ADVERTISEMENT

₹ 10 ಲಕ್ಷ ಕಮಿಷನ್‌ಗೆ ಆಸೆ ಪಟ್ಟು ಸಿಕ್ಕಿಬಿದ್ದರು

ಎಟಿಎಂಗೆ ತುಂಬಲು ಹಣ ಕೊಂಡೊಯ್ಯುತ್ತಿದ್ದವರೇ ಆರೋಪಿಗಳು

​ಪ್ರಜಾವಾಣಿ ವಾರ್ತೆ
Published 18 ಮೇ 2020, 20:47 IST
Last Updated 18 ಮೇ 2020, 20:47 IST

ಬೆಂಗಳೂರು: ಎಟಿಎಂಗೆ ತುಂಬಲು ಕೊಂಡೊಯ್ಯುತ್ತಿದ್ದ ಹಣ ಲಪಟಾಯಿಸಿ ₹ 10 ಲಕ್ಷ ಕಮಿಷನ್‌ ಪಡೆಯಬಹುದೆಂಬ ಆಸೆ ಪಟ್ಟು ವಂಚಿಸಿದ್ದ ಮೂವರನ್ನು ಕಬ್ಬನ್‌ ಪಾರ್ಕ್‌ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಅಶೋಕ್, ಶ್ರೀನಿವಾಸ್ ಮತ್ತು ಸಂತೋಷ್ ಪೊಲೀಸರ ಬಲೆಗೆ ಬಿದ್ದವರು. ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ರಾಮುಗಾಗಿ ಹುಡು
ಕಾಟ ನಡೆಸುತ್ತಿದ್ದಾರೆ. ಸಂತೋಷ್‌ ಹೊರತುಪಡಿಸಿ ಉಳಿದವರು ಎಟಿಎಂಗೆ ಹಣ ತುಂಬಿಸುವ ಸೆಕ್ಯೂರ್ ವ್ಯಾಲ್ಯೂ ಇಂಡಿಯಾ ಕಂಪನಿಯ ನೌಕರರು.

‘ಎಟಿಎಂಗಳಿಗೆ ತುಂಬಲು ಅಶೋಕ್‌, ರಾಮು ಮತ್ತು ಶ್ರೀನಿವಾಸ್ ಮೇ 14ರಂದು ಸೈಂಟ್‌ ಮಾರ್ಕ್ಸ್‌ ರಸ್ತೆಯಲ್ಲಿರುವ ಎಸ್‌ಬಿಐ ಬ್ಯಾಂಕಿನಿಂದ ₹ 4.5 ಕೋಟಿ ಡ್ರಾ ಮಾಡಿದ್ದರು. ಈ ಹಣದಲ್ಲಿ ₹ 3.5 ಕೋಟಿಯನ್ನು ರಾಮು ಮತ್ತು ಶ್ರೀನಿವಾಸ್‌ ಅವರ ಬಳಿ ನೀಡಿದ್ದ ಅಶೋಕ, ₹ 1 ಕೋಟಿ ಸಮೇತ ಪರಾರಿಯಾಗಿದ್ದಾನೆ’ ಎಂದು ಕಂಪನಿಯ ವ್ಯವಸ್ಥಾಪಕ ರಾಜು ಕಬ್ಬನ್‌ ಪಾರ್ಕ್‌ ಠಾಣೆಯಲ್ಲಿ ಮೇ 14ರಂದು ದೂರು ನೀಡಿದ್ದರು.

ADVERTISEMENT

‘ದೂರು ದಾಖಲಾಗುತ್ತಿದ್ದಂತೆ ಅಶೋಕ್ ಮತ್ತು ಶ್ರೀನಿವಾಸ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು. ಆಗ ಕಮಿಷನ್ ಆಸೆಯಿಂದ ಸಂತೋಷ್‌ ಎಂಬಾತನಿಗೆ ಹಣ ನೀಡಿರುವ ಮಾಹಿತಿ ಸಿಕ್ಕಿತು’ ಎಂದು ಪೊಲೀಸರು ತಿಳಿಸಿದರು.

‘ನನಗೆ ₹ 1 ಕೋಟಿ ನೀಡಿದರೆ ಒಂದು ಗಂಟೆಯಲ್ಲಿ ₹ 10 ಲಕ್ಷ ಸೇರಿಸಿ ₹ 1.10 ಕೋಟಿ ವಾಪಸು ನೀಡುತ್ತೇನೆ’ ಎಂದು ಸಂತೋಷ್‌ ಎಂಬಾತ ಅಶೋಕ್‌ನನ್ನು ಪುಸಲಾಯಿಸಿದ್ದ. ₹ 10 ಲಕ್ಷ ಕಮಿಷನ್ ಆಸೆಗೆ ಬಿದ್ದ ಆರೋಪಿಗಳು, ಸಂತೋಷ್‌ಗೆ ₹ 1 ಕೋಟಿ ಕೊಟ್ಟಿದ್ದರು. ಹಣ ಪಡೆದ ಬಳಿಕ ಸಂತೋಷ್ ಪರಾರಿಯಾಗಿದ್ದ. ತನ್ನ ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡಿದ್ದ. ಅರ್ಧ ದಿನ ಕಳೆದರೂ ಸಂತೋಷ್ ಪತ್ತೆಯಾಗಿರಲಿಲ್ಲ. ಈ ಮಧ್ಯೆ, ಕಂಪನಿಯ ವ್ಯವಸ್ಥಾಪಕ ದೂರು ನೀಡಿದ್ದರು.

ಮೊಬೈಲ್‌ ಕರೆ ಆಧರಿಸಿ ಸಂತೋಷ್‌ನನ್ನು ವಶಕ್ಕೆ ಪಡೆದು ₹ 1 ಕೋಟಿ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.