ADVERTISEMENT

ಹನಿಟ್ರ್ಯಾಪ್: ಯುವತಿ ಜೊತೆ ವಿಡಿಯೊ ಚಿತ್ರೀಕರಿಸಿ ಸುಲಿಗೆ, ಆರೋಪಿಗಳ ಬಂಧನ

ಸುದ್ದಗುಂಟೆಪಾಳ್ಯ ಠಾಣೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2022, 19:31 IST
Last Updated 6 ನವೆಂಬರ್ 2022, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಹಾಲು ಉತ್ಪನ್ನ ಮಾರಾಟ ಮಳಿಗೆ ಮಾಲೀಕರೊಬ್ಬರನ್ನು ಹನಿಟ್ರ್ಯಾಪ್‌ ಜಾಲಕ್ಕೆ ಸಿಲುಕಿಸಿ ಹಣ ಹಾಗೂ ಕಾರು ಸುಲಿಗೆ ಮಾಡಿದ್ದ ಆರೋಪದಡಿ ಯುವತಿ ಸೇರಿ ಐವರನ್ನು ಸುದ್ದಗುಂಟೆಪಾಳ್ಯ ಪೊಲೀಸರು ಬಂಧಿಸಿದ್ದಾರೆ.

ಹಲೀಮಾ ಸಾದಿಯಾ ಅಲಿಯಾಸ್ ಪ್ರಿಯಾ, ಜಾಹೀದ್ ಖುರೇಷಿ, ಸೈಯ್ಯದ್ ಮುತಾಹೀರ್, ಫರ್ಹಾನ್ ಖಾನ್ ಹಾಗೂ ಇಸ್ಮಾಯಿಲ್ ಬಂಧಿತರು.

‘32 ವರ್ಷದ ದೂರುದಾರ, ಸಾಮಾಜಿಕ ಮಾಧ್ಯಮದಲ್ಲಿ ಖಾತೆ ಹೊಂದಿದ್ದ. ಪ್ರಿಯಾ ಹೆಸರಿನಲ್ಲಿ ಸಂದೇಶ ಕಳುಹಿಸಿದ್ದ ಆರೋಪಿ ಹಲೀಮಾ, ಸ್ನೇಹ ಬೆಳೆಸಿದ್ದಳು. ಆತ್ಮಿಯವಾಗಿ ಮಾತನಾಡಿದ್ದಳು. ದೂರುದಾರ ಸಹ ಸಲುಗೆಯಿಂದ ಮಾತನಾಡಿದ್ದರು’ ಎಂದು ಪೊಲೀಸರು ಹೇಳಿದರು.

ADVERTISEMENT

‘ನನ್ನ ಮನೆಯಲ್ಲಿ ಯಾರೂ ಇಲ್ಲ. ನಿಮ್ಮನ್ನು ಭೇಟಿಯಾಗಬೇಕು. ಮನೆಗೆ ಬನ್ನಿ’ ಎಂಬುದಾಗಿ ಆರೋಪಿ ಹಲೀಮಾ ಅ 28ರಂದು ಸಂದೇಶ ಕಳುಹಿಸಿದ್ದಳು. ಇದನ್ನು ನಂಬಿದ್ದ ದೂರುದಾರ, ಯುವತಿ ಹೇಳಿದ್ದ ಗುರಪ್ಪನಪಾಳ್ಯದಲ್ಲಿರುವ ವಿಳಾಸಕ್ಕೆ ಹೋಗಿದ್ದರು’ ಎಂದು ತಿಳಿಸಿದರು.

‘ದೂರುದಾರರನ್ನು ಮನೆಯೊಳಗೆ ಬರಮಾಡಿಕೊಂಡಿದ್ದ ಯುವತಿ, ಕೊಠಡಿಯೊಳಗೆ ಕರೆದೊಯ್ದಿದ್ದಳು. ಅದೇ ಸಂದರ್ಭದಲ್ಲೇ ಇತರೆ ಆರೋಪಿಗಳು ಕೊಠಡಿಗೆ ಬಂದಿದ್ದರು. ದೂರುದಾರರನ್ನು ಒತ್ತಾಯದಿಂದ ಯುವತಿ ಪಕ್ಕದಲ್ಲಿ ಕೂರಿಸಿ ಸಲುಗೆ ರೀತಿಯಲ್ಲಿ ವಿಡಿಯೊ ಚಿತ್ರೀಕರಿಸಿದ್ದರು. ನಂತರ, ₹ 1 ಲಕ್ಷ ಹಣ ನೀಡುವಂತೆ ಒತ್ತಾಯಿಸಿದ್ದರು. ಹಣ ನೀಡದಿದ್ದರೆ ವಿಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್ ಮಾಡುವುದಾಗಿ ಬೆದರಿಸಿದ್ದರು’ ಎಂದು ಪೊಲೀಸರು ಹೇಳಿದರು.

‘ದೂರುದಾರ ಬಳಿಯ ₹ 26 ಸಾವಿರ ನಗದು ಹಾಗೂ ಮೊಬೈಲ್‌ನ್ನು ಆರೋಪಿಗಳು ಕಿತ್ತುಕೊಂಡಿದ್ದರು. ದೂರುದಾರರ ಸಹೋದರಿಂದ ₹ 25 ಸಾವಿರ ಯುಪಿಐ ಮೂಲಕ ಹಾಕಿಸಿಕೊಂಡು, ಅದನ್ನೂ ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದರು. ನಂತರ, ದೂರುದಾರರ ಕಾರು ಸಮೇತ ಆರೋಪಿಗಳು ಪರಾರಿಯಾಗಿದ್ದರು. ಕೆಲ ಹೊತ್ತಿನ ನಂತರ ಕರೆ ಮಾಡಿದ್ದ ಆರೋಪಿಗಳು, ಕಾರು ವಾಪಸು ನೀಡಲು ₹ 60 ಸಾವಿರ ನೀಡುವಂತೆ ಒತ್ತಾಯಿಸಿದ್ದರು. ಬೇಸತ್ತ ದೂರುದಾರ, ಠಾಣೆಗೆ ಬಂದು ವಿಷಯ ತಿಳಿಸಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಯುವತಿಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ಇತರೆ ಆರೋಪಿಗಳು ಸಿಕ್ಕಿಬಿದ್ದರು. ಇದೇ ಆರೋಪಿಗಳು ಮತ್ತಷ್ಟು ಮಂದಿಯನ್ನು ಹನಿಟ್ರ್ಯಾಪ್ ಜಾಲಕ್ಕೆ ಬೀಳಿಸಿ ಹಣ ಸುಲಿಗೆ ಮಾಡಿರುವ ಮಾಹಿತಿ ಇದ್ದು, ತನಿಖೆ ಮುಂದುವರಿಸಲಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.