ಪ್ರಾತಿನಿಧಿಕ ಚಿತ್ರ
ಬೆಂಗಳೂರು: ‘ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮುಂದುವರಿಯುವುದಿದ್ದರೆ ನಮ್ಮ ತಕರಾರು ಇಲ್ಲ. ಅವರನ್ನು ಬದಲಾಯಿಸುವುದಿದ್ದರೆ ದಲಿತರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು’ ಎಂದು ದಲಿತ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ.
ಒಕ್ಕೂಟದ ಅಧ್ಯಕ್ಷ ಎಂ. ವೆಂಕಟಸ್ವಾಮಿ ಮಾತನಾಡಿ, ‘ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಸಮೀಪಿಸುತ್ತಿದ್ದಂತೆ ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎಂಬ ಚರ್ಚೆಗಳು ಆರಂಭವಾಗಿವೆ. ಜೊತೆಗೆ 2028ರ ಚುನಾವಣೆಯ ನಂತರ ಯಾರು ಮುಖ್ಯಮಂತ್ರಿ ಎಂಬ ಚರ್ಚೆಯೂ ನಡೆಯುತ್ತಿದೆ’ ಎಂದು ತಿಳಿಸಿದರು.
‘ಈ ಹಿಂದೆ ದಲಿತ ಸಂಘಟನೆಗಳು ದಲಿತ ಮುಖ್ಯಮಂತ್ರಿ ಹೋರಾಟ ಆರಂಭಿಸಿದ್ದರ ಫಲವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಉಪ ಮುಖ್ಯಮಂತ್ರಿ ಸ್ಥಾನವನ್ನು ದಲಿತರಿಗೆ ನೀಡುವಂತಾಗಿತ್ತು. ಈ ಬಾರಿ ಉಪ ಮುಖ್ಯಮಂತ್ರಿಯಲ್ಲ, ಮುಖ್ಯಮಂತ್ರಿ ಸ್ಥಾನವನ್ನೇ ನೀಡಬೇಕು’ ಎಂದು ಒತ್ತಾಯಿಸಿದರು.
ಬಿ. ಬಸವಲಿಂಗಪ್ಪ, ಮಲ್ಲಿಕಾರ್ಜುನಸ್ವಾಮಿ, ಎನ್. ರಾಚಯ್ಯ, ಬಿ.ರಾಚಯ್ಯ, ಕೆ.ಎಚ್. ರಂಗನಾಥ್, ಮಲ್ಲಿಕಾರ್ಜುನ ಖರ್ಗೆ ಮುಂತಾದವರು ಮುಖ್ಯಮಂತ್ರಿಯಾಗಲು ಅರ್ಹರಾಗಿದ್ದರು ಮತ್ತು ಅಂಥ ಸಂದರ್ಭಗಳು ಕೂಡಿ ಬಂದಿದ್ದವು. ಆದರೂ ಪ್ರಬಲ ಜಾತಿಗಳ ಒತ್ತಡಕ್ಕೆ ಮಣಿದು ಕಾಂಗ್ರೆಸ್ ದಲಿತರನ್ನು ಮುಖ್ಯಮಂತ್ರಿ ಮಾಡಲಿಲ್ಲ. ಈಗ ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್. ಮುನಿಯಪ್ಪ, ಜಿ. ಪರಮೇಶ್ವರ, ಸತೀಶ್ ಜಾರಕಿಹೊಳಿ ಕಾಂಗ್ರೆಸ್‌ನ ಶಿಸ್ತಿನ ಸಿಪಾಯಿಗಳಾಗಿ ಮುಖ್ಯಮಂತ್ರಿ ಸ್ಥಾನವನ್ನು ತುಂಬಲು ಸಮರ್ಥರಾಗಿದ್ದಾರೆ ಎಂದು ವಿವರಿಸಿದರು.
ಮುಖ್ಯಮಂತ್ರಿಯನ್ನು ಬದಲಾಯಿಸುವುದಿದ್ದರೆ ಈ ಬಾರಿ ದಲಿತರಿಗೇ ನೀಡಬೇಕು. ಇಲ್ಲದೇ ಇದ್ದರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಕಷ್ಟವಾಗಲಿದೆ. ದಲಿತ ಮುಖ್ಯಮಂತ್ರಿಗಾಗಿ ದಲಿತ ಸಂಘಟನೆಗಳು ಐಕ್ಯ ಹೋರಾಟ ಮಾಡಲಿವೆ ಎಂದು ಎಚ್ಚರಿಸಿದರು.
ವಿವಿಧ ದಲಿತ ಸಂಘಟನೆಗಳ ಮುಖಂಡರಾದ ಅಶ್ವತ್ಥ್ ಅಂತ್ಯಜ, ಲಯನ್ ಬಾಲಕೃಷ್ಣ, ಮುನಿ ಅಂಜನಪ್ಪ, ಮುತ್ತುರಾಜ್, ಸುಂದರೇಶ್, ಶಂಕರ್ ರಾಮಲಿಂಗಯ್ಯ, ಸಿದ್ದಾಪುರ ಮಂಜುನಾಥ್, ಬಿ.ಆರ್. ಮುನಿರಾಜ್, ಅಬ್ಬಿಗೆರೆ ರಾಜಣ್ಣ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.