ADVERTISEMENT

ಚಾತುರ್ವರ್ಣದ ವೈಭವಕ್ಕೆ ವಿರೋಧ: ಸುತ್ತೋಲೆ ಹರಿದು ದಸಂಸ ಆಕ್ರೋಶ

ಸಂವಿಧಾನ ಸಮರ್ಪಣಾ ದಿನ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2022, 1:36 IST
Last Updated 27 ನವೆಂಬರ್ 2022, 1:36 IST
ಸ್ವಾತಂತ್ರ್ಯ ಉದ್ಯಾನದಲ್ಲಿ ಸುತ್ತೋಲೆಯ ಪ್ರತಿಗಳನ್ನು ದಲಿತ ಮುಖಂಡರು ಹರಿದು ಪ್ರತಿಭಟನೆ ನಡೆಸಿದರು
ಸ್ವಾತಂತ್ರ್ಯ ಉದ್ಯಾನದಲ್ಲಿ ಸುತ್ತೋಲೆಯ ಪ್ರತಿಗಳನ್ನು ದಲಿತ ಮುಖಂಡರು ಹರಿದು ಪ್ರತಿಭಟನೆ ನಡೆಸಿದರು   

ಬೆಂಗಳೂರು: ಸಂವಿಧಾನ ಸಮರ್ಪಣಾ ದಿನವನ್ನು ಬ್ರಾಹ್ಮಣ ಶ್ರೇಷ್ಠತೆ ಪ್ರತಿಪಾದಿಸುವ ಚಾತುರ್ವರ್ಣ ಮತ್ತು ಜಾತಿಪದ್ಧತಿಯ ವೈಭವೀಕರಣ ದಿನವಾಗಿ ಬದಲಿಸಲಾಗುತ್ತಿದೆ ಎಂದು ಆರೋಪಿಸಿ ಸುತ್ತೋಲೆ ಪ್ರತಿಗಳನ್ನು ಹರಿದು ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿ ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿತು.

ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ದಲಿತ ಹೋರಾಟಗಾರ ಮಾವಳ್ಳಿ ಶಂಕರ್, ‘ಜಾತಿ ವೈಷಮ್ಯ ಬಿತ್ತಿ ಸಮಾಜವನ್ನು ಒಡೆದು ಆಳುತ್ತಿದ್ದ ಬ್ರಾಹ್ಮಣ್ಯವನ್ನು ಕಿತ್ತು ಹಾಕಿದ ಸಂವಿಧಾನವನ್ನು ಸಮರ್ಪಿಸಿದ ದಿನವಿದು. ಬಹುಜನರ ಪಾಲಿಗೆ ಇದೊಂದು ಶ್ರೇಷ್ಠವಾದ ದಿನ. ಆರ್‌ಎಸ್ಎಸ್‌ ಪ್ರೇರಿತ ಚಿಂತನೆಗಳನ್ನು ಜನರ ಮೇಲೆ ಹೇರಲು ಪ್ರಯತ್ನಿಸಲಾಗುತ್ತಿದೆ. ಅದಕ್ಕೆ ವಿರುದ್ಧವಾಗಿ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳಬೇಕಿದೆ’ ಎಂದರು.‌

ಹೋರಾಟಗಾರ ಇಂದೂಧರ ಹೊನ್ನಾಪುರ ಮಾತನಾಡಿ, ‘ಬಿಜೆಪಿ ಸರ್ಕಾರವು ಸಂವಿಧಾನದ ಆಶಯಗಳಿಗೆ ನಿರಂತರವಾಗಿ ಧಕ್ಕೆ ತರುವ ಕೆಲಸ ಮಾಡುತ್ತಿದೆ. ಸಂವಿಧಾನದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಸರ್ಕಾರ, ಈಗ ಅದೇ ಸಂವಿಧಾನವನ್ನು ನಾಶ ಮಾಡುವ ಹಂತಕ್ಕೆ ಕೈ ಹಾಕಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಸಂವಿಧಾನ ಸಮರ್ಪಣಾ ದಿನದಂದು ಅಂಬೇಡ್ಕರ್ ನೆನೆಯುವ ಬದಲು ಅವಮಾನಿಸುವ ಕೆಲಸ ಮಾಡಿದೆ. ಇದು ಒಕ್ಕೂಟ ವ್ಯವಸ್ಥೆಯನ್ನು ಹಾಳು ಮಾಡುವ ಮುನ್ನುಡಿ’ ಎಂದು ದೂರಿದರು.

ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ‘ಬಿಜೆಪಿಯವರು ಸುಳ್ಳು ಹೇಳಿ ಭ್ರಮೆ ಹುಟ್ಟಿಸುವುದರಲ್ಲಿ ನಿಪುಣರು. ಸಂವಿಧಾನಕ್ಕೆ ಇಂದು ಅಪಾಯ ಎದುರಾಗಿದೆ. ಸುಪ್ರೀಂ ಕೋರ್ಟ್‌ನ ತೀರ್ಪುಗಳನ್ನು ಗಮನಿಸಿದರೆ ಅದು ಗೊತ್ತಾಗುತ್ತದೆ’ ಎಂದರು.

ಕಾರ್ಮಿಕ ಮುಖಂಡ ಜಿ.ಎನ್.ನಾಗರಾಜ್, ದಲಿತ ಮುಖಂಡರಾದ ಜಿಗಣಿ ಶಂಕರ್, ಶ್ರೀಪಾದ ಭಟ್, ಡಿ.ಜಿ. ಸಾಗರ್, ಭೂ ವಸತಿ ವಂಚಿತರ ಹೋರಾಟ ಸಮಿತಿ ಮುಖಂಡ ಸಿರಿಮನೆ ನಾಗರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.