ADVERTISEMENT

ಕಬ್ಬನ್‌ ಉದ್ಯಾನ: ಆಕ್ರಮಣಕಾರಿ ಶ್ವಾನಗಳಿಗೆ ಪ್ರವೇಶ ನಿರ್ಬಂಧ

ತೋಟಗಾರಿಕೆ ಇಲಾಖೆಯಿಂದ ಮಾರ್ಗಸೂಚಿ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2021, 20:28 IST
Last Updated 17 ಡಿಸೆಂಬರ್ 2021, 20:28 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಆಕ್ರಮಣಕಾರಿ ಪ್ರವೃತ್ತಿಯ ಹಾಗೂ ದೊಡ್ಡ ಗಾತ್ರದ ಸಾಕು ನಾಯಿಗಳನ್ನು ಇನ್ನು ಮುಂದೆ ಕಬ್ಬನ್‌ ಉದ್ಯಾನಕ್ಕೆ ಕರೆತರುವಂತಿಲ್ಲ. ಉದ್ಯಾನಕ್ಕೆ ಸಾಕು ‍ಪ್ರಾಣಿಗಳನ್ನು ಕರೆತರುವವರು ಕಡ್ಡಾಯವಾಗಿ ಅನುಸರಿಸಬೇಕಾದ ನಿಯಮಗಳ ಸಂಬಂಧ ತೋಟಗಾರಿಕೆ ಇಲಾಖೆ ಹೊಸ ಮಾರ್ಗಸೂಚಿ ಹೊರಡಿಸಿದೆ.

‘ಕಬ್ಬನ್‌ ಉದ್ಯಾನಕ್ಕೆ ನಾಯಿ ಸೇರಿದಂತೆ ಇತರ ಸಾಕು ಪ್ರಾಣಿಗಳನ್ನು ಕರೆ ತರುವ ಮಾಲೀಕರು ಅವುಗಳ ಸಂಪೂರ್ಣ ಹೊಣೆಯನ್ನೂ ಹೊರಬೇಕು. ಸಾಕು ನಾಯಿಗಳಿಗೆ ಗರಿಷ್ಠ 6 ಅಡಿ ಉದ್ದದ ಚೈನ್‌ ಹಾಕಿ ಕರೆತರಬೇಕು. ಮಲ ವಿಸರ್ಜಿಸಿದರೆ ಅದನ್ನು ಮಾಲೀಕರೇ ತೆರವುಗೊಳಿಸಿ, ಕಸದ ಬುಟ್ಟಿಗೆ ಹಾಕಬೇಕು. ಇದಕ್ಕಾಗಿ‘ಪೂಪ್‌ ಬ್ಯಾಗ್’ (ಶೌಚ ಚೀಲ) ತರುವುದು ಕಡ್ಡಾಯ’ ಎಂದು ಇಲಾಖೆ ಹೇಳಿದೆ.

‘ಉದ್ಯಾನಕ್ಕೆ ಬರುವ ಸಾಕು ನಾಯಿಗಳಿಗೆ ರೇಬಿಸ್‌ ಲಸಿಕೆ ಹಾಕಿಸಿರುವುದು ಕಡ್ಡಾಯ. ಇದಕ್ಕೆ ಸಂಬಂಧಿಸಿದ ದಾಖಲೆಯನ್ನು ಜೊತೆಯಲ್ಲಿ ತರಬೇಕು. ಅಧಿಕಾರಿಗಳು ಕೇಳಿದಾಗ ಲಸಿಕೆಯ ಪ್ರಮಾಣ ಪತ್ರ ತೋರಿಸಬೇಕು.ಉದ್ಯಾನದಲ್ಲಿ ನಾಯಿಗಳಿಗೆ ಆಹಾರ ನೀಡುವಂತಿಲ್ಲ. ಒಂದು ವೇಳೆ ಸಾಕು ನಾಯಿ ಉದ್ಯಾನದಲ್ಲಿ ಯಾರನ್ನಾದರೂ ಕಚ್ಚಿದ್ದಲ್ಲಿ ಅಥವಾ ಗಾಯ ಮಾಡಿದ್ದಲ್ಲಿ ಅದಕ್ಕೆ ಮಾಲೀಕರೇ ಹೊಣೆಗಾರರು. ಗಾಯಾಳುವಿನ ಚಿಕಿತ್ಸಾ ವೆಚ್ಚವನ್ನೂ ಮಾಲೀಕರೇ ಭರಿಸಬೇಕು’ಎಂದೂ ಮಾರ್ಗಸೂಚಿಯಲ್ಲಿ ತಿಳಿಸಿದೆ.

ADVERTISEMENT

‘ಲಾಲ್‌ಬಾಗ್‌ ಉದ್ಯಾನದಲ್ಲಿ ಈಗಾಗಲೇ ಸಾಕುಪ್ರಾಣಿಗಳಿಗೆ ಪ್ರವೇಶ ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಕಬ್ಬನ್‌ ಉದ್ಯಾನಕ್ಕೆ ಬರುವ ಪಾದಚಾರಿಗಳು ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಅಪಾಯಕಾರಿ ಸಾಕು ಪ್ರಾಣಿಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ನಾಯಿಗಳನ್ನುಜೊತೆಯಲ್ಲಿ ಕರೆ ತರುವವರೂ ಕಡ್ಡಾಯವಾಗಿ ಈ ನಿಯಮಗಳನ್ನು ಪಾಲಿಸಬೇಕು’ ಎಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಎಂ.ಜಗದೀಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಉದ್ಯಾನಕ್ಕೆ ಸಾಕು ಪ್ರಾಣಿಗಳಿಗೆ ಕರೆತರುವ ಸಂಬಂಧ ಬಿಬಿಎಂಪಿ ಹಾಗೂ ಭಾರತೀಯ ಕಲ್ಯಾಣ ಮಂಡಳಿ ರೂಪಿಸಿರುವ ನಿಯಮಗಳನ್ನೇ ಕಬ್ಬನ್‌ ಉದ್ಯಾನಕ್ಕೂ ಅನ್ವಯಿಸಲಾಗಿದೆ’ ಎಂದೂ ಹೇಳಿದರು.

ಎಚ್ಚರಿಕೆ ನೀಡಿದ್ದ ಹೈಕೋರ್ಟ್‌: ‘ಸಾಕು ನಾಯಿಗಳನ್ನು ಸಾರ್ವಜನಿಕ ಸ್ಥಳಗಳಿಗೆ ಕರೆತಂದು ಮಲ,ಮೂತ್ರ ವಿಸರ್ಜನೆ ಮಾಡಿಸುವುದನ್ನು ತಡೆಯಬೇಕು. ಈ ವಿಷಯದಲ್ಲಿ ಬಿಬಿಎಂಪಿ ತಾನಾಗಿಯೇ ಕ್ರಮ ಜರುಗಿಸಬೇಕು. ಇಲ್ಲವಾದರೆ ನ್ಯಾಯಾಲಯವೇ ಈ ಸಂಗತಿಯನ್ನು ಪರಿಗಣನೆಗೆ ತೆಗೆದುಕೊಂಡು ನೋಟಿಸ್ ಜಾರಿ ಮಾಡಲು ಆದೇಶಿಸಬೇಕಾಗುತ್ತದೆ’ ಎಂದು ಹೈಕೋರ್ಟ್‌ ಇತ್ತೀಚೆಗೆ ಮೌಖಿಕ ಎಚ್ಚರಿಕೆ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.