ADVERTISEMENT

ಬ್ಯಾಂಕ್‌ ವ್ಯವಸ್ಥಾಪಕನನ್ನೇ ವಂಚಿಸಿದ ಖದೀಮರು !

ನಕಲಿ ಇ–ಮೇಲ್‌ನಿಂದ ಸಂದೇಶ ಕಳುಹಿಸಿ ₹5.11 ಲಕ್ಷ ಕಿತ್ತರು

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2018, 19:38 IST
Last Updated 18 ನವೆಂಬರ್ 2018, 19:38 IST

ಬೆಂಗಳೂರು: ಗ್ರಾಹಕರ ಹೆಸರಿನಲ್ಲಿ ನಕಲಿ ಇ–ಮೇಲ್ ಐಡಿಯಿಂದ ‘ಬ್ಯಾಂಕ್ ಆಫ್‌ ಬರೋಡ’ ಮಲ್ಲೇಶ್ವರ ಶಾಖೆಯ ವ್ಯವಸ್ಥಾಪಕ ವಿವೇಕ್ ಕುಲಕರ್ಣಿ ಅವರಿಗೆ ಸಂದೇಶ ಕಳುಹಿಸಿದ್ದ ಖದೀಮರು, ₹5.11 ಲಕ್ಷವನ್ನು ಬೇರೊಂದು ಬ್ಯಾಂಕ್‌ ಖಾತೆಗೆ ಜಮೆ ಮಾಡಿಸಿಕೊಂಡು ವಂಚಿಸಿದ್ದಾರೆ.

ಆ ಸಂಬಂಧ ವಿವೇಕ್ ಕುಲಕರ್ಣಿ, ನಗರದ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ. ಸಂದೇಶ ಕಳುಹಿಸಲು ಬಳಸಿದ್ದ ಇ–ಮೇಲ್ ಐಡಿ ಹಾಗೂ ಮೊಬೈಲ್ ನಂಬರ್ ಆಧರಿಸಿ ಆರೋಪಿಗಳನ್ನು ಪತ್ತೆ ಮಾಡುತ್ತಿದ್ದೇವೆ ಎಂದು ಪೊಲೀಸರು ಹೇಳಿದರು.

‘ವಿವೇಕ್‌ ಅವರಿಗೆ ನ. 13ರಂದು ಕರೆ ಮಾಡಿದ್ದ ಖದೀಮ, ‘ನಾನು ಎಂ.ಡಿ. ವರುಣ್ ಮೋಟಾರ್ಸ್‌ನಿಂದ ಮಾತ
ನಾಡುತ್ತಿರುವುದು. ನಿಮಗೆ ಒಂದು ಇ–ಮೇಲ್ ಕಳುಹಿಸಲಾಗಿದ್ದು, ಅದನ್ನು ಪರಿಶೀಲಿಸಿ’ ಎಂದು ಹೇಳಿದ್ದ. ಅದಾದ ನಂತರ ವಿವೇಕ್‌, ತಮ್ಮ ಬ್ಯಾಂಕ್‌ ಶಾಖೆಯ ಇ–ಮೇಲ್ ಪರಿಶೀಲಿಸಿದ್ದರು’.

ADVERTISEMENT

‘ವರುಣ್‌ ಮೋಟಾರ್ಸ್‌ ಬೆಂಗಳೂರು’ ಹೆಸರಿನಲ್ಲಿ ಸಂದೇಶವೊಂದು ಬಂದಿತ್ತು. ‘ವರುಣ್‌ ಅವರ ಖಾತೆಯಿಂದ ಮನೋಜ್‌ಕುಮಾರ್‌ ಎಂಬುವರ ಕೋಟಕ್ ಮಹೀಂದ್ರ ಬ್ಯಾಂಕ್ ಖಾತೆಗೆ ₹5,11,836 ಲಕ್ಷ ವರ್ಗಾವಣೆ ಮಾಡಿ’ ಎಂದು ಸಂದೇಶದಲ್ಲಿ ಬರೆಯಲಾಗಿತ್ತು.ವರುಣ್‌ ಮೋಟಾರ್ಸ್‌ನವರು ಬ್ಯಾಂಕ್‌ ಗ್ರಾಹಕರಾಗಿದ್ದರಿಂದ, ಆ ಸಂದೇಶವನ್ನು ನಿಜವೆಂದು ವಿವೇಕ್ ನಂಬಿದ್ದರು’ ಎಂದು ವಿವರಿಸಿದರು.

‘ಸಂದೇಶದಲ್ಲಿದ್ದ ಸೂಚನೆಯಂತೆ ಹಣ ವರ್ಗಾವಣೆ ಮಾಡಿದ್ದರು. ಅದಾದ ಕೆಲವು ಗಂಟೆಗಳ ನಂತರ ಪುನಃ ಇ–ಮೇಲ್ ಕಳುಹಿಸಿದ್ದ ಆರೋಪಿ, ₹8,44,398 ಹಣವನ್ನು ಎಸ್‌ಬಿಐ ಬ್ಯಾಂಕ್‌ ಖಾತೆಗೆ ವರ್ಗಾವಣೆ ಮಾಡುವಂತೆ ತಿಳಿಸಿದ್ದ. ಸಂದೇಶದ ಬಗ್ಗೆ ಅನುಮಾನಗೊಂಡಿದ್ದ ವ್ಯವಸ್ಥಾಪಕ ವಿವೇಕ್, ವರುಣ್‌ ಮೋಟಾರ್ಸ್‌ನವರನ್ನು ವಿಚಾರಿಸಿದ್ದರು. ‘ನಾವು ಯಾವುದೇ ಇ–ಮೇಲ್ ಸಂದೇಶ ಕಳುಹಿಸಿಲ್ಲ. ಹಣ ವರ್ಗಾವಣೆ ಮಾಡುವಂತೆಯೂ ಹೇಳಿಲ್ಲ’ ಎಂದು ಮೋಟಾರ್ಸ್‌ನವರು ಹೇಳಿದ್ದರು. ಆಗ ವಿವೇಕ್‌ಗೆ ವಂಚನೆಗೀಡಾಗಿದ್ದು ಗೊತ್ತಾಗಿದೆ’ ಎಂದು ಪೊಲೀಸರು ಹೇಳಿದರು.

‘ಯಾರೋ ಮೋಸಗಾರರು ನಕಲಿ ಇ–ಮೇಲ್ ಐಡಿ ಸೃಷ್ಟಿಸಿ, ಅದರ ಮೂಲಕ ಗ್ರಾಹಕರ ಹೆಸರಿನಲ್ಲಿ ಸಂದೇಶ ಕಳುಹಿಸಿ ಹಣ ಪಡೆದುಕೊಂಡಿದ್ದಾರೆ. ಆ ಮೂಲಕ ನನಗೆ ಹಾಗೂ ಬ್ಯಾಂಕ್‌ಗೆ ವಂಚನೆ ಮಾಡಿದ್ದಾರೆ’ ಎಂದು ವಿವೇಕ್ ಕುಲಕರ್ಣಿ ದೂರಿನಲ್ಲಿ ತಿಳಿಸಿದ್ದಾರೆ.

‘ವರುಣ್‌ ಮೋಟಾರ್ಸ್‌ನವರು, ಮಲ್ಲೇಶ್ವರ ಶಾಖೆಯಲ್ಲಿ ನಿತ್ಯವೂ ವ್ಯವಹಾರ ನಡೆಸುತ್ತಾರೆ. ಆ ಬಗ್ಗೆ ಗೊತ್ತಿದ್ದವರೇ ಕೃತ್ಯ ಎಸಗಿರುವ ಅನುಮಾನವಿದೆ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.