ADVERTISEMENT

26ಕ್ಕೆ ದಲಿತ ಸಂಘಟನೆಗಳ ಒಕ್ಕೂಟದಿಂದ ‘ಸುವರ್ಣ ಸೌಧ ಚಲೋ’

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2022, 15:58 IST
Last Updated 23 ಡಿಸೆಂಬರ್ 2022, 15:58 IST

ಬೆಂಗಳೂರು: ಭೂ ಪರಭಾರೆ ನಿಷೇಧ ಕಾಯ್ದೆಯ (ಪಿಟಿಸಿಎಲ್‌) ಸಮಗ್ರ ತಿದ್ದುಪಡಿ ಮಸೂದೆಯನ್ನು ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಅಂಗೀಕರಿಸುವಂತೆ ದಲಿತ ಸಂಘಟನೆಯ ಒಕ್ಕೂಟಆಗ್ರಹಿಸಿದ್ದು, ಈ ಸಂಬಂಧಇದೇ 26ರಂದು ಸುವರ್ಣ ಸೌಧ ಚಲೋ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ.

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಎಂ. ವೆಂಕಟಸ್ವಾಮಿ, ‘ಪರಿಶಿಷ್ಟ ಜಾತಿ ಮತ್ತು ಪಂಗಡದವರ ಭೂಮಿ ಬಲಾಢ್ಯರ ಪಾಲಾಗುವುದನ್ನು ತಪ್ಪಿಸಲು, ಡಿ. ದೇವರಾಜ ಅರಸು ಮತ್ತು ಬಿ. ಬಸವಲಿಂಗಪ್ಪ ಅವರ ದಲಿತ ಪರ ಕಾಳಜಿಯಿಂದಾಗಿ ಈ ಕಾಯ್ದೆ 1978ರಲ್ಲಿ ಜಾರಿಗೆ ಬಂದಿತ್ತು. ಈ ಕಾಯ್ದೆಯಡಿ ಸಲ್ಲಿಕೆಯಾಗುವ ಅರ್ಜಿಗಳನ್ನು ಉಪವಿಭಾಗಾಧಿಕಾರಿ ಮತ್ತು ಜಿಲ್ಲಾಧಿಕಾರಿ ನ್ಯಾಯಾಲಯಗಳು ತಿರಸ್ಕರಿಸುತ್ತಿವೆ. ನ್ಯಾಯಾಲಯಗಳು ಅದೇ ರೀತಿ ತೀರ್ಪುಗಳನ್ನು ನೀಡುತ್ತಿವೆ. ಇದರಿಂದಾಗಿ ದಲಿತರು ಭೂಮಿ ವಂಚಿತರಾಗುತ್ತಿದ್ದಾರೆ. ಆದ್ದರಿಂದ ತಿದ್ದುಪಡಿ ಮಸೂದೆ ಅಂಗೀಕರಿಸುವಂತೆ ಆಗ್ರಹಿಸಿ ಹೋರಾಟ ನಡೆಸಲಾಗುತ್ತಿದೆ’ ಎಂದು ಹೇಳಿದರು.

‘ಗ್ರಾಮ ಸೇವಕರಾಗಿ ಸೇವೆ ನಿರ್ವಹಿಸುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದತೋಟಿ, ತಳವಾರ, ನೀರಗಂಟಿ ಮುಂತಾದ ಜಾತಿಯ ಸುಮಾರು 12 ಸಾವಿರ ನೌಕರರನ್ನು ಕಾಯಂಗೊಳಿಸಿ, ಸರ್ಕಾರ ಆದೇಶ ಹೊರಡಿಸಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಾಂಗದ ಅಭಿವೃದ್ಧಿಗಾಗಿ ಮೀಸಲಿಟ್ಟಿರುವ ಹಣ ದುರ್ಬಳಕೆಯಾಗುತ್ತಿದೆ. ಸರ್ಕಾರ ಪ್ರಸ್ತುತ ಹಣಕಾಸು ವರ್ಷದಲ್ಲಿ ಹಂಚಿಕೆ ಮಾಡಿದ್ದ ಹಣದಲ್ಲಿ ಶೇ 34 ರಷ್ಟು ಅನುದಾನ ಮಾತ್ರ ವಿನಿಯೋಗವಾಗಿದೆ. ಆದ್ದರಿಂದ ಅನುದಾನದ ದುರ್ಬಳಕೆಯನ್ನು ತಡೆಯಬೇಕು’ ಎಂದು ಆಗ್ರಹಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.