ADVERTISEMENT

‘ಪೊಲೀಸ್‌ ಇಲಾಖೆಯಲ್ಲಿ ಪದೋನ್ನತಿ, ಎಸ್‌ಸಿ, ಎಸ್‌ಟಿ ನೌಕರರಿಗೆ ಅನ್ಯಾಯ’

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2021, 20:46 IST
Last Updated 24 ಅಕ್ಟೋಬರ್ 2021, 20:46 IST
ಡಿ. ಚಂದ್ರಶೇಖರಯ್ಯ
ಡಿ. ಚಂದ್ರಶೇಖರಯ್ಯ   

ಬೆಂಗಳೂರು: ‘ಬಡ್ತಿ ಮೀಸಲಾತಿ ನಿಯಮ ಉಲ್ಲಂಘಿಸಿ ಉತ್ತರ ಕನ್ನಡ ಜಿಲ್ಲಾ ಪೊಲೀಸ್‌ ಘಟಕದಲ್ಲಿ 21 ಹೆಡ್‌ ಕಾನ್‌ಸ್ಟೆಬಲ್‌ಗಳಿಗೆ ಸಬ್‌ ಇನ್‌ಸ್ಪೆಕ್ಟರ್‌ ಹಾಗೂ 25 ಕಾನ್‌ಸ್ಟೆಬಲ್‌ಗಳಿಗೆ ಹೆಡ್‌ ಕಾನ್‌ಸ್ಟೆಬಲ್‌ ಹುದ್ದೆಗೆ ಪದೋನ್ನತಿ ನೀಡಲಾಗಿದೆ’ ಎಂದು ರಾಜ್ಯ ಸರ್ಕಾರಿ ಎಸ್‌ಸಿ, ಎಸ್‌ಟಿ ನೌಕರರ ಸಂಘದ ಅಧ್ಯಕ್ಷ ಡಿ. ಚಂದ್ರಶೇಖರಯ್ಯ
ದೂರಿದ್ದಾರೆ.

‘ಎರಡೂ ಹುದ್ದೆಗಳಿಗೆ ಬಡ್ತಿ ಪಡೆದವರಲ್ಲಿ ಪರಿಶಿಷ್ಟ ಸಮುದಾಯಕ್ಕೆ ಸೇರಿದ ಒಬ್ಬರೂ ಇಲ್ಲ. ಜ್ಯೇಷ್ಠತೆ ನಿಗದಿಪಡಿಸಿ ಬಡ್ತಿ ನೀಡುವ ಸಂದರ್ಭದಲ್ಲಿ ಬ್ಯಾಕ್‌ಲಾಗ್‌ ಹುದ್ದೆಗಳಿಗೆ ನೇಮಕಾತಿಗೆ ಸರ್ಕಾರ ಹೊರಡಿಸಿರುವ ಆದೇಶವನ್ನು ಅಕ್ರಮವಾಗಿ ಅಳವಡಿಸಿಕೊಳ್ಳಲಾಗಿದೆ. ಅಲ್ಲದೆ, ಸಾಮಾನ್ಯ ಅರ್ಹತೆಯಡಿ ಜ್ಯೇಷ್ಠತೆಯಲ್ಲಿ ಬಡ್ತಿ ಪಡೆದವರನ್ನೂ ಎಸ್‌ಸಿ, ಎಸ್‌ಟಿಗೆ ನೀಡಬೇಕಾದ ಬಡ್ತಿ ಪ್ರಮಾಣ 15:3 ಅನುಪಾತಕ್ಕೆ ಸೇರಿಸಿ ಲೆಕ್ಕಹಾಕಿ ಬಡ್ತಿ ನೀಡಲಾಗಿದೆ’ ಎಂದೂ ಅವರು ಆರೋಪಿಸಿದ್ದಾರೆ.

‘ಕರ್ನಾಟಕ (ರಾಜ್ಯ ಸಿವಿಲ್‌ ಸೇವೆಗಳಲ್ಲಿನ ಹುದ್ದೆಗಳಿಗೆ) ಮೀಸಲಾತಿ ಆಧಾರದ ಮೇಲೆ ಬಡ್ತಿ ಹೊಂದಿರುವ ನೌಕರರಿಗೆ ತತ್ಪರಿಣಾಮವಾದ ಜೇಷ್ಠತೆಯನ್ನು ವಿಸ್ತರಿಸುವ ಕಾಯ್ದೆ –2017 ನ್ನು ಉಲ್ಲಂಘಿಸಿ ಜ್ಯೇಷ್ಠತೆ ನಿಗದಿಪಡಿಸಿ ಎಸ್‌ಸಿ, ಎಸ್‌ಸಿ ನೌಕರರಿಗೆ ಅನ್ಯಾಯ ಮಾಡಲಾಗಿದೆ. ಈ ಬಗ್ಗೆ ಉತ್ತರ ಕನ್ನಡ ಜಿಲ್ಲೆಯ ಪೊಲೀಸ್‌ ವರಿಷ್ಠಾಧಿಕಾರಿಗೆ ಸಮಾಜ ಕಲ್ಯಾಣ ಇಲಾಖೆ ಆಯುಕ್ತರು ನೋಟಿಸ್‌ ನೀಡಿ, ಎಲ್ಲ ಮುಂಬಡ್ತಿಗಳನ್ನು ರದ್ದುಪಡಿಸಿ ನಿಯಮಾನುಸಾರ ಬಡ್ತಿ ನೀಡುವಂತೆ ಸೂಚಿಸಿದ ಬಳಿಕವೂ ನಿಯಮ ಉಲ್ಲಂಘಿಸಲಾಗಿದೆ’ ಎಂದು ಅವರು ತಿಳಿಸಿದ್ದಾರೆ

ADVERTISEMENT

‘ಜೇಷ್ಠತೆ ಸಂರಕ್ಷಿಸದೆಜ್ಯೇಷ್ಠತೆಯನ್ನು ಕಾನೂನುಬಾಹಿರವಾಗಿ ನಿಗದಿಪಡಿಸಿ ಕಾನ್‌ಸ್ಟೆಬಲ್‌ ಹುದ್ದೆಯಿಂದ ಹೆಡ್‌ ಕಾನ್‌ಸ್ಟೆಬಲ್‌ ಮತ್ತು ಹೆಡ್‌ ಕಾನ್‌ಸ್ಟೆಬಲ್ ಹುದ್ದೆಯಿಂದ ಎಎಸ್‌ಐ ವೃಂದಕ್ಕೆ ಬಡ್ತಿ ನೀಡಿದ ಬಗ್ಗೆ ಮಾಹಿತಿ ನೀಡುವಂತೆ ಸಮಾಜ ಕಲ್ಯಾಣ ಆಯುಕ್ತರು ಸೂಚಿಸಿದ್ದರೂ ಪೊಲೀಸ್‌ ವರಿಷ್ಠಾಧಿಕಾರಿ ಸ್ಪಂದಿಸಿಲ್ಲ. ಹೀಗಾಗಿ, ಈ ಬಗ್ಗೆ ಮತ್ತೊಮ್ಮೆ ದೂರು ನೀಡಿದ್ದೇವೆ. ಈಗಾಗಲೇ ನೀಡಿರುವ ಪದೋನ್ನತಿಯನ್ನು ರದ್ದುಪಡಿಸಿ, ಜ್ಯೇಷ್ಠತೆ ಪಟ್ಟಿ ಮರುನಿಗಪಡಿಸಿ ಪದೋನ್ನತಿ ಪ್ರಕ್ರಿಯೆ ನಡೆಸದಿದ್ದರೆ ನೌಕರರು ಹೋರಾಟ ಹಮ್ಮಿಕೊಳ್ಳಲಿದ್ದಾರೆ’ ಎಂದೂ ಅವರು ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.