ADVERTISEMENT

ದೆಹಲಿಯ ನೃತ್ಯಗಾರ್ತಿ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2020, 20:01 IST
Last Updated 13 ಫೆಬ್ರುವರಿ 2020, 20:01 IST

ಬೆಂಗಳೂರು: ನೃತ್ಯ ಪ್ರದರ್ಶನಕ್ಕೆ ಅವಕಾಶ ಕೊಡಿಸುವುದಾಗಿ ಹೇಳಿ 31 ವರ್ಷದ ದೆಹಲಿ ನೃತ್ಯಗಾರ್ತಿಯೊಬ್ಬರನ್ನು ಬೆಂಗಳೂರಿಗೆ ಕರೆತಂದು ಅನೈತಿಕ ಚಟುವಟಿಕೆಗೆ ದೂಡಲು ಯತ್ನಿಸಿದ ಮಹಿಳೆಯರ ತಂಡವೊಂದನ್ನು ಪೊಲೀಸರು ಭೇದಿಸಿದ್ದಾರೆ.

ನೇಹ ಎಂಬ ಮಹಿಳೆ ಜತೆ ಮಂಗಳವಾರ ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಬಂದಿಳಿದ ನೃತ್ಯಗಾರ್ತಿಯನ್ನು ಪೊಲೀಸರು ರಕ್ಷಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರೀತಿ ಎಂಬುವವರನ್ನು ಬಂಧಿಸಲಾಗಿದೆ.

ಸೋನಿಯಾ (31) ಹಾಗೂ ಗುರುಮಿತ್‌ಸಿಂಗ್‌ (38) ಎಂಬುವರು ಇವರಿಗೆ ನೃತ್ಯ ಪ್ರದರ್ಶನಕ್ಕೆ ಅವಕಾಶ ಕೊಡಿಸುವುದಾಗಿ ಭರವಸೆ ನೀಡಿದ್ದರು. ಇವರಿಬ್ಬರೂ ಪಂಜಾಬ್‌ನ ಅಮೃತ್‌ಸರದವರು.

ADVERTISEMENT

ಕಳೆದ ತಿಂಗಳು ನೃತ್ಯಗಾರ್ತಿಗೆ ಕರೆ ಮಾಡಿದ ಸೋನಿಯಾ, ಮಾಸಿಕ ₹ 40 ಸಾವಿರ ಸಂಬಳ ಕೊಡಿಸುವುದಾಗಿ ಭರವಸೆ ನೀಡಿದ್ದರು. ಆನಂತರ ಅವರಿಗೆ ಗುರುಮಿತ್‌ ಸಿಂಗ್‌ ಅವರನ್ನು ಪರಿಚಯಿಸಿದ್ದರು. ನೇಹ ಅವರ ಜೊತೆ ಬೆಂಗಳೂರಿಗೆ ಹೋದರೆ ಪ್ರೀತಿ ಎಂಬುವರು ನಿಮಗೆ ಕೆಲಸ ಕೊಡುತ್ತಾರೆ ಎಂದಿದ್ದರು. ಆದರೆ, ಬೆಂಗಳೂರಿಗೆ ಬರುವ ಮಾರ್ಗದಲ್ಲಿ, ‘ನೀನು ಪುರುಷರ ದೈಹಿಕ ಅಗತ್ಯಗಳನ್ನು ಪೂರೈಸಬೇಕು’ ಎಂದು ನೇಹ ನೃತ್ಯಗಾರ್ತಿಗೆ ತಿಳಿಸಿದ್ದರು. ಆತಂಕಕ್ಕೆ ಒಳಗಾದ ಅವರು ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಗೆ ರಕ್ಷಣೆಗಾಗಿ ಮನವಿ ಮಾಡಿದರು.

ಪ್ರೀತಿ ಅವರನ್ನು ಬಂಧಿಸಲಾಗಿದ್ದು, ಉಳಿದವರಿಗಾಗಿ ಹುಡುಕಾಟ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.