ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಇತರ ಆರೋಪಿಗಳ ವಿರುದ್ಧ ದಾಖಲಾಗಿದ್ದ ದೋಷಾರೋಪ ನಿಗದಿಪಡಿಸುವ ದಿನಾಂಕವನ್ನು ನಗರದ 57ನೇ ಸಿಸಿಎಚ್ ನ್ಯಾಯಾಲಯ ನವೆಂಬರ್ 3ಕ್ಕೆ ಮುಂದೂಡಿದೆ.
ದರ್ಶನ್ ಪರ ವಕೀಲರ ಮನವಿ ಆಲಿಸಿದ ನ್ಯಾಯಾಲಯ, ದೋಷಾರೋಪ ನಿಗದಿಯನ್ನು ನವೆಂಬರ್ 3ಕ್ಕೆ ಮುಂದೂಡಿ ಆದೇಶಿಸಿತು.
ದರ್ಶನ್, ಪವಿತ್ರಾಗೌಡ ಸೇರಿದಂತೆ ಆರು ಆರೋಪಿಗಳನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಶುಕ್ರವಾರ ಹಾಜರುಪಡಿಸಲಾಯಿತು. ವಿಚಾರಣೆ ಮುಗಿದ ಬಳಿಕ ದೋಷಾರೋಪ ನಿಗದಿ ಮಾಡುವ ದಿನ ಎಲ್ಲ ಆರೋಪಿಗಳೂ ಹಾಜರಾಗಬೇಕು ಎಂದು ನ್ಯಾಯಾಲಯ ಸೂಚಿಸಿತು.
ದರ್ಶನ್ ಪರ ವಾದ ಮಂಡಿಸಿದ ವಕೀಲ ಸುನೀಲ್, ತಮ್ಮ ಕಕ್ಷಿದಾರರಿಗೆ ಯಾವುದೇ ಸೂಚನೆಗಳನ್ನು ನೀಡಿಲ್ಲ. ಹೀಗಾಗಿ ಖುದ್ದು ಹಾಜರುಪಡಿಸಲು ಅನುಮತಿ ನೀಡಬೇಕು. ವಿಚಾರಣೆಗೂ ಮುನ್ನ ಎರಡು ವಾರ ಕಾಲಾವಕಾಶ ಕೊಡಬೇಕು ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ಜೈಲಿಗೆ ತೆರಳಿ ಸೂಚನೆಗಳನ್ನು ನೀಡುವಂತೆ ನಟನ ಪರ ವಕೀಲರಿಗೆ ತಿಳಿಸಿದರು. ಜೊತೆಗೆ ವಕೀಲರ ಭೇಟಿಗೆ ಅವಕಾಶ ಕಲ್ಪಿಸುವಂತೆ ಜೈಲಧಿಕಾರಿಗಳಿಗೆ ನಿರ್ದೇಶಿಸಿದರು.
ಏನಿದು ದೋಷಾರೋಪ ನಿಗದಿ ?: ದರ್ಶನ್ ಹಾಗೂ ಇತರೆ ಆರೋಪಿಗಳ ವಿರುದ್ಧ ಪೊಲೀಸರು ಮಾಡಿರುವ ಆರೋಪಗಳನ್ನು ಆರೋಪಿಗಳಿಗೆ ಓದಿ ಹೇಳಲಾಗುತ್ತದೆ. ನಂತರ ಈ ಆರೋಪಗಳನ್ನು ಒಪ್ಪಿಕೊಳ್ಳುತ್ತೀರಾ ಎಂದು ನ್ಯಾಯಾಲಯ ಪ್ರಶ್ನಿಸಲಿದೆ. ಒಪ್ಪಿಕೊಂಡರೆ ಶಿಕ್ಷೆ ಪ್ರಕಟವಾಗಲಿದೆ. ನಿರಾಕರಿಸಿದರೆ, ಸಾಕ್ಷಿಗಳ ವಿಚಾರಣೆ ಮುಂದುವರಿಯಲಿದೆ.
ಏನಿದು ಪ್ರಕರಣ ?: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ 2024ರ ಜೂನ್ 11ರಂದು ನಟ ದರ್ಶನ್, ಪವಿತ್ರಾ ಗೌಡ ಸೇರಿ ಹಲವರು ಬಂಧಿಸಲಾಗಿತ್ತು. ಬಳಿಕ ದರ್ಶನ್ ಸೇರಿ ಏಳು ಆರೋಪಿಗಳಿಗೆ ಡಿಸೆಂಬರ್ 13ರಂದು ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಈ ಆದೇಶ ಪ್ರಶ್ನಿಸಿದ್ದ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. 2025ರ ಆಗಸ್ಟ್ 14ರಂದು ಸುಪ್ರೀಂಕೋರ್ಟ್ ಜಾಮೀನು ರದ್ದುಗೊಳಿಸಿತ್ತು. ಸದ್ಯ ಪ್ರಕರಣದ 7 ಆರೋಪಿಗಳು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.