
ಬೆಂಗಳೂರು: ಹದಿನೈದು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಆರೋಪಿಗಳಾದ ಮನೋಜ್ (29) ಹಾಗೂ ಸುರೇಶ್ (25) ಎಂಬುವರನ್ನು ವಿಲ್ಸನ್ ಗಾರ್ಡನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ಮಂಡ್ಯ ಜಿಲ್ಲೆಯ ಮನೋಜ್, ರಾಜ್ಯಮಟ್ಟದ ಸುದ್ದಿವಾಹಿನಿಯೊಂದರ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ. ಸ್ನೇಹಿತ ಸುರೇಶ್ ಸಹಾಯದಿಂದ ಕೃತ್ಯ ಎಸಗಿದ್ದ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ (ಪೋಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಇಬ್ಬರನ್ನೂ ಬಂಧಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘10ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕಿಯನ್ನು ಆರೋಪಿ ಮನೋಜ್ ಪರಿಚಯ ಮಾಡಿಕೊಂಡಿದ್ದ. ಸ್ನೇಹ ಬೆಳೆಸಿ, ಆಗಾಗ ಭೇಟಿಯಾಗುತ್ತಿದ್ದ. ಕನಕಪುರದ ಕಬ್ಬಾಳಮ್ಮ ದೇವಸ್ಥಾನಕ್ಕೆ ಹೋಗೋಣವೆಂದು ಬಾಲಕಿಯನ್ನು ಪುಸಲಾಯಿಸಿದ್ದ. ಆತನ ಮಾತು ನಂಬಿದ್ದ ಬಾಲಕಿ, ದೇವಸ್ಥಾನಕ್ಕೆ ಹೋಗಲು ಒಪ್ಪಿದ್ದಳು.’
‘ಆಗಸ್ಟ್ 26ರಂದು ಆರೋಪಿ ಬಾಲಕಿಯನ್ನು ತನ್ನ ಬಳಿ ಕರೆಸಿಕೊಂಡಿದ್ದ. ದೇವಸ್ಥಾನಕ್ಕೆ ತೆರಳದ ಆರೋಪಿ, ಬನ್ನೇರುಘಟ್ಟ ಬಳಿಯ ಮನೆಯೊಂದಕ್ಕೆ ಬಾಲಕಿಯನ್ನು ಕರೆದೊಯ್ದಿದ್ದ. ಅದೇ ಮನೆಯಲ್ಲೇ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಸಂಜೆಯಾದರೂ ಬಾಲಕಿ ಮನೆಗೆ ವಾಪಸು ಹೋಗಿರಲಿಲ್ಲ. ಗಾಬರಿಗೊಂಡ ಪೋಷಕರು, ಬಾಲಕಿ ನಾಪತ್ತೆ ಬಗ್ಗೆ ಠಾಣೆಗೆ ದೂರು ನೀಡಿದ್ದರು’ ಎಂದೂ ಮೂಲಗಳು ತಿಳಿಸಿವೆ.
‘ಅಪಹರಣ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ, ಬಾಲಕಿಯನ್ನು ಪತ್ತೆ ಮಾಡಲಾಯಿತು. ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದಾಗಿ ಬಾಲಕಿ ಹೇಳಿಕೆ ನೀಡಿದ್ದಾಳೆ. ಹೀಗಾಗಿ, ಪೋಕ್ಸೊ ಕಾಯ್ದೆಯಡಿ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದೂ ಪೊಲೀಸ್ ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.