ADVERTISEMENT

ದಾಬಸ್ ಪೇಟೆ: ಬಿಸಿಲ ತಾಪಕ್ಕೆ ಉದುರುತ್ತಿವೆ ಮಾವಿನ ಕಾಯಿಗಳು

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2024, 19:42 IST
Last Updated 14 ಏಪ್ರಿಲ್ 2024, 19:42 IST
ರೈತ ತ್ಯಾಗರಾಜ್ ಅವರ ಮಾವಿನ ತೋಟ
ರೈತ ತ್ಯಾಗರಾಜ್ ಅವರ ಮಾವಿನ ತೋಟ   

ದಾಬಸ್ ಪೇಟೆ: ಏರುತ್ತಿರುವ ಬಿಸಿಲ ತಾಪಕ್ಕೆ ನೆಲಮಂಗಲ ತಾಲ್ಲೂಕು ಹಾಗೂ ದಾಬಸ್ ಪೇಟೆ ವ್ಯಾಪ್ತಿಯಲ್ಲಿನ ಮಾವಿನ ಮರಗಳಲ್ಲಿ ಕಾಯಿಗಳು ಉದುರುತ್ತಿದ್ದು, ಫಸಲು ಕಡಿಮೆಯಾಗುವ ಆತಂಕ ರೈತರನ್ನು ಕಾಡುತ್ತಿದೆ.

ತಾಲ್ಲೂಕಿನಲ್ಲಿ 1,259 ಹೆಕ್ಟೇರ್‌ ಪ್ರದೇಶದಲ್ಲಿ ಮಾವಿನ ಮರಗಳಿವೆ. ಈ ಬಾರಿ ಮಳೆ ಕೊರತೆಯಿಂದಾಗಿ ಮತ್ತು ಹೂ ಬಿಡುವ ಕಾಲಕ್ಕೆ ಮರಗಳು ಚಿಗುರಿದವು. ಇದರಿಂದಾಗಿ ಹೂವು ಕಡಿಮೆಯಾಯಿತು. ಇರುವ ಹೂವು ಹೀಚಾಗಿ, ಕಾಯಿ ಕಚ್ಚಿ ಬಲಿಯುತ್ತಿರುವ ಕಾಲಕ್ಕೆ ಬಿಸಿಲ ಝಳ ಹೆಚ್ಚಾಯಿತು. ಈಗ ಕಾಯಿಗಳು ಉದುರಲು ಆರಂಭಿಸಿವೆ.

‘ಇರುವಷ್ಟು ಕಾಯಿಗಳಾದರೂ ಉಳಿದುಕೊಂಡು, ಹಾಕಿರುವ ಬಂಡವಾಳವಾದರೂ ಕೈಗೆ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದೆವು. ಈಗ ಬಿಸಿಲ ತಪಕ್ಕೆ ಆ ಕಾಯಿಗಳೂ ಉದುರುತ್ತಿವೆ‘ ಎಂದು ರೈತ ತ್ಯಾಗರಾಜು ಬೇಸರ ವ್ಯಕ್ತಪಡಿಸಿದರು.‌

ADVERTISEMENT

ರೈತ ಪ್ರವೀಣ್, ‘ನಮ್ಮಲ್ಲಿ ನೀರಾವರಿ ವ್ಯವಸ್ಥೆ ಇಲ್ಲ. ಮಳೆ ಕೊರತೆಯ ಜೊತೆಗೆ, ಬಿರು ಬಿಸಿಲಿನಿಂದ ಇಳುವರಿಯೂ ಕುಸಿಯುತ್ತಿದೆ. ಸಿಕ್ಕ ಫಸಲಿಗೂ ಸೂಕ್ತ ಬೆಲೆ ಸಿಗುತ್ತದೋ ಇಲ್ಲವೋ ಗೊತ್ತಿಲ್ಲ‘ ಎಂದು ಬೇಸರಿಸಿದರು.

‘ಹೂವು ಉಳಿಸಿಕೊಳ್ಳುವುದಕ್ಕಾಗಿ ಔಷಧಿಗಳನ್ನು ಸಿಂಪಡಿಸಿದ್ದೆವು. ಈಗ ಅದೂ ವ್ಯರ್ಥವಾಗುತ್ತಿದೆ. ಮಾವಿನ ಬೆಳೆಯಲ್ಲಾದರೂ ಒಂದಷ್ಟು ಹಣ ಬಂದರೆ, ಮನೆಯ ಆರ್ಥಿಕ ಪರಿಸ್ಥಿತಿ ಸುಧಾರಿಸಬಹುದೆಂಬ ನಿರೀಕ್ಷೆ ಇತ್ತು. ಅದು ಹುಸಿಯಾಗುವಂತೆ ಕಾಣುತ್ತಿದೆ’ ಎಂದು ಅವರು ಅಳಲು ತೋಡಿಕೊಂಡರು.

‘ತೋಟಗಳಲ್ಲಿ ಹೂವು ಬಿಟ್ಟಾಗಲೇ ವ್ಯಾಪಾರಿಗಳಿಂದ ಮುಂಗಡವಾಗಿ ಒಂದಷ್ಟು ಹಣ ತೆಗೆದುಕೊಂಡಿದ್ದೇವೆ. ಈಗ ಕಾಯಿ ಉದುರುತ್ತಿರುವುದರಿಂದ ವ್ಯಾಪಾರಸ್ಥರು, ‘ನಮಗೆ ನಷ್ಟವಾಗುತ್ತದೆ‘ ಎಂದು ಇರುವ ಫಸಲನ್ನು ಕಡಿಮೆ ಬೆಲೆಗೆ ಕೇಳುತ್ತಿದ್ದಾರೆ. ಇದಕ್ಕೆ ಒಪ್ಪದಿದ್ದರೆ, ಗುತ್ತಿಗೆಯೇ ಬೇಡ ಎನ್ನುತ್ತಿದ್ದಾರೆ. ನಮಗೆ ದಿಕ್ಕೇ ತೋಚದಂತಾಗಿದೆ‘ ಎಂದರು ರೈತ ಮಂಜುನಾಥ್.

’ಮಾವಿನ ಬೆಳೆಗೆ 25 ಡಿಗ್ರಿ ಯಿಂದ 28 ಡಿಗ್ರಿ ತಾಪಮಾನ ಸೂಕ್ತ. ಆದರೆ ಈ ಬಾರಿ ತಾಲ್ಲೂಕಿನಲ್ಲಿ 32 ಡಿಗ್ರಿಯಿಂದ 35 ಡಿಗ್ರಿವರೆಗೆ ತಾಪಮಾನ ಇದೆ. ಇದರಿಂದ ಫಸಲು ಕಡಿಮೆಯಾಗುವ ಸಾಧ್ಯತೆ ಇದೆ’ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.