
ದಾಬಸ್ ಪೇಟೆ: ರಾಮನಗರ–ಪಾವಗಡ ರಾಜ್ಯ ಹೆದ್ದಾರಿಯಲ್ಲಿ ಶಿವಗಂಗೆ ಶಾರದಾ ಕ್ರಾಸ್‌ನಿಂದ ಕಂಬಾಳು ಗ್ರಾಮದವರೆಗಿನ ಸುಮಾರು 3 ಕಿ.ಮೀ ಉದ್ದಕ್ಕೂ ಡಾಂಬರು ಹಲವೆಡೆ ಕಿತ್ತು ಹೋಗಿದೆ. ವಾಹನ ಚಲಾಯಿಸುವುದೇ ಸವಾಲಾಗಿದೆ.
ಮಳೆಗಾಲದಲ್ಲಿ ಮತ್ತು ರಾತ್ರಿ ಸಮಯದಲ್ಲಿ ರಸ್ತೆ ಕಿತ್ತುಹೋಗಿರುವುದು ಗೊತ್ತಾಗದೇ ಹಲವು ಬಾರಿ ದ್ವಿಚಕ್ರ ವಾಹನಗಳು ಜಾರಿ ಬಿದ್ದು ಸವಾರರು ಗಾಯಗೊಂಡಿದ್ದಾರೆ.
ಡಾಂಬರು ರಸ್ತೆ ಹಾಳಾಗಿ ಹಲವು ತಿಂಗಳುಗಳೇ ಕಳೆದಿವೆ. ಈ ಸಂಬಂಧ ನೆಲಮಂಗಲ ತಾಲ್ಲೂಕು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ಶಿವಗಂಗೆಯಿಂದ ನೆಲಮಂಗಲ ತಾಲೂಕಿನ ಗಡಿಭಾಗ ಮಾಕೇನಹಳ್ಳಿಯವರೆಗೆ ಈಗಿರುವ ದ್ವಿಪಥ ರಸ್ತೆಯನ್ನು ಚತುಷ್ಪಥ ರಸ್ತೆಯಾಗಿ ಮಾಡಲಾಗುತ್ತದೆ ಎಂದು ಅಧಿಕಾರಿಗಳು ಉತ್ತರಿಸುತ್ತಿದ್ದಾರೆ. ರಸ್ತೆ ಅಭಿವೃದ್ಧಿಯಾಗಲಿ. ಅಲ್ಲಿವರೆಗೆ ವಾಹನಗಳು ಅಪಘಾತ ಆಗುವುದನ್ನು ತಡೆಯಲು ರಸ್ತೆ ದುರಸ್ತಿ ಮಾಡಬೇಕು ಎಂದು ಸ್ಥಳೀಯ ನಿವಾಸಿ ಸಿದ್ದರಾಜು ಆಗ್ರಹಿಸಿದರು.
ಶಿವಗಂಗೆ ಧಾರ್ಮಿಕ ಹಾಗೂ ಪ್ರವಾಸೋದ್ಯಮ ಸ್ಥಳವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಬರುತ್ತಾರೆ. ಅವರಿಗೆ ತೊಂದರೆಯಾಗುವುದನ್ನು ತಪ್ಪಿಸಲು ರಸ್ತೆ ಸರಿಪಡಿಸಬೇಕು ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.