ADVERTISEMENT

ದರ್ಶನ್‌ಗೆ ಸಿಮ್ ನೀಡಿದ್ದ ಆಪ್ತನ ವಿಚಾರಣೆ

ಪೊಲೀಸರಿಂದ ಹೇಳಿಕೆ ದಾಖಲು: ಮತ್ತಷ್ಟು ಮಂದಿ ಸಾಕ್ಷಿಗಳಿಗಾಗಿ ಶೋಧ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2024, 16:34 IST
Last Updated 4 ಆಗಸ್ಟ್ 2024, 16:34 IST
ದರ್ಶನ್
ದರ್ಶನ್   

ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿಯಾಗಿರುವ ನಟ ದರ್ಶನ್‌ಗೆ ಸಿಮ್ ಖರೀದಿಸಿ ನೀಡಿದ್ದ ಆಪ್ತನನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ದರ್ಶನ್ ಅವರು ಬೇರೊಬ್ಬರ ಹೆಸರಿನಲ್ಲಿರುವ ಸಿಮ್‌ ಬಳಕೆ ಮಾಡುತ್ತಿದ್ದರು ಎಂಬುದು ಪೊಲೀಸರ ತನಿಖೆಯಿಂದ ಗೊತ್ತಾಗಿತ್ತು. ಹಾಗಾಗಿ ಸಿಮ್ ಖರೀದಿದಾರರನ್ನು ಪತ್ತೆ ಮಾಡಿ, ಅವರನ್ನು ಕರೆತಂದು ವಿಚಾರಣೆ ನಡೆಸಿ, ಹೇಳಿಕೆಗಳನ್ನು ದಾಖಲು ಮಾಡಿಕೊಂಡಿದ್ದಾರೆ.

ಸಾಕ್ಷ್ಯ ನಾಶಕ್ಕೆ ಜೈಲಿನಿಂದಲೇ ಯತ್ನ ನಡೆಯುತ್ತಿದೆ ಎಂಬ ಮಾಹಿತಿ ಹೊರ ಬಿದ್ದ ಬೆನ್ನಲ್ಲೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಕೊಲೆ ಪ್ರಕರಣದಿಂದ ಪಾರಾಗಲು ಸ್ನೇಹಿತನ ಹೆಸರಿನಲ್ಲಿ ದರ್ಶನ್ ಸಿಮ್ ಕಾರ್ಡ್‌ ಖರೀದಿಸಿದ್ದರು. ಮೊದಲಿನಿಂದಲೂ ದರ್ಶನ್ ಬೇರೆಯವರ ಹೆಸರಿನ ಸಿಮ್‌ ಕಾರ್ಡ್ ಬಳಸುತ್ತಿದ್ದರು. ತನ್ನ ಹೆಸರಿನಲ್ಲಿ ಸಿಮ್ ಖರೀದಿಸಿಲ್ಲ. ದರ್ಶನ್ ಈ ನಡೆ ಹಲವು ಅನುಮಾನ ಹುಟ್ಟಿಸಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ADVERTISEMENT

ಸಿಮ್‌ ಖರೀದಿಸಿ ನೀಡಿದ್ದವರನ್ನು ವಶಕ್ಕೆ ಪಡೆದಿರುವ ಪೊಲೀಸರು, ‘ನಿನ್ನ ಹೆಸರಿನಲ್ಲಿ ದರ್ಶನ್‌ ಸಿಮ್‌ ಕಾರ್ಡ್‌ ತೆಗೆದುಕೊಂಡಿದ್ದು ಏಕೆ? ಯಾವ ಉದ್ದೇಶಕ್ಕೆ ನಿನ್ನ ಹೆಸರಿನ ಸಿಮ್ ಕಾರ್ಡ್ ಬಳಸುತ್ತಿದ್ದರು? ಸಿಮ್ ಖರೀದಿ ವೇಳೆ ದರ್ಶನ್ ಏನು ಹೇಳಿದ್ದರು? ಹಲವು ಸ್ನೇಹಿತರು ಇದ್ದರೂ ನಿನ್ನ ಹೆಸರಿನಲ್ಲೇ ಸಿಮ್ ಖರೀದಿ ಮಾಡಲು ಕಾರಣವೇನು? ಸಿಮ್‌ ಖರೀದಿಗೆ ದರ್ಶನ್‌ ಹೇಳಿದ್ದರೆ? ಅಥವಾ ಬೇರೆಯವರಾ?’ ಎಂಬ ಪ್ರಶ್ನೆಗಳನ್ನು ಕೇಳಿ, ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್‌ ಮೂಲಗಳು ಹೇಳಿವೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೆ 12 ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಲಾಗಿತ್ತು. ಹೊಸದಾಗಿ ಏಳು ಸಾಕ್ಷಿಗಳ ಹೇಳಿಕೆಯನ್ನು ದಾಖಲಿಸಲಾಗಿದೆ. ಸ್ಟೋನಿ ಬ್ರೂಕ್ಸ್‌ ಹೋಟೆಲ್‌ನ ಮೂವರು ಸಿಬ್ಬಂದಿ ಸೇರಿ ದರ್ಶನ್‌ಗೆ ಸಿಮ್‌ ಕಾರ್ಡ್‌ ಕೊಟ್ಟಿದ್ದ ಸ್ನೇಹಿತನನ್ನು ಸಾಕ್ಷಿಯನ್ನಾಗಿ ಮಾಡಲಾಗಿದೆ. ಒಟ್ಟು 19 ಪ್ರಮುಖ ಸಾಕ್ಷಿಗಳ ಹೇಳಿಕೆಗಳನ್ನು ವಿಡಿಯೊ ರೆಕಾರ್ಡ್‌ ಮಾಡಲಾಗಿದೆ ಎಂದು ಮೂಲಗಳು ಹೇಳಿವೆ. 

ನ್ಯಾಯಾಲಯಕ್ಕೆ ದೋಷರೋಪಣಾ ಪಟ್ಟಿ ಸಲ್ಲಿಸುವಷ್ಟರಲ್ಲಿ ತನಿಖಾ ತಂಡ ಮತ್ತಷ್ಟು ಸಾಕ್ಷ್ಯಗಳನ್ನು ಸಂಗ್ರಹಿಸಲು ಯತ್ನಿಸುತ್ತಿದೆ. 

ಚಹರೆ ಗುರುತಿಸುವಿಕೆ: ದರ್ಶನ್ ಮನೆಯ ಸಿಸಿಟಿವಿ ಕ್ಯಾಮೆರಾದ ಡಿವಿಆರ್‌ ದತ್ತಾಂಶವನ್ನು ಮರು ಸಂಗ್ರಹ ಬಳಿಕ ಈಗ ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಆರೋಪಿಗಳ ಚಹರೆ ಗುರುತಿಸುವ ಕೆಲಸ ಮಾಡುತ್ತಿದ್ದಾರೆ. ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗಿರುವ ವ್ಯಕ್ತಿ ಹಾಗೂ ಬಂಧಿತರ ಫೋಟೊಗಳನ್ನು ಹೋಲಿಕೆ ಮಾಡಿ ಸಾಮ್ಯತೆಯನ್ನು ಖಚಿತ ಪಡಿಸಿಕೊಳ್ಳುತ್ತಿದ್ದಾರೆ.

ಅಭಿಮಾನಿಗಳಿಂದ ಬೆದರಿಕೆ: ದೂರು ದರ್ಶನ್ ಅಭಿಮಾನಿಗಳು ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಡಾ. ರಾಜ್‌ಕುಮಾರ್‌ ಅಭಿಮಾನಿ ಯೋಗಿ ಎಂಬುವರು ಪಶ್ಚಿಮ ವಿಭಾಗದ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದರ್ಶನ್ ಅಭಿಮಾನಿಗಳು ಎಂದು ಹೇಳಿಕೊಂಡಿರುವ ರಂಗಾರೆಡ್ಡಿ ನಾಗರಾಜ್ ದಚ್ಚು ವಿಶ್ವಾಸ್‌ ವಿರೇಶ್‌ ಎಂಬುವರು ‘ಡಿ ಬಾಸ್ ಅಭಿಮಾನಿ‘ ‘ಡಿ ಬಾಸ್ ಅಡ್ಡ’ ಕಿಂಗ್ ಬಸವ’ ಎಂಬ ಫೇಸ್‌ಬುಕ್ ಖಾತೆಗಳಿಂದ ಬೆದರಿಕೆ ಸಂದೇಶ ಬಂದಿದೆ. ಅಲ್ಲದೇ ಮೊಬೈಲ್‌ಗೆ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ’ ಎಂದು ಯೋಗಿ ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.