ADVERTISEMENT

ಸೈಕಲ್‌ ರವಿಯ ಆಸ್ತಿ ₹50 ಕೋಟಿ!

15 ಮೊಬೈಲ್‌ಗಳು ಜಪ್ತಿ * ರಾಜಕಾರಣಿಗಳ ಸಂಪರ್ಕದಲ್ಲಿದ್ದ ರೌಡಿಶೀಟರ್

​ಪ್ರಜಾವಾಣಿ ವಾರ್ತೆ
Published 6 ಜುಲೈ 2018, 19:38 IST
Last Updated 6 ಜುಲೈ 2018, 19:38 IST
...
...   

ಬೆಂಗಳೂರು: ಸಿಸಿಬಿ ಪೊಲೀಸರು ಸೆರೆ ಹಿಡಿದಿರುವ ರೌಡಿ ರವಿಕುಮಾರ್‌ ಅಲಿಯಾಸ್‌ ಸೈಕಲ್ ರವಿಯ ಆಸ್ತಿ ಮೌಲ್ಯ ಸುಮಾರು ₹50 ಕೋಟಿ.

ಜೂನ್ 26ರಂದು ಸಿನಿಮೀಯ ರೀತಿಯಲ್ಲಿ ರವಿಯನ್ನು ಬೆನ್ನಟ್ಟಿದ್ದ ಸಿಸಿಬಿ ಇನ್‌ಸ್ಪೆಕ್ಟರ್‌ಗಳಾದ ಆರ್.ಪ್ರಕಾಶ್ ಹಾಗೂ ಮಲ್ಲಿಕಾರ್ಜುನ್, ಗುಂಡು ಹಾರಿಸಿ ಬಂಧಿಸಿದ್ದರು. ಮರುದಿನವೇ ಆತನ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಿದ್ದ ಅಧಿಕಾರಿಗಳು, ಆಸ್ತಿಯನ್ನು ಪತ್ತೆ ಹಚ್ಚಿದ್ದಾರೆ.

‘ಕರ್ನಾಟಕ ಹಾಗೂ ತಮಿಳುನಾಡಿನ ಹಲವೆಡೆ ಆಸ್ತಿ ಸಂಪಾದಿಸಿದ್ದಾನೆ. ಬೆಂಗಳೂರು ಹಾಗೂ ಕೃಷ್ಣಗಿರಿಯಲ್ಲಿ ಮನೆ ಹೊಂದಿದ್ದಾನೆ. ₹50 ಕೋಟಿ ಮೌಲ್ಯದ ಆಸ್ತಿಯ ದಾಖಲೆಗಳನ್ನು ಜಪ್ತಿ ಮಾಡಿದ್ದು, ಪರಿಶೀಲಿಸುತ್ತಿದ್ದೇವೆ. ದಾಳಿ ವೇಳೆ ಶಸ್ತ್ರಾಸ್ತ್ರಗಳೂ ಸಿಕ್ಕಿವೆ’ ಎಂದು ಸಿಸಿಬಿಯ ಮೂಲಗಳು ತಿಳಿಸಿವೆ.

ADVERTISEMENT

15 ಮೊಬೈಲ್‌ಗಳು ಪತ್ತೆ: ‘ಬನಶಂಕರಿ ಠಾಣೆಯ ರೌಡಿಶೀಟರ್ ಆಗಿದ್ದ ರವಿಯ ಕಾರು ಹಾಗೂ ಕಚೇರಿಯಲ್ಲಿ 15 ಮೊಬೈಲ್‌ಗಳು ಸಿಕ್ಕಿವೆ. ಅವುಗಳನ್ನು ಬಳಸಿಕೊಂಡು ಆತ, ರಾಜ್ಯದ ಹಲವು ರಾಜರಾಣಿಗಳ ಜತೆ ಮಾತನಾಡುತ್ತಿದ್ದ. ಅವರು ಹೇಳುತ್ತಿದ್ದ ಕೆಲಸಗಳನ್ನು ಮಾಡಿಕೊಡುತ್ತಿದ್ದ ಎಂಬುದು ಗೊತ್ತಾಗಿದೆ’ ಎಂದು ಸಿಸಿಬಿ ಮೂಲಗಳು ಹೇಳಿವೆ.

‘ಉತ್ತರ ಕರ್ನಾಟಕದ ಮಾಜಿ ಶಾಸಕರೊಬ್ಬರು ರವಿಗೆ ಹಲವು ಬಾರಿ ಕರೆ ಮಾಡಿದ್ದಾರೆ. ಸದ್ಯದಲ್ಲೇ ಅವರನ್ನು ವಿಚಾರಣೆಗೆ ಒಳಪಡಿಸಲಿದ್ದೇವೆ. ಕೆಲವು ರೌಡಿಶೀಟರ್‌ಗಳು, ರವಿಯ ಹತ್ಯೆಗೆ ಸಂಚು ರೂಪಿಸಿದ್ದರು ಎಂದು ಗೊತ್ತಾಗಿದೆ. ಆ ರೌಡಿಶೀಟರ್‌ಗಳು ಯಾರು ಎಂಬುದನ್ನು ಪತ್ತೆ ಹಚ್ಚುತ್ತಿದ್ದೇವೆ’ ಎಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.