ADVERTISEMENT

₹ 2 ಕೋಟಿ ಕರೆನ್ಸಿ ಆಮಿಷವೊಡ್ಡಿ ₹ 10.13 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 11 ಜೂನ್ 2021, 14:57 IST
Last Updated 11 ಜೂನ್ 2021, 14:57 IST

ಬೆಂಗಳೂರು: ಲಂಡನ್‌ನಿಂದ ₹ 2 ಕೋಟಿ ಮೊತ್ತದ ಕರೆನ್ಸಿ ತಂದಿರುವುದಾಗಿ ಹೇಳಿದ್ದ ಆನ್‌ಲೈನ್ ವರನೊಬ್ಬ, ನಗರದ ಯುವತಿಯೊಬ್ಬರಿಂದ ₹ 10.13 ಲಕ್ಷ ಪಡೆದು ವಂಚಿಸಿದ್ದಾನೆ.

ಗುರುರಾಘವೇಂದ್ರ ಲೇಔಟ್ ನಿವಾಸಿಯಾಗಿರುವ 31 ವರ್ಷದ ಯುವತಿ ದೂರು ನೀಡಿದ್ದಾರೆ. ಆರೋಪಿ ಪ್ರೇಮ್‌ ಬಸು ಹಾಗೂ ಇತರರ ವಿರುದ್ಧ ದಕ್ಷಿಣ ವಿಭಾಗ ಸೈಬರ್ ಕ್ರೈಂ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

‘ಮದುವೆಯಾಗಲು ಮುಂದಾಗಿದ್ದ ಯುವತಿ, ಜೀವನ್‌ಸಾಥಿ ಡಾಟ್ ಕಾಮ್‌ ಜಾಲತಾಣದಲ್ಲಿ ಖಾತೆ ತೆರೆದಿದ್ದರು. ಫೋಟೊ ಹಾಗೂ ಸ್ವ–ವಿವರ ಹಾಕಿದ್ದರು. ಜಾಲತಾಣದಲ್ಲಿ ಪರಿಚಯವಾಗಿದ್ದ ಪ್ರೇಮ್‌ ಬಸು, ಮದುವೆಯಾಗುವುದಾಗಿ ಭರವಸೆ ನೀಡಿದ್ದ. ಅದಾದ ನಂತರ ಇಬ್ಬರ ನಡುವೆ ಮಾತುಕತೆ ಆರಂಭವಾಗಿತ್ತು’ ಎಂದು ಪೊಲೀಸರು ಹೇಳಿದರು.

ADVERTISEMENT

‘ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಇತ್ತೀಚೆಗೆ ಯುವತಿಗೆ ಕರೆ ಮಾಡಿದ್ದ ಆರೋಪಿಯ ಸಹಚರ, ‘ನಿಮ್ಮ ಪರಿಚಯಸ್ಥ ಪ್ರೇಮ್‌ ಬಸು ಲಂಡನ್‌ನಿಂದ ಭಾರತಕ್ಕೆ ಬಂದಿದ್ದಾರೆ. ಅವರ ಬಳಿ ₹ 2 ಕೋಟಿ ಮೊತ್ತದ ಕರೆನ್ಸಿ ಇದೆ. ಆದರೆ, ಅವರ ಬಳಿ ಕೋವಿಡ್ ಪರೀಕ್ಷೆ ವರದಿ ಇಲ್ಲ. ಹೀಗಾಗಿ, ನಿಲ್ದಾಣದಿಂದ ಹೊರಗೆ ಬಿಡುವುದಿಲ್ಲ’ ಎಂದಿದ್ದ. ‘ನೀವು ಶುಲ್ಕ ಹಾಗೂ ಜಿಎಸ್‌ಟಿ ಪಾವತಿ ಮಾಡಿದರೆ ಮಾತ್ರ ಬಿಡುಗಡೆ ಮಾಡುತ್ತೇವೆ. ಇಲ್ಲದಿದ್ದರೆ ಬಂಧಿಸುತ್ತೇವೆ’ ಎಂದೂ ಹೇಳಿದ್ದ.’

‘ಆತನ ಮಾತು ನಂಬಿದ್ದ ಯುವತಿ, ಆತ ನೀಡಿದ್ದ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ₹ 10.13 ಲಕ್ಷ ಹಾಕಿದ್ದರು. ಅದಾದ ನಂತರ ಆರೋಪಿಗಳು ನಾಪತ್ತೆಯಾಗಿದ್ದಾರೆ’ ಎಂದೂ ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.