ಬೆಂಗಳೂರು: ರಸ್ತೆಯಲ್ಲಿ ನಡೆದುಕೊಂಡು ಹೊರಟಿದ್ದ ಮಹಿಳೆಯೊಬ್ಬರನ್ನು ಎಳೆದೊಯ್ದು ಅತ್ಯಾಚಾರವೆಸಗಿ ಕೊಲೆ ಮಾಡಲಾಗಿದ್ದು, ಆರೋಪಿ ಸಚಿನ್ ಅಲಿಯಾಸ್ ಕರಣ್‌ನನ್ನು (19) ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
‘55 ವರ್ಷದ ಮಹಿಳೆಯೊಬ್ಬರನ್ನು ಅತ್ಯಾಚಾರವೆಸಗಿ ಕೊಲೆ ಮಾಡಲಾಗಿದೆ. ಮಹಿಳೆಯ ಪುತ್ರಿ ನೀಡಿರುವ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿ ಉತ್ತರ ಪ್ರದೇಶದ ಸಚಿನ್‌ನನ್ನು ಸೆರೆ ಹಿಡಿಯಲಾಗಿದೆ’ ಎಂದು ಪೊಲೀಸರು ಹೇಳಿದರು.
‘ರಾಯಚೂರು ಜಿಲ್ಲೆಯ ದೇವದುರ್ಗದ 55 ವರ್ಷದ ಮಹಿಳೆ, ಮಕ್ಕಳ ಜೊತೆ ನಗರಕ್ಕೆ ಬಂದಿದ್ದರು. ಅಮೃತಹಳ್ಳಿಯ ವರದರಾಜು ಬಡಾವಣೆಯಲ್ಲಿರುವ ಶೆಡ್‌ನಲ್ಲಿ ನೆಲೆಸಿದ್ದರು. ಮಕ್ಕಳು ಕೆಲಸಕ್ಕೆ ಹೋಗುತ್ತಿದ್ದರು. ಮಹಿಳೆ, ಮನೆಯಲ್ಲಿ ಇರುತ್ತಿದ್ದರು’ ಎಂದು ತಿಳಿಸಿದರು.
‘ಆರೋಪಿ ಸಚಿನ್, ಮೂರು ವರ್ಷಗಳ ಹಿಂದೆಯೇ ನಗರಕ್ಕೆ ಬಂದಿದ್ದ. ಜಕ್ಕೂರಿನಲ್ಲಿ ನೆಲೆಸಿದ್ದ. ಟೈಲ್ಸ್ ಜೋಡಣೆ ಹಾಗೂ ಪೇಟಿಂಗ್ ಕೆಲಸ ಮಾಡುತ್ತಿದ್ದ’ ಎಂದರು.
ಬಾರ್‌ಗೆ ಹೋಗಿದ್ದ ಮಹಿಳೆ: ‘ಆರೋಪಿ ಸಚಿನ್, ಮದ್ಯವ್ಯಸನಿ. ಏಪ್ರಿಲ್ 2ರಂದು ರಾತ್ರಿ ಬಾರ್‌ಗೆ ಹೋಗಿದ್ದ. ಆಗಾಗ ಮದ್ಯ ಕುಡಿಯುತ್ತಿದ್ದ ಮಹಿಳೆ ಸಹ ಬಾರ್‌ಗೆ ಹೋಗಿದ್ದರು. ಮದ್ಯ ಕುಡಿದು ಕೆಲ ನಿಮಿಷಗಳ ನಂತರ ಮಹಿಳೆ ಬಾರ್‌ನಿಂದ ಹೊರಗೆ ಬಂದಿದ್ದರು. ನಂತರ, ಮನೆಯತ್ತ ನಡೆದುಕೊಂಡು ಹೊರಟಿದ್ದರು. ಅವರನ್ನು ನೋಡಿದ್ದ ಆರೋಪಿ ಸಚಿನ್, ರಸ್ತೆಯಲ್ಲಿ ಹಿಂಬಾಲಿಸಲಾರಂಭಿಸಿದ್ದ’ ಎಂದು ಪೊಲೀಸರು ಹೇಳಿದರು.
‘ವರದರಾಜು ಬಡಾವಣೆಯ 8ನೇ ಅಡ್ಡರಸ್ತೆಯಲ್ಲಿ ಮಹಿಳೆಯನ್ನು ಅಡ್ಡಗಟ್ಟಿದ್ದ ಆರೋಪಿ, ಸಮೀಪದಲ್ಲಿದ್ದ ನಿರ್ಮಾಣ ಹಂತದ ಕಟ್ಟಡಕ್ಕೆ ಎಳೆದೊಯ್ದಿದ್ದ. ಅಲ್ಲಿಯೇ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದ. ನಂತರ, ಮಹಿಳೆಯ ಮುಖ ಹಾಗೂ ದೇಹದ ಇತರೆ ಭಾಗಗಳಿಗೆ ಕಲ್ಲಿನಿಂದ ಹೊಡೆದಿದ್ದ. ತೀವ್ರ ಗಾಯಗೊಂಡು ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದರು. ಆರೋಪಿ ಸ್ಥಳದಿಂದ ಪರಾರಿಯಾಗಿದ್ದ’ ಎಂದು ತಿಳಿಸಿದರು.
ಹುಡುಕಾಡಿದ್ದ ಕುಟುಂಬಸ್ಥರು: ‘ಮನೆಯಿಂದ ಹೊರಗೆ ಬಂದಿದ್ದ ಮಹಿಳೆ, ವಾಪಸು ಹೋಗಿರಲಿಲ್ಲ. ಆತಂಕಗೊಂಡಿದ್ದ ಕುಟುಂಬಸ್ಥರು, ಹಲವೆಡೆ ಹುಡುಕಾಡಿದ್ದರು. ಯಾವುದೇ ಸುಳಿವು ಸಿಕ್ಕಿರಲಿಲ್ಲ’ ಎಂದು ಪೊಲೀಸರು ಹೇಳಿದರು.
‘ನಿರ್ಮಾಣ ಹಂತದ ಕಟ್ಟಡದಲ್ಲಿ ಏಪ್ರಿಲ್ 3ರಂದು ಮಹಿಳೆಯ ಮೃತದೇಹ ಸಿಕ್ಕಿತ್ತು. ಕುಟುಂಬಸ್ಥರು ಮಹಿಳೆಯ ಗುರುತು ಪತ್ತೆ ಮಾಡಿದ್ದರು. ನಂತರ, ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿತ್ತು. ಕೆಲ ಪುರಾವೆಗಳನ್ನು ಸಂಗ್ರಹಿಸಿ 24 ಗಂಟೆಯೊಳಗೆ ಆರೋಪಿಯನ್ನು ಬಂಧಿಸಲಾಗಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.