ADVERTISEMENT

ಆಸ್ಪತ್ರೆಯಲ್ಲಿ ನೌಕರಿಯ ಆಮಿಷವೊಡ್ಡಿ ವಂಚನೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2020, 19:45 IST
Last Updated 1 ಮಾರ್ಚ್ 2020, 19:45 IST

ಬೆಂಗಳೂರು: ನಗರದ ಪ್ರತಿಷ್ಠಿತ ಆಸ್ಪತ್ರೆಯೊಂದರಲ್ಲಿ ಕೆಲಸ ಕೊಡಿಸುವ ಆಮಿಷವೊಡ್ಡಿ ಅಭ್ಯರ್ಥಿಯೊಬ್ಬರಿಂದ ₹ 63,500 ಪಡೆದುಕೊಂಡು ವಂಚಿಸಲಾಗಿದ್ದು, ಈ ಸಂಬಂಧ ಮಹದೇವಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ವಂಚನೆ ಸಂಬಂಧ ಎಂ.ಬಿ. ಆದಿತ್ಯ ಎಂಬುವರು ದೂರು ನೀಡಿದ್ದಾರೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದ ಆದಿತ್ಯ, ಜಾಲತಾಣವೊಂದರಲ್ಲಿ ರೆಸ್ಯುಮ್‌ ಅಪ್‌ಲೋಡ್ ಮಾಡಿದ್ದರು. ‘ಆಸ್ಪತ್ರೆಯಲ್ಲಿ ಕೆಲಸಕ್ಕೆ ಆಯ್ಕೆ ಮಾಡಲಾಗಿದೆ’ ಎಂದು ಹೇಳಿಕೊಂಡು ಕರೆ ಮಾಡಿದ್ದ ಆರೋಪಿ, ನೋಂದಣಿ ಶುಲ್ಕ ಹಾಗೂ ಭದ್ರತಾ ಠೇವಣಿ ಇರಿಸುವಂತೆ ಹೇಳಿದ್ದ. ಅದನ್ನು ನಂಬಿದ್ದ ಆದಿತ್ಯ, ಹಂತ ಹಂತವಾಗಿ ₹ 63,500 ಪಾವತಿಸಿದ್ದರು. ನಂತರ, ಯಾವುದೇ ಕೆಲಸ ಕೊಡಿಸದೇ ವಂಚಿಸ ಲಾಗಿದೆ’ ಎಂದು ಮೂಲಗಳು ಹೇಳಿವೆ.

ADVERTISEMENT

₹31,871 ವಂಚನೆ: ‘ಕೆಲಸದ ಆಮಿಷವೊಡ್ಡಿದ್ದ ಅಪರಿಚಿತನೊಬ್ಬ, ₹ 31,871 ಪಡೆದುಕೊಂಡು ವಂಚಿಸಿದ್ದಾನೆ’ ಎಂದು ಆರೋಪಿಸಿ ಜಿ. ಸ್ನೇಹಲತಾ ಎಂಬುವರು ದೂರು ನೀಡಿದ್ದರು.

‘ಕೆಲಸ ಹುಡುಕುತ್ತಿದ್ದ ನಾನು, ‘ಕೆರಿಯರ್‌ ಮೇಕ್ಸ್ ಡಾಟ್ ಕಾಮ್’ ಜಾಲತಾಣದಲ್ಲಿ ರೆಸ್ಯುಮ್‌ ಅಪ್‌ಲೋಡ್ ಮಾಡಿದ್ದೆ. ಅದರಲ್ಲಿದ್ದ ಮಾಹಿತಿ ತಿಳಿದುಕೊಂಡು ಕರೆ ಮಾಡಿದ್ದ ಆರೋಪಿ, ಹಲವು ಶುಲ್ಕದ ನೆಪ ಹೇಳಿ ಹಣ ಪಡೆದಿದ್ದಾನೆ’ ಎಂದು ದೂರಿನಲ್ಲಿ ಸ್ನೇಹಲತಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.