧನುಷ್ (22), ಕಾಂತರಾಜು (24), ಅನಂತರಾಜು (31), ಶೋಭಾ (39), ಕಾರ್ತಿಕ್‌ (21) ಹಾಗೂ ಗಗನ್ (22) ಬಂಧಿತ ಆರೋಪಿಗಳು.

ಬಂಧಿತರಿಂದ ಒಟ್ಟು ₹45 ಲಕ್ಷ ಬೆಲೆ ಬಾಳುವ 919 ಗ್ರಾಂ ಚಿನ್ನಾಭರಣ, ಒಂದು ದ್ವಿಚಕ್ರ ವಾಹನ, ಆಭರಣಗಳನ್ನು ತೂಗಲು ಬಳಸುತ್ತಿದ್ದ ಎಲೆಕ್ಟ್ರಾನಿಕ್ ತಕ್ಕಡಿಯನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಆರೋಪಿ ಅಬ್ರಾಹಂ ನೀಡಿದ ಮಾಹಿತಿಯಿಂದ ಉಳಿದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ADVERTISEMENT

‘ಆರೋಪಿಗಳು ಬೈಕ್‌ಗಳಲ್ಲಿ ರಾತ್ರಿ ವೇಳೆಯಲ್ಲಿ ನೈಟ್‌ಔಟ್‌ ನೆಪದಲ್ಲಿ ಮನೆಗಳ ಬಳಿ ಹೋಗುತ್ತಿದ್ದರು. ಮುಖ್ಯ ಬಾಗಿಲಿಗೆ ಹಾಕಲಾಗುವ ಪ್ಯಾಡ್‌ಲಾಕ್‌ಗಳನ್ನು ಗುರುತಿಸಿ, ಮನೆಗಳಲ್ಲಿ ಯಾರೂ ಇಲ್ಲದಿರುವುದನ್ನು ಖಚಿತ ಪಡಿಸಿಕೊಳ್ಳುತ್ತಿದ್ದರು. ಕಬ್ಬಿಣದ ಸಲಕರಣೆಯಿಂದ ಬಾಗಿಲು ಮೀಟಿ, ಕೃತ್ಯ ಎಸಗುತ್ತಿದ್ದರು.’

‘ಆರೋಪಿಗಳ ಬಂಧನದಿಂದ ಕೋಣನಕುಂಟೆ ಠಾಣೆಯಲ್ಲಿ ದಾಖಲಾಗಿದ್ದ ಎರಡು, ಅನ್ನಪೂರ್ಣೇಶ್ವರಿನಗರ, ಜ್ಞಾನಭಾರತಿ, ತಲಘಟ್ಟಪುರ, ಚಂದ್ರಾ ಬಡಾವಣೆ ಸೇರಿದಂತೆ ವಿವಿಧ ಠಾಣೆಗಳಲ್ಲಿ ಕನ್ನ ಕಳವು ಪ್ರಕರಣಗಳಲ್ಲೂ ಆರೋಪಿಗಳ ಕೈವಾಡ ಇರುವುದು ಬೆಳಕಿಗೆ ಬಂದಿದೆ. ತಂಡದಲ್ಲಿರುವ ವಿರುದ್ಧ ವಿವಿಧ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳಿವೆ’ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.