ಬೆಂಗಳೂರು: ದುಬೈನಿಂದ ಬಂದವಿಮಾನವೊಂದರಲ್ಲಿ ಪತ್ತೆಯಾದ 2.8 ಕೆ.ಜಿ ಚಿನ್ನವನ್ನು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
‘ವಿಮಾನ ನಿಲ್ದಾಣಕ್ಕೆ ದುಬೈನಿಂದ ಮಂಗಳವಾರ ಬಂದಿದ್ದ ಇಂಡಿಗೊ ವಿಮಾನದಲ್ಲಿ ಅಧಿಕಾರಿಗಳು ತಪಾಸಣೆ ನಡೆಸಿದಾಗ ಬ್ಯಾಗ್‌ವೊಂದು ಪತ್ತೆಯಾಗಿತ್ತು. ಪ್ರಯಾಣಿಕರ ಸೀಟಿನ ಕೆಳಗೆ ಬ್ಯಾಗ್ ಅನ್ನು ವ್ಯವಸ್ಥಿತವಾಗಿ ಅಡಗಿಸಿ ಇಡಲಾಗಿತ್ತು. ಬ್ಯಾಗ್ ತೆರೆದಾಗ ಅದರಲ್ಲಿ ಬಿಸ್ಕತ್ತುಗಳ ರೂಪದಲ್ಲಿದ್ದಚಿನ್ನ ತುಂಬಿಸಿರುವುದು ಪತ್ತೆಯಾಯಿತು. ಇದರ ಮೌಲ್ಯ ಸುಮಾರು ₹1.37 ಕೋಟಿ ಇರಬಹುದು’ ಎಂದು ಮೂಲಗಳು ತಿಳಿಸಿವೆ.
‘ವಿಮಾನ ನಿಲ್ದಾಣದಲ್ಲಿರುವ ಬಿಗಿ ಭದ್ರತೆಗೆ ಹೆದರಿ, ಬ್ಯಾಗ್ ಅನ್ನು ವಿಮಾನದಲ್ಲೇ ಬಿಟ್ಟು ಹೋಗಿರುವ ಸಾಧ್ಯತೆ ಇದೆ. ಕಳ್ಳಸಾಗಣೆ ಗುಂಪಿನವರು ಬಂದು ತೆಗೆದುಕೊಂಡು ಹೋಗುವ ಉದ್ದೇಶದಿಂದಲೂ ಸೀಟಿನ ಕೆಳಗೆ ಬ್ಯಾಗ್ ಇಟ್ಟಿರಬಹುದು.ವಿದೇಶದಿಂದ ಬರುವ ವಿಮಾನಗಳಲ್ಲಿ ಚಿನ್ನದ ಕಳ್ಳಸಾಗಣೆ ಮಾಡುತ್ತಿರುವ ಅನುಮಾನ ವ್ಯಕ್ತವಾಗಿದ್ದು, ಈ ವಿಮಾನದಲ್ಲಿ ಪ್ರಯಾಣಿಸಿದವರ ಮಾಹಿತಿ ಕಲೆಹಾಕಲಾಗುತ್ತಿದೆ’ ಎಂದೂ ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.