ADVERTISEMENT

ಆಸ್ಪತ್ರೆ ಆವರಣ ಕಸದ ತಾಣ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2021, 18:49 IST
Last Updated 10 ಫೆಬ್ರುವರಿ 2021, 18:49 IST
ಆಸ್ಪತ್ರೆ ಪಕ್ಕದಲ್ಲಿ ಬಿದ್ದಿರುವ ಕಸದ ರಾಶಿ
ಆಸ್ಪತ್ರೆ ಪಕ್ಕದಲ್ಲಿ ಬಿದ್ದಿರುವ ಕಸದ ರಾಶಿ   

ದಾಬಸ್‌ಪೇಟೆ: ನರಸೀಪುರ ಗ್ರಾಮ ಪಂಚಾಯಿತಿ ಆಡಳಿತ ಕೇಂದ್ರದ ಸುತ್ತಮುತ್ತ ಕಳೆ, ಪ್ಲಾಸ್ಟಿಕ್ ತ್ಯಾಜ್ಯ ಹಾಗೂ ಮದ್ಯದ ಪ್ಯಾಕ್‌ಗಳು ಬಿದ್ದಿದ್ದು, ರೋಗ–ರುಜಿನಗಳಿಗೆ ಆಹ್ವಾನ ನೀಡುತ್ತಿವೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಪಂಚಾಯಿತಿ ಕಚೇರಿಯ ಪಕ್ಕದಲ್ಲಿಯೇ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಇದೆ. ಈ ಆಸ್ಪತ್ರೆ ಸುತ್ತಲೂ ಪಾರ್ಥೇನಿಯಂ ಕಳೆ ಬೆಳೆದಿದ್ದರೆ, ಮುಂಭಾಗದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಬಿದ್ದಿದೆ. ಆಸ್ಪತ್ರೆ ಆವರಣ ಶುಚಿಯಾಗಿರಬೇಕು. ಆದರೆ ಕಸದ ತೊಟ್ಟಿಯಂತಾಗಿದೆ’ ಎಂದು ಚಿಕಿತ್ಸೆಗೆ ಬಂದಿದ್ದ ವ್ಯಕ್ತಿಯೊಬ್ಬರು ದೂರಿದರು.

‘ಈ ಮಾರ್ಗದಲ್ಲಿ ಹತ್ತಾರು ಅಂಗಡಿಗಳಿದ್ದು, ಅವರೆಲ್ಲರೂ ಇಲ್ಲಿ ಕಸ ತಂದು ಸುರಿಯುತ್ತಾರೆ. ಸರ್ಕಾರಿ ಶಾಲಾ ಪಕ್ಕದ ಚರಂಡಿಯು ತುಂಬಿಕೊಂಡು ಗಬ್ಬು ವಾಸನೆ ಬೀರುತ್ತಿದೆ. ಕಸ ಸಂಗ್ರಹ ಮತ್ತು ನಿರ್ವಹಣೆಗೆ ಪಂಚಾಯಿತಿಯು ಯಾವುದೇ ವ್ಯವಸ್ಥೆ ಮಾಡಿಲ್ಲ’ ಎಂದು ನಿವಾಸಿ ರವೀಶ್ ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

‘ಅರಣ್ಯ ಇಲಾಖೆಯವರು ಇಲ್ಲಿ ಸಸಿಗಳನ್ನು ನೆಟ್ಟಿದ್ದಾರೆ. ಪಾರ್ಥೇನಿಯಂ ಕಳೆ ಹೆಚ್ಚಾಗಿರುವುದರಿಂದ ಸಸಿಗಳು ಒಣಗಿ ಹೋಗಿವೆ. ಇಲ್ಲೆಲ್ಲ ವಿಷ ಜಂತುಗಳು ಸೇರಿಕೊಂಡಿವೆ. ಸಂಜೆ ವೇಳೆ ಸೊಳ್ಳೆ ಕಾಟ ಹೆಚ್ಚಾಗುತ್ತದೆ. ಜೋರು ಗಾಳಿ ಬೀಸಿದರೆ ಕೆಟ್ಟ ವಾಸನೆ ಬರತೊಡಗುತ್ತದೆ. ಈ ಸಂಬಂಧ ಪಂಚಾಯಿತಿ ಪಿಡಿಒ ಅವರಿಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ’ ಎಂದು ಅವರು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.