ADVERTISEMENT

ಬಸ್ ಶೆಲ್ಟರ್ ಕಳವಾಗಿಲ್ಲ ಅಧಿಕಾರಿಗಳಿಂದಲೇ ತೆರವು: ಪತ್ತೆ ಮಾಡಿದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2023, 21:39 IST
Last Updated 11 ಅಕ್ಟೋಬರ್ 2023, 21:39 IST
   

ಬೆಂಗಳೂರು: ನಗರದ ಕನ್ನಿಂಗ್‌ಹ್ಯಾಮ್ ರಸ್ತೆಯ ಬಸ್‌ ಶೆಲ್ಟರ್‌ (ತಂಗುದಾಣ) ಕಳ್ಳತನ ಪ್ರಕರಣ ಭೇದಿಸಿರುವ ಹೈಗ್ರೌಂಡ್ಸ್ ಠಾಣೆ ಪೊಲೀಸರು, ಬಿಬಿಎಂಪಿ ಅಧಿಕಾರಿಗಳೇ ಶೆಲ್ಟರ್ ತೆರವು ಮಾಡಿದ್ದರೆಂಬ ಸಂಗತಿ ಪತ್ತೆ ಮಾಡಿದ್ದಾರೆ.

‘ಕನ್ನಿಂಗ್‌ಹ್ಯಾಮ್ ರಸ್ತೆಯ ಕಾಫಿ ಡೇ ಎದುರು ₹ 10 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ್ದ ಬಸ್ ಶೆಲ್ಟರ್ ಕಳ್ಳತನ ಆಗಿದೆ’ ಎಂದು ಆರೋಪಿಸಿ ಸೈನ್‌ಪೋಸ್ಟ್ ಇಂಡಿಯಾ ಕಂಪನಿಯ ಉಪಾಧ್ಯಕ್ಷ ಎನ್‌. ರವಿ ರೆಡ್ಡಿ ದೂರು ನೀಡಿದ್ದರು. ಬಸ್ ತಂಗುದಾಣಗಳಿಗೆ ಶೆಲ್ಟರ್ ಅಳವಡಿಸುವ ಗುತ್ತಿಗೆಯನ್ನು ಸೈನ್‌ಪೋಸ್ಟ್ ಇಂಡಿಯಾ ಕಂಪನಿ ಪಡೆದಿದೆ.

ಕನ್ನಿಂಗ್‌ಹ್ಯಾಮ್‌ ರಸ್ತೆಯ ಶೆಲ್ಟರ್ ಕಳ್ಳತನದ ಬಗ್ಗೆ ತನಿಖೆ ಕೈಗೊಂಡು, ಬಿಬಿಎಂಪಿ ಶಿವಾಜಿನಗರ ವಲಯದ ಕಾರ್ಯಪಾಲಕ ಎಂಜಿನಿಯರ್‌ ಅವರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ತಾವೇ ಶೆಲ್ಟರ್ ತೆರವು ಮಾಡಿದ್ದಾಗಿ ಹೇಳಿಕೆ
ನೀಡಿದ್ದಾರೆ’ ಎಂದು ಕಮಿಷನರ್
ಬಿ. ದಯಾನಂದ್ ಅವರು ತಿಳಿಸಿದರು.

ADVERTISEMENT

ಶೆಲ್ಟರ್ ಕುಸಿದು ಬೀಳಬಹುದೆಂದು ತೆರವು: ‘ಬಿಬಿಎಂಪಿ ಅಧಿಕಾರಿಗಳು ಆಗಸ್ಟ್ 22ರಂದು ವಾರ್ಡ್‌ ಪರಿಶೀಲನೆಗೆ ಹೋಗಿದ್ದಾಗ, ಈ ಶೆಲ್ಟರ್ ಗಮನಿಸಿದ್ದರು. ಅಸಮರ್ಪಕ ರೀತಿಯಲ್ಲಿ ನಿರ್ಮಿಸಲಾಗಿದ್ದ
ಶೆಲ್ಟರ್, ಕುಸಿದು ಬೀಳುವ ಹಂತದಲ್ಲಿತ್ತು. ಏನಾದರೂ ಅನಾಹುತವಾದರೆ, ಪ್ರಯಾಣಿಕರ ಜೀವಕ್ಕೆ ಕುತ್ತು ಬರಬಹುದೆಂದು ಯೋಚಿಸಿದರು. ನಂತರ ಸೈನ್‌ಪೋಸ್ಟ್ ಕಂಪನಿ ಪ್ರತಿನಿಧಿಯನ್ನು ಸಂಪರ್ಕಿಸಿದ್ದ ಬಿಬಿಎಂಪಿ ಅಧಿಕಾರಿಗಳು, ಶೆಲ್ಟರ್ ನಿರ್ಮಾಣಕ್ಕೆ ಪಡೆದಿರುವ ಕಾರ್ಯಾದೇಶ ಒದಗಿಸುವಂತೆ  ಕೇಳುವ ಜೊತೆಗೆ, ಸಮರ್ಪಕವಾಗಿ ‌ಬಸ್ ಶೆಲ್ಟರ್ ನಿರ್ಮಿಸುವಂತೆ ಸೂಚಿಸಿದ್ದರು. ಆದರೆ, ಪ್ರತಿನಿಧಿ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಹೀಗಾಗಿ, ಬಿಬಿಎಂಪಿ ಅಧಿಕಾರಿಗಳು ಸಾರ್ವಜನಿಕರ ಹಿತದೃಷ್ಟಿಯಿಂದ ಆಗಸ್ಟ್ 25ರಂದು ಶೆಲ್ಟರ್ ತೆರವುಗೊಳಿಸಿದ್ದರು. ಎಲ್ಲ ಸಾಮಗ್ರಿಗಳನ್ನು ಕಚೇರಿಗೆ ಸಾಗಿಸಿದ್ದರು’ ಎಂದು ಪೊಲೀಸರು ಹೇಳಿದರು.

‘ಬಿಬಿಎಂಪಿ ಅಧಿಕಾರಿಗಳು ಸೂಚನೆ ನೀಡಿದ್ದನ್ನು ಮುಚ್ಚಿಟ್ಟಿದ್ದ ದೂರುದಾರ, ಠಾಣೆಗೆ ದೂರು ನೀಡಿದ್ದರು. ತನಿಖೆಯಲ್ಲಿ ಬಿಬಿಎಂಪಿ ಅಧಿಕಾರಿಗಳ ಕ್ರಮ ಕಾನೂನುಬದ್ಧ ಎಂಬುದು ಗೊತ್ತಾಗಿದೆ. ದೂರುದಾರರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲಾಗುವುದು’ ಎಂದು  ಪೊಲೀಸರು
ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.