ADVERTISEMENT

ಸಿ.ಟಿ.ರವಿ ವಿರುದ್ಧದ ಪ್ರಕರಣ ರದ್ದುಗೊಳಿಸಲು ಹೈಕೋರ್ಟ್‌ ನಕಾರ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2019, 19:34 IST
Last Updated 3 ಏಪ್ರಿಲ್ 2019, 19:34 IST

ಬೆಂಗಳೂರು: ‘ಮರಳು ಪರವಾನಗಿ ನೀಡಿಕೆಯಲ್ಲಿ, ಜಿಲ್ಲಾಡಳಿತ ಪಕ್ಷಪಾತ ಎಸಗಿದೆ’ ಎಂದು ಆಕ್ಷೇಪಿಸಿ ಚಿಕ್ಕಮಗಳೂರಿನ ಜಿಲ್ಲಾಧಿಕಾರಿ ಕಚೇರಿಗೆ ನುಗ್ಗಿ ದಾಂದಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಶಾಸಕ ಸಿ.ಟಿ. ರವಿ ವಿರುದ್ಧದ ಪ್ರಕರಣ ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ.

ಈ ಕುರಿತಂತೆ ರವಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

‘ಈಗಾಗಲೇ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿರುವ ಕಾರಣ, ಪ್ರಕರಣದ ವಿಚಾರಣೆ ನಡೆಸುತ್ತಿರುವ ವಿಶೇಷ ನ್ಯಾಯಾಲಯದಲ್ಲೇ ಈ ಕುರಿತು ಅರ್ಜಿ ಸಲ್ಲಿಸಿ ಪರಿಹಾರ ಪಡೆಯಿರಿ’ ಎಂದು ನ್ಯಾಯಪೀಠ ಅರ್ಜಿದಾರರಿಗೆ ಸೂಚಿಸಿದೆ. ರವಿ ಪರ ವಕೀಲ ಎಂ.ಅರುಣ್ ಶ್ಯಾಮ್‌ ಹಾಜರಿದ್ದರು.

ADVERTISEMENT

ಮೂಢನಂಬಿಕೆ ಹೋಗಲಾಡಿಸಲು ಪಣತೊಡಿ: ಸಿದ್ಧಲಿಂಗಯ್ಯ

‘ಶಿಕ್ಷಕರು ಜಾತಿ-ಧರ್ಮ ಪರಿಗಣಿಸದೆ, ಹಳ್ಳಿಯ ಮತ್ತು ಕಷ್ಟದಲ್ಲಿರುವ ಮಹಿಳೆಯರಿಗೆ ಶಿಕ್ಷಣಕೊಡುತ್ತೇವೆ, ಮೂಢನಂಬಿಕೆಗಳನ್ನು ಹೋಗಲಾಡಿಸುತ್ತೇವೆ ಎಂಬ ಪಣ ತೊಡಬೇಕು’ ಎಂದು ಕವಿ ಡಾ. ಸಿದ್ಧಲಿಂಗಯ್ಯ ಹೇಳಿದರು.

ಸಹಕಾರ ನಗರದಲ್ಲಿನ ಕಾವೇರಿ ಬಿ.ಇಡಿ ಕಾಲೇಜಿನಲ್ಲಿ ತರಬೇತಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಕನ್ನಡ ಉಳಿಸುವ ಮತ್ತು ಕರ್ನಾಟಕವನ್ನು ಬೆಳೆಸುವುದರಲ್ಲಿ ಶಿಕ್ಷಕರ ಪಾತ್ರ ದೊಡ್ಡದಿದೆ. ಕನ್ನಡ ಭಾಷೆ, ಸಂಸ್ಕೃತಿ ಮತ್ತು ಪರಂಪರೆ ಬಗ್ಗೆ ಹೆಮ್ಮೆ ಇಟ್ಟುಕೊಂಡು, ಅದನ್ನು ಮಕ್ಕಳಲ್ಲೂ ಬೆಳೆಸುವುದು ನಿಮ್ಮ ಕರ್ತವ್ಯ’ ಎಂದರು.

ಕಾವೇರಿ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಬಿ.ಎಂ.ದೇವರಾಜಪ್ಪ ಮಾತನಾಡಿ, ವೃತ್ತಿಯಲ್ಲಿ ಶಿಸ್ತು, ಬದ್ಧತೆ ಮತ್ತು ಅರ್ಪಣಾ ಮನೋಭಾವ ಬೆಳೆಸಿಳ್ಳುವಂತೆ ತಿಳಿಸಿದರು.

ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಪ್ರಾಂಶುಪಾಲ ಇ.ಬಿ.ರಾಜೇಶ್ ಇದ್ದರು.

**

ಶಿಕ್ಷಕರು ಜಾತಿ-ಧರ್ಮಗಳನ್ನು ಪರಿಗಣಿಸದೆ, ಹಳ್ಳಿಗಾಡಿನ ಮತ್ತು ಕೆಳವರ್ಗದ ಕಷ್ಟದಲ್ಲಿರುವ ಮಹಿಳೆಯರಿಗೆ ಶಿಕ್ಷಣಕೊಟ್ಟು, ಅರಿವನ್ನು ಮೂಡಿಸುವುದರ ಜೊತೆಗೆ ಮೂಢನಂಬಿಕೆಗಳಿಂದ ಅವರನ್ನು ಮುಕ್ತಗೊಳಿಸುವಲ್ಲಿ ಕೊಡುಗೆ ನೀಡುತ್ತೇವೆಂಬ ದೀಕ್ಷೆ ತೊಡಬೇಕು.
- ಕವಿ ಡಾ.ಸಿದ್ದ ಲಿಂಗಯ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.