ADVERTISEMENT

ಅಲೆಮಾರಿಗಳಿಗೆ ಮತ್ತೊಮ್ಮೆ ನಯವಂಚನೆ: ದ್ವಾರಕಾನಾಥ್

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2025, 23:30 IST
Last Updated 17 ಡಿಸೆಂಬರ್ 2025, 23:30 IST
<div class="paragraphs"><p>ಕಡತ</p></div>

ಕಡತ

   

(ಸಾಂದರ್ಭಿಕ ಚಿತ್ರ)

ಬೆಂಗಳೂರು: ‘ಪರಿಶಿಷ್ಟ ಜಾತಿಗಳ ಗುಂಪಿನಲ್ಲಿ ಅಸ್ಪೃಶ್ಯ ಅಲೆಮಾರಿ ಸಮುದಾಯಗಳು ಇತರೆ ಜಾತಿಗಳಿಗಿಂತ ಸಾಪೇಕ್ಷವಾಗಿ ಹೆಚ್ಚು ಹಿಂದುಳಿದಿದ್ದಾರೆ ಎನ್ನುವುದನ್ನೇ ತಾತ್ವಿಕವಾಗಿ ನಿರಾಕರಿಸಿರುವುದರ ಮೂಲಕ ಶೇ 1ರ ಮೀಸಲಾತಿ ನಿರಾಕರಣೆಗಿಂತಲೂ ದೊಡ್ಡ ನಯವಂಚನೆಯನ್ನು ಸರ್ಕಾರ ಮಾಡಿದೆ’ ಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್‌.ದ್ವಾರಕನಾಥ್ ದೂರಿದರು. 

ADVERTISEMENT

‘ಲಭ್ಯ ಅಂಕಿ ಅಂಶಗಳ ಆಧಾರದ ಮೇಲೆ ನಾಗಮೋಹನದಾಸ್ ಆಯೋಗವು ಪರಿಶಿಷ್ಟ ಜಾತಿಗಳಲ್ಲಿನ ಅಸ್ಪೃಶ್ಯ ಮತ್ತು ಸ್ಪೃಶ್ಯ ಜಾತಿಗಳಿಗೆ ಮೀಸಲಾತಿ ಹಂಚಿಕೆ ಸಂಬಂಧ ವರದಿ ನೀಡಿತ್ತು. ಆದರೆ, ಸರ್ಕಾರ ಆ ಪ್ರಕಾರ ಮೀಸಲಾತಿ ನೀಡಲಿಲ್ಲ. ಇದನ್ನು ಪ್ರಶ್ನಿಸಿ ಅಲೆಮಾರಿ ಸಮುದಾಯವು ನ್ಯಾಯಾಲಯದ ಮೆಟ್ಟಿಲೇರಿದೆ. ಆಯೋಗ ಅನುಸರಿಸಿದ ಮಾನದಂಡಗಳೇ ಮೂಲಭೂತವಾಗಿ ತಪ್ಪೆಂದು ಪರೋಕ್ಷವಾಗಿ ಸರ್ಕಾರ ವಾದಿಸಿದೆ. ಸರ್ಕಾರ ತಾನೇ ಮಾಡಿದ್ದ ಆಯೋಗವೊಂದರ ವರದಿಗೆ ತಾನೇ ವಿರುದ್ಧವಾಗಿ ವಾದಿಸಿರುವುದು ಇತಿಹಾಸದಲ್ಲಿ ಹಿಂದೆಂದೂ ಕಂಡ ದಾಖಲೆಗಳಿಲ್ಲ’ ಎಂದಿದ್ದಾರೆ.

‘ಅಸ್ಪೃಶ್ಯ ಅಲೆಮಾರಿ ಸಮುದಾಯಗಳಿಗೆ ಶೇ 1ರ ಮೀಸಲಾತಿಯನ್ನು ಕೊಡುವ ಬಗ್ಗೆ ಪೂರಕ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಸರ್ಕಾರ ಹೇಳಿತ್ತು. ಸದ್ಯಕ್ಕೆ ಅದನ್ನು ಜಾರಿ ಮಾಡಲು ಸಾಧ್ಯವಾಗದೆ ಇರುವುದಕ್ಕೆ ತಾತ್ಕಾಲಿಕ ಮತ್ತು ಆಡಳಿತಾತ್ಮಕ ಕಾರಣಗಳಿವೆ ಎಂದು ಹೇಳುತ್ತಿದೆ. ಆಗ ಕೊಟ್ಟ ಭರವಸೆಗಳು ಬೂಟಾಟಿಕೆಯ ಮತ್ತು ನಯವಂಚಕತನದ ಹೇಳಿಕೆಗಳು ಎಂಬುದು ಈಗ ಸಾಬೀತಾಗಿದೆ’ ಎಂದು ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.