ADVERTISEMENT

ಪಿಸ್ತೂಲ್ ಮಾರಾಟ ದಂಧೆ:ನಾಲ್ಕು ಮಂದಿ ಬಂಧನ

ಬಿಹಾರದಿಂದ ತಂದು ಅಕ್ರಮ ಮಾರಾಟ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2021, 18:11 IST
Last Updated 11 ಆಗಸ್ಟ್ 2021, 18:11 IST
ಆರೋಪಿಗಳಿಂದ ಜಪ್ತಿ ಮಾಡಲಾದ ನಾಡ ಪಿಸ್ತೂಲ್‌ ಹಾಗೂ ಜೀವಂತ ಗುಂಡುಗಳು
ಆರೋಪಿಗಳಿಂದ ಜಪ್ತಿ ಮಾಡಲಾದ ನಾಡ ಪಿಸ್ತೂಲ್‌ ಹಾಗೂ ಜೀವಂತ ಗುಂಡುಗಳು   

ಬೆಂಗಳೂರು: ಹೊರ ರಾಜ್ಯದಿಂದ ನಾಡ ಪಿಸ್ತೂಲ್ ತಂದು ನಗರದಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಆರೋಪದಡಿ ನಾಲ್ಕು ಮಂದಿ ಆರೋಪಿಗಳನ್ನು ಅಶೋಕನಗರ ಪೊಲೀಸರು ಬಂಧಿಸಿದ್ದಾರೆ.

ರಾಮನಾಯಕನಹಳ್ಳಿ ಸೋನು ಕುಮಾರ್ (32), ಕಣ್ಣೂರಿನ ಸುನಿಲ್ ಕುಮಾರ್ (32), ಥಣಿಸಂದ್ರದ ಇರ್ಫಾನ್ (26) ಹಾಗೂ ಆಂಧ್ರ ಪ್ರದೇಶದ ಮದನಪಲ್ಲಿಯ ಮುರಳಿ ವಿನೋದ್ (47) ಬಂಧಿತರು.

‘ಅಶೋಕನಗರ ಠಾಣಾ ವ್ಯಾಪ್ತಿಯ ಹೊಸೂರು ರಸ್ತೆಯಲ್ಲಿರುವ ಸ್ಮಶಾನವೊಂದರ ಸಮೀಪ ಆರೋಪಿಗಳು ಪಿಸ್ತೂಲ್ ಮಾರಾಟ ಮಾಡುತ್ತಿದ್ದ ಮಾಹಿತಿ ಲಭ್ಯವಾಗಿತ್ತು. ಸ್ಥಳಕ್ಕೆ ತೆರಳಿ ದಾಳಿ ನಡೆಸಿದಾಗಆರೋಪಿಗಳು ಸಿಕ್ಕಿಬಿದ್ದರು. ಬಂಧಿತರಿಂದ ಎರಡು ನಾಡ ಪಿಸ್ತೂಲ್, ಐದು ಜೀವಂತ ಗುಂಡುಗಳು, ಎರಡು ಬೈಕ್ ಹಾಗೂ ಐದು ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ತಿಳಿಸಿದರು.

ADVERTISEMENT

‘ಸೋನುಕುಮಾರ್, ಸುನಿಲ್ ಹಾಗೂ ಇರ್ಫಾನ್ ಬಿಹಾರದ ಸುಲ್ತಾನ್‌ಗಂಜ್‌ ವ್ಯಕ್ತಿಯೊಬ್ಬನಿಂದ ಪಿಸ್ತೂಲ್ ಖರೀದಿಸಿ, ಬೆಂಗಳೂರಿನಲ್ಲಿ ಅಕ್ರಮವಾಗಿ ಮಾರಾಟ ಮಾಡುವ ದಂಧೆ ನಡೆಸುತ್ತಿದ್ದರು. ರೌಡಿ ಚಟುವಟಿಕೆಗಳಲ್ಲಿ ತೊಡಗುವ ವ್ಯಕ್ತಿಗಳಿಗೆ ಪಿಸ್ತೂಲ್‌ಗಳನ್ನು ಪೂರೈಕೆ ಮಾಡುತ್ತಿದ್ದರು’ ಎಂದು ವಿವರಿಸಿದರು.

‘ಆರೋಪಿಮುರಳಿ ಇವರಿಂದ ಪಿಸ್ತೂಲ್ ಹಾಗೂ ಐದು ಜೀವಂತ ಗುಂಡುಗಳನ್ನು ಖರೀದಿಸಿ, ಅಕ್ರಮವಾಗಿ ಇಟ್ಟುಕೊಂಡಿದ್ದ. ಹಾಗಾಗಿ, ನಾಲ್ವರನ್ನೂ ಬಂಧಿಸಿ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು, ಪತ್ತೆ ಕಾರ್ಯ ಮುಂದುವರಿದಿದೆ’ ಎಂದೂ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.