ADVERTISEMENT

'ನನಗೆ ಮಾತ್ರ ವಿಷ ಕೊಡಿಸಿ': ನ್ಯಾಯಾಧೀಶರ ಎದುರು ಅಲವತ್ತುಕೊಂಡ ನಟ ದರ್ಶನ್‌

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2025, 15:48 IST
Last Updated 9 ಸೆಪ್ಟೆಂಬರ್ 2025, 15:48 IST
ದರ್ಶನ್‌ 
ದರ್ಶನ್‌    

ಬೆಂಗಳೂರು: ‘ಜೈಲಿನಲ್ಲಿ ಕನಿಷ್ಠ ಮೂಲ ಸೌಲಭ್ಯಗಳನ್ನೂ ನೀಡುತ್ತಿಲ್ಲ. ಬ್ಯಾರಕ್‌ನಿಂದ ಹೊರಗೆ ಬರುವುದಕ್ಕೂ ಬಿಡುತ್ತಿಲ್ಲ. ಮೈಮೇಲೆ ಬಿಸಿಲು ಬಿದ್ದು 25 ದಿನಗಳೇ ಆಗಿವೆ. ಕೈಯಲ್ಲಿ ಫಂಗಸ್‌ ಕಾಣಿಸಿಕೊಂಡಿದೆ (ಚರ್ಮದ ಅಲರ್ಜಿ). ಬೇರೆ ಯಾರಿಗೂ ಬೇಡ; ನನಗೆ ಮಾತ್ರ ವಿಷ ನೀಡಲಿ. ಈ ಸಂಬಂಧ ಕೋರ್ಟ್‌ ಆದೇಶ ನೀಡಲಿ...’

ಹೀಗೆ ನ್ಯಾಯಾಧೀಶರ ಎದುರು ಅಲವತ್ತುಕೊಂಡಿದ್ದು ರೇಣುಕಸ್ವಾಮಿ ಕೊಲೆ ಪ್ರಕರಣದ ಎರಡನೇ ಆರೋಪಿ, ನಟ ದರ್ಶನ್‌.

‘ದರ್ಶನ್‌ ಅವರನ್ನು ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಬೇಕು’ ಎಂದು ಪ್ರಾಸಿಕ್ಯೂಷನ್‌ ಪರವಾಗಿ ವಕೀಲರು 57ನೇ ಸಿಸಿಎಚ್‌ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಧೀಶರು ಆದೇಶವನ್ನು ಮಂಗಳವಾರ ಪ್ರಕಟಿಸುವುದಾಗಿ ಕಾಯ್ದಿರಿಸಿದ್ದರು.

ADVERTISEMENT

ಮಂಗಳವಾರ ಆದೇಶ ಪ್ರಕಟಿಸುವುದಕ್ಕೂ ಮುನ್ನ ದರ್ಶನ್ ಅವರನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಜೈಲಧಿಕಾರಿಗಳು, ವಿಡಿಯೊ ಕಾನ್ಪರೆನ್ಸ್‌ ಮೂಲಕ ನ್ಯಾಯಾಧೀಶರ ಎದುರು ಹಾಜರು ಪಡಿಸಿದರು.

ಆಗ, ದರ್ಶನ್‌ ಅವರು ‘ನನ್ನದೊಂದು ಮನವಿ ಇದೆ. ದಯವಿಟ್ಟು ಆಲಿಸಿ. ಜೈಲಧಿಕಾರಿಗಳಿಗೆ ಸೂಚಿಸಬೇಕು’ ಎಂದು ಅಳಲು ತೋಡಿಕೊಂಡರು. ಆಗ ನ್ಯಾಯಾಧೀಶರು ಏನು ಎಂದು ಪ್ರಶ್ನಿಸಿದಾಗ ‘ನನಗೆ ವಿಷ ನೀಡಲಿ’ ಎಂಬುದಾಗಿ ದರ್ಶನ್‌ ಕೇಳಿಕೊಂಡರು. ಅದಕ್ಕೆ ನ್ಯಾಯಾಧೀಶರು, ‘ನೀವು ಹಾಗೆ ಹೇಳುವಂತಿಲ್ಲ. ಜೈಲಿನ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಯಾವ ಸೂಚನೆ ನೀಡಬೇಕೆಂಬುದನ್ನು ನ್ಯಾಯಾಲಯ ಪರಿಶೀಲಿಸಲಿದೆ’ ಎಂದು ಹೇಳಿದರು.

‘ಬ್ಯಾರಕ್‌ ಎದುರು ಓಡಾಟ ನಡೆಸುವುದಕ್ಕೂ ಬಿಡುತ್ತಿಲ್ಲ. ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ’ ಎಂದು ದರ್ಶನ್‌ ಕಣ್ಣೀರು ಹಾಕಿದರು.

ಈ ಹಿಂದೆ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾಗ ವಿಶೇಷ ಆತಿಥ್ಯ ಪಡೆದಿದ್ದ ಆರೋಪ ದರ್ಶನ್‌ ಮೇಲಿತ್ತು. ಬ್ಯಾರಕ್‌ ಎದುರು ಕುರ್ಚಿಯ ಮೇಲೆ ಕುಳಿತು ಸಿಗರೇಟ್‌ ಸೇದುತ್ತಾ ಹರಟೆ ಹೊಡೆಯುತ್ತಿದ್ದ ಫೋಟೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಅದಾದ ಮೇಲೆ ದರ್ಶನ್‌ ಅವರನ್ನು ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರ ಮಾಡಲಾಗಿತ್ತು. ಬಳಿಕ ದರ್ಶನ್‌ ಅವರಿಗೆ ಷರತ್ತುಬದ್ಧ ಜಾಮೀನು ಸಿಕ್ಕಿತ್ತು. ಹೈಕೋರ್ಟ್‌ ನೀಡಿದ್ದ ಜಾಮೀನು ಆದೇಶವನ್ನು ಸುಪ್ರಿಂ ಕೋರ್ಟ್‌ ರದ್ದು ಮಾಡಿದ್ದರಿಂದ ಏಳು ಆರೋಪಿಗಳು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದಾರೆ. ಜೈಲಿನಲ್ಲಿ ಈಗ ಹೆಚ್ಚುವರಿ ಸೌಲಭ್ಯ ನೀಡುತ್ತಿಲ್ಲ ಎಂಬುದಾಗಿ ದರ್ಶನ್‌ ಪರ ವಕೀಲರು ನ್ಯಾಯಾಲಯದ ಗಮನಕ್ಕೆ ತಂದಿದ್ದರು.

‘ಒಂದು ಕೊಠಡಿಯಲ್ಲಿ ಒಬ್ಬರೇ ಇರುವಂತೆ ದರ್ಶನ್‌ ಅವರಿಗೆ ಶಿಕ್ಷೆ ನೀಡಲಾಗುತ್ತಿದೆ. ಜೈಲಿನಲ್ಲಿ ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದೆ. ಬೇರೆ ಕೈದಿಗಳಿಗೆ ಸೌಲಭ್ಯ ನೀಡಲಾಗುತ್ತಿದೆ. ಶಿಕ್ಷೆಯಾದವರಿಗೂ ಸೌಲಭ್ಯ ನೀಡಲಾಗುತ್ತಿದೆ. ಆದರೆ, ದರ್ಶನ್ ಅವರಿಗೆ ಯಾವುದೇ ಸೌಲಭ್ಯ ನೀಡುತ್ತಿಲ್ಲ’ ಎಂದು ಅವರ ಪರ ವಕೀಲರು ನ್ಯಾಯಾಲಯದ ಗಮನಕ್ಕೆ ತಂದಿದ್ದರು.

ಬಳ್ಳಾರಿಗೆ ಜೈಲಿಗೆ ಸ್ಥಳಾಂತರ ಇಲ್ಲ:

ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲು ನ್ಯಾಯಾಲಯ ನಿರಾಕರಿಸಿದೆ. ‘ಆರೋಪಿಯನ್ನು ಬಳ್ಳಾರಿ ಜೈಲಿಗೆ ವರ್ಗಾವಣೆ ಮಾಡುವ ಸಂಬಂಧ ಆದೇಶಿಸಲು ಸಕಾರಣ ಇಲ್ಲ. ಜೈಲು ನಿಯಮ ಉಲ್ಲಂಘನೆ ಕಂಡು ಬಂದರೆ ಜೈಲಿನ ಹಿರಿಯ ಅಧಿಕಾರಿಗಳು ವರ್ಗಾವಣೆಗೆ ಕ್ರಮ ಕೈಗೊಳ್ಳಬಹುದು. ಜೈಲಿನ ಕೈಪಿಡಿ ಅನುಸರಿಸಬೇಕು’ ಎಂದು ನ್ಯಾಯಾಲಯ ಹೇಳಿದೆ.

ಹಾಸಿಗೆ ದಿಂಬು ಕೊಡಲು ಸೂಚನೆ:

ಹೆಚ್ಚುವರಿ ಹಾಸಿಗೆ ದಿಂಬು ನೀಡುವಂತೆ ದರ್ಶನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಜೈಲಿನ ಕೈಪಿಡಿಯಲ್ಲಿರುವ ನಿಯಮಗಳನ್ನು ಅನುಸರಿಸಬೇಕು. ವಿಚಾರಣಾಧೀನ ಕೈದಿ ಹೆಚ್ಚುವರಿ ಹಾಸಿಗೆ ದಿಂಬು ಕೇಳಿದರೆ ಕೊಡಬಹುದು ಎಂದು ಜೈಲಧಿಕಾರಿಗಳಿಗೆ ಸೂಚಿಸಿದೆ. ‘ಬ್ಯಾರಕ್‌ ಎದುರು ಓಡಾಟ ನಡೆಸಲು ಅನುವು ಮಾಡಿಕೊಡಬಹುದು. ಆರೋಗ್ಯ ಸಮಸ್ಯೆಯಾದರೆ ಜೈಲಿನ ವೈದ್ಯರನ್ನು ಭೇಟಿ ಮಾಡಬಹುದು. ಸ್ವಂತ ಹಣದಿಂದ ಕಾರಾಗೃಹದಲ್ಲಿ ಇರುವ ಅಂಗಡಿಗಳಲ್ಲಿ ತಿಂಡಿ–ತಿನಿಸುಗಳನ್ನು ಖರೀದಿಸಲು ಅವಕಾಶವಿದೆ’ ಎಂದು ನ್ಯಾಯಾಲಯ ಹೇಳಿತು. ‘ಕೈದಿಯ ಹಕ್ಕುಗಳನ್ನು ಗೌರವಿಸಬೇಕು. ವಿಚಾರಣಾಧೀನ ಕೈದಿಗಳಿಗೆ ನೀಡಲಾಗುವ ಎಲ್ಲ ಸೌಲಭ್ಯ ಕಲ್ಪಿಸಬೇಕು’ ಎಂದು ಹೇಳಿತು.

ಕೈದಿಗೆ ಏನೆಲ್ಲಾ ಸೌಲಭ್ಯ?:

* ಒಂದು ತಟ್ಟೆ ಹಾಗೂ ಒಂದು ಲೋಟ

* ಐದು ಜೊತೆ ಬಟ್ಟೆ ಇಟ್ಟುಕೊಳ್ಳಲು ಅವಕಾಶ. ಅದೇ ಬಟ್ಟೆಗಳನ್ನು ತೊಳೆದುಕೊಂಡು ಧರಿಸಬೇಕು 

* ಜಮಖಾನ ಬೆಡ್‌ಶೀಟ್‌ ಹಾಗೂ ಒಂದು ದಿಂಬು

* ಸ್ನಾನಕ್ಕೆ ಬಿಸಿನೀರು ಬೇಕಾದರೆ ವೈದ್ಯರ ಸೂಚನೆ ಇರಬೇಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.