
ಬೆಂಗಳೂರು: ‘ದಲಿತ ಜನಾಂಗವು 70–80 ವರ್ಷಗಳಿಂದ ಮೀಸಲಾತಿಯ ಉಪಯೋಗ ಪಡೆದುಕೊಂಡು ಮೀಸಲಾತಿಯ ಹುಚ್ಚು ಹಿಡಿಸಿಕೊಂಡಿದೆ. ಇನ್ನು ಮುಂದೆ ಅದನ್ನು ಮರೆಯಬೇಕು’ ಎಂದು ನಿವೃತ್ತ ಐಎಎಸ್ ಅಧಿಕಾರಿ, ರಾಜ್ಯ ಭೋವಿ ಸಂಘದ ಅಧ್ಯಕ್ಷ ಎಸ್.ಎಲ್. ಗಂಗಾಧರಪ್ಪ ಸಲಹೆ ನೀಡಿದರು.
ಕರ್ನಾಟಕ ರಾಜ್ಯ ಭೋವಿ (ವಡ್ಡರ) ಸಂಘವು ಭಾನುವಾರ ನಗರದಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಪುಸ್ತಕಗಳ ಜನಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸಂವಿಧಾನ ರಚಿಸಿದ ಡಾ. ಬಿ.ಆರ್. ಅಂಬೇಡ್ಕರ್ ಅವರು ಮೀಸಲಾತಿಯನ್ನು 10 ವರ್ಷ ಮಾತ್ರ ನೀಡಬೇಕು, ನಂತರ ಕೊಡಬಾರದು ಎಂದು ಬರೆದಿದ್ದರು. ಆದರೆ, ರಾಜಕೀಯ, ಸಾಮಾಜಿಕ ಸೇರಿದಂತೆ ಅನೇಕ ಕಾರಣಗಳಿಂದ ಪ್ರತಿ 10 ವರ್ಷಕ್ಕೆ ಅದು ಮುಂದುವರಿದಿದೆ. ಮುಂದಿನ ವರ್ಷಕ್ಕೆ 80 ವರ್ಷ ಆಗಲಿದೆ. ಮತ್ತೆ 10 ವರ್ಷ ಮುಂದಕ್ಕೆ ಹೋಗುತ್ತದಾ ಅಥವಾ ಅಲ್ಲಿಗೆ ಕೊನೆಗೊಳ್ಳುತ್ತದಾ ಎಂಬುದು ಗೊತ್ತಿಲ್ಲ’ ಎಂದು ಹೇಳಿದರು.
‘ಮೀಸಲಾತಿಗೆ ಸಂಬಂಧಿಸಿದಂತೆ ಬಹಳ ದೊಡ್ಡಮಟ್ಟದಲ್ಲಿ ರಾಜಕೀಯ ನಡೆಯುತ್ತಿದೆ. ರಾಜ್ಯ, ಕೇಂದ್ರದಲ್ಲಿಯೂ ರಾಜಕೀಯ ನಡೆಯುತ್ತಿರುವುದರಿಂದ ಮೀಸಲಾತಿಯನ್ನು ನಂಬಿಕೊಂಡು ಯಾರೂ ಹೋಗಬಾರದು ಎಂಬುದು ನನ್ನ ಅಭಿಪ್ರಾಯ. ಎಲ್ಲರೂ ಅವರವರ ಶಕ್ತಿ, ಪರಿಶ್ರಮದಿಂದ ಮುಂದೆ ಬರಬೇಕು. ಮೀಸಲಾತಿ ಇದೆ, ಟೀಚರ್ ಆಗ್ತೀನಿ, ಕೆಎಎಸ್ ಅಧಿಕಾರಿ ಆಗ್ತೀನಿ ಎಂಬುದನ್ನು ಬಿಟ್ಟುಬಿಡಬೇಕು’ ಎಂದು ತಿಳಿಸಿದರು.
‘ಮೀಸಲಾತಿ ಎಲ್ಲಿಯವರೆಗೆ ಇರುತ್ತದೆಯೋ ಅಲ್ಲಿಯವರೆಗೆ ಅದರ ಫಲವನ್ನು ಅನುಭವಿಸಿ. ಆದರೆ, ಅದನ್ನೇ ನಂಬಿಕೊಂಡು ಕೊನೆವರೆಗೆ ಇದ್ದೇ ಇರುತ್ತದೆ ಎಂದು ವಿಶ್ವಾಸ ಇಟ್ಟುಕೊಂಡು ಅದಕ್ಕೆ ಜೋತು ಬೀಳುವುದು ಒಳ್ಳೆಯದಲ್ಲ. ಆದಷ್ಟು ಬೇಗ ಮೀಸಲಾತಿ ಹುಚ್ಚು ತೊಲಗಬೇಕು’ ಎಂದರು.
ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಮಾತನಾಡಿ, ‘ಹಿಂದುಳಿದ ವರ್ಗಗಳಿಗೆ ಕೇಂದ್ರದಲ್ಲಿ ಮೀಸಲಾತಿ ಇರಲಿಲ್ಲ. ಮಂಡಲ್ ಆಯೋಗವು ಶೇ 27ರಷ್ಟು ಶಿಫಾರಸು ಮಾಡಲಾಗಿದ್ದರೂ ಜಾರಿಯಾಗಿರಲಿಲ್ಲ. ನಾನು ಕೇಂದ್ರ ಸಚಿವನಾಗಿದ್ದಾಗ ಜಾರಿ ಮಾಡಲು ಹೊರಟರೆ ಅಲ್ಲಿನ ಐಎಎಸ್ ಅಧಿಕಾರಿಗಳೇ ಅಡ್ಡಿಪಡಿಸಿದರು. ಗುಣಮಟ್ಟ ಕುಸಿಯುತ್ತದೆ ಎಂದೆಲ್ಲ ಸಬೂಬು ಹೇಳಿದರು. ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುವುದನ್ನು ವಿರೋಧಿಸಿ ಕೆಲವರು ಸುಪ್ರೀಂಕೋರ್ಟ್‌ಗೆ ಹೋದರು. ಸರ್ಕಾರದ ಪರವಾಗಿ ಬೇಕಾದ ದಾಖಲೆಗಳನ್ನು ಸುಪ್ರೀಂಕೋರ್ಟ್‌ಗೆ ಸಲ್ಲಿಸಬೇಕಿತ್ತು. ಆ ಕೆಲಸವನ್ನು ಕೂಡ ಐಎಎಸ್ ಅಧಿಕಾರಿಗಳು ಮಾಡಲಿಲ್ಲ’ ಎಂದು ನೆನಪು ಮಾಡಿಕೊಂಡರು.
‘ಸುಪ್ರೀಂಕೋರ್ಟ್‌ನಲ್ಲಿ ಈ ಪ್ರಕರಣ ಬಿದ್ದುಹೋಗುವ ಸಂಭವ ಇತ್ತು. ಕೊನೇ ಕ್ಷಣದಲ್ಲಿ ಈ ಬಗ್ಗೆ ಮಾಹಿತಿ ಪಡೆದು ಎಲ್ಲ ದಾಖಲೆಗಳನ್ನು ಒದಗಿಸಿ ಸರ್ಕಾರದ ಪರವಾಗಿ ತೀರ್ಪು ಬರುವಂತೆ ಮಾಡಿದೆ. ಇವತ್ತು ಎಲ್ಲ ರಾಜ್ಯಗಳಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಸಿಕ್ಕಿದೆ’ ಎಂದರು.
ಸಂಘದ ಪ್ರಧಾನ ಕಾರ್ಯದರ್ಶಿ ಚೌಡಯ್ಯ ರಚಿಸಿದ ‘ಎಸ್.ಎಲ್. ಗಂಗಾಧರಪ್ಪ ಇಟ್ಟಹೆಜ್ಜೆ ದಿಟ್ಟ ನಿಲುವು’, ‘ಈ ನೆಲದ ಗುಣ’, ‘ಪ್ರವಾಸ ಕಥನ’ ಕೃತಿಗಳು ಜನಾರ್ಪಣೆಗೊಂಡವು.
ಕೆಪಿಎಸ್‌ಸಿ ಸದಸ್ಯ ವಿ. ದೇವಪ್ಪ, ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್, ಮಹಾರಾಣಿ ಕ್ಲಸ್ಟರ್ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕ ಕೆ.ವೈ. ನಾರಾಯಣ ಸ್ವಾಮಿ, ನೆಲಮಂಗಲ ಸಿದ್ಧಗಂಗಾ ಪ್ರಥಮದರ್ಜೆ ಕಾಲೇಜು ಪ್ರಾಂಶುಪಾಲ ಕೆ.ಎನ್. ಅಮರೇಂದ್ರ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ, ಸಂಘದ ಉಪಾಧ್ಯಕ್ಷ ಎಂ.ಬಿ. ಮಲ್ಲೇಶ್, ಸೀತಾಲಕ್ಷ್ಮೀ ಗಂಗಾಧರಪ್ಪ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.