ಹುಬ್ಬಳ್ಳಿ: ಕಳೆದ ವಾರವಷ್ಟೇ ಸೈಬರ್ ವಂಚಕರ ಜಾಲ ಪತ್ತೆ ಮಾಡಿ ಮೂವರನ್ನು ಬಂಧಿಸಿದ ಹುಬ್ಬಳ್ಳಿ ಸೈಬರ್ ಅಪರಾಧ ಠಾಣೆ ಪೊಲೀಸರು, ಉಡುಪಿಯ ಪ್ರಜ್ವಲ್ ಶೆಟ್ಟಿ ಎಂಬ ನಾಲ್ಕನೇ ಆರೋಪಿಯನ್ನು ಮುಂಬೈನಲ್ಲಿ ಬಂಧಿಸಿದ್ದಾರೆ. ಅಲ್ಲದೆ, ಜಾಲದ ಪ್ರಮುಖ ಆರೋಪಿ ಕ್ರಿಶ್ ಅಲಿಯಾಸ್ ಕೃಷ್ಣ ಎಂಬಾತನ ಬಗ್ಗೆಯೂ ಸುಳಿವು ಸಿಕ್ಕಿದೆ.
‘ಮುಂಬೈನ ಉದ್ಯಮಿ ಕ್ರಿಶ್ ಬಗ್ಗೆ ಪ್ರಜ್ವಲ್ ಶೆಟ್ಟಿ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆ. ಆತನ ಗುರುತು ಸಹಿತ ಸಂಪೂರ್ಣ ಮಾಹಿತಿ ಕಲೆಹಾಕಲಾಗುತ್ತಿದೆ. ಮೂವರು ಆಪ್ತರು ನೆರವಾದ ವಿಷಯ ಗೊತ್ತಾಗುತ್ತಿದ್ದಂತೆಯೇ ಕ್ರಿಶ್ ದುಬೈಗೆ ಪರಾರಿಯಾಗಿದ್ದು, ಪ್ರಾಥಮಿಕ ಹಂತದ ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸರು ತಿಳಿಸಿದರು.
‘ಸೈಬರ್ ವಂಚನೆಯಲ್ಲಿ ಪಳಗಿರುವ ಕ್ರಿಶ್ ತನ್ನ ಸಂಪರ್ಕ ಜಾಲವನ್ನು ಕರ್ನಾಟಕ, ಮುಂಬೈ, ಕೇರಳ, ತಮಿಳುನಾಡು, ದೆಹಲಿ, ಮೇಘಾಲಯ, ಓಡಿಸ್ಸಾ, ಗೋವಾ ಸೇರಿ ವಿವಿಧ ರಾಜ್ಯಗಳಲ್ಲಿ ವಿಸ್ತರಿಸಿಕೊಂಡು ಸಹಚರರನ್ನು ನೇಮಿಸಿಕೊಂಡಿದ್ದ. ಅವರ ಮೂಲಕ ಉದ್ಯಮದ ಹೆಸರಿನಲ್ಲಿ ಬ್ಯಾಂಕ್‌ಗಳಲ್ಲಿ ನಕಲಿ ಖಾತೆ ತೆರೆಸಿ, ಜನರನ್ನು ವಂಚಿಸುತ್ತಿದ್ದ’ ಎಂದರು.
‘ಕ್ರಿಶ್ ತನ್ನ ಸಹಚರರಿಂದ ಕೇಂದ್ರ ಸರ್ಕಾರದ ಎಂಎಸ್‌ಎಂಇ ಉದ್ಯಮ್ ಯೋಜನೆಯಡಿ ಬ್ಯಾಂಕ್‌ಗಳಲ್ಲಿ ಕರೆಂಟ್ ಅಕೌಂಟ್ ತೆರೆಸುತ್ತಿದ್ದ. ಆನ್‌ಲೈನ್ ಪೋರ್ಟಲ್‌ನಲ್ಲಿ ಮಾಲೀಕನ ಹೆಸರು, ವಿಳಾಸ ಹಾಗೂ ಕಚೇರಿ ಸ್ಥಳದ ಮಾಹಿತಿ ನಮೂದಿಸಿ ನೋಂದಣಿ ಮಾಡಿಕೊಂಡರೆ, ಅಲ್ಲಿಯೇ ಪ್ರಮಾಣ ಪತ್ರ ಸಿಗುತ್ತದೆ. ಪ್ರಜ್ವಲ್ ಸಹಾಯದಿಂದ ಕ್ರಿಶ್ ಮುಂಬೈನಲ್ಲಿ ‘ರಾಕ್ಷಿ ಎಂಟರ್ ಪ್ರೈಸೆಸ್’ ಹೆಸರಲ್ಲಿ ಕಂಪನಿ ತೆರೆಸಿ, ಕೊಠಡಿ ಬಾಡಿಗೆ ಪಡೆದು ನಾಮಫಲಕ ಹಾಕಿಸಿದ್ದ. ಅದಕ್ಕೆ ಆತ ಪ್ರಜ್ವಲ್‌ಗೆ ₹5 ಲಕ್ಷ ಹಣ ನೀಡಿದ್ದು ತಿಳಿದು ಬಂದಿದೆ. ಉದ್ಯಮ್ ಯೋಜನೆಯಡಿ ಸಹಚರರಿಂದ 37 ನಕಲಿ ಖಾತೆ ತೆರೆಸಿ, ಜನರನ್ನು ವಂಚಿಸಿ ನೂರಾರು ಕೋಟಿ ಹಣ ವರ್ಗಾಯಿಸಿಕೊಂಡ ಬಗ್ಗೆ ಮಾಹಿತಿಯಿದೆ’ ಎಂದರು.
‘ಮೇಘಾಲಯ, ಸಿಕ್ಕಿಂ, ಒಡಿಶಾ ಮತ್ತು ಮುಂಬೈನಲ್ಲಿದ್ದ ಬಡವರಿಗೆ ಕ್ರಿಶ್ ಸಹಚರರು, ₹2 ಸಾವಿರದಿಂದ ₹10 ಸಾವಿರ ನೀಡಿ ಅವರಿಂದ ಆಧಾರ್ ಕಾರ್ಡ್ ಪಡೆದು, ನಕಲಿ ಕಂಪನಿ ಹೆಸರಲ್ಲಿ ಬ್ಯಾಂಕ್‌ಗಳಲ್ಲಿ ಖಾತೆ ತೆರೆಯುತ್ತಿದ್ದರು. ಆರೋಪಿ ಪ್ರಜ್ವಲ್ ಕ್ರಿಶ್‌ಗೆ ನೇರ ಸಂಪರ್ಕದಲ್ಲಿದ್ದು, ಸೈಬರ್ ಕ್ರೈಮ್ ವ್ಯವಹಾರದ ಕುರಿತು ಆಗಾಗ ಮಾಹಿತಿ ನೀಡುತ್ತಿದ್ದ. ಆರೋಪಿಗಳಿಂದ ವಶಪಡಿಸಿಕೊಂಡಿರುವ ಮೊಬೈಲ್‌ಗಳಿಂದ ಕೆಲ ಮಾಹಿತಿಗಳು ಲಭ್ಯವಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ಸೈಬರ್ ಕ್ರೈಮ್ ವಂಚಕರ ಜಾಲದ ಪ್ರಮುಖ ಆರೋಪಿ ಕ್ರಿಶ್ ಬಗ್ಗೆ ಮಾಹಿತಿ ಸಿಕ್ಕಿದೆ. ಆತನ ಬಂಧನಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ
–ಎನ್. ಶಶಿಕುಮಾರ್ ಪೊಲೀಸ್ ಕಮಿಷನರ್ ಹುಬ್ಬಳ್ಳಿ ಧಾರವಾಡ ಮಹಾನಗರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.