ADVERTISEMENT

ಪ್ರೀತಿಗೆ ಅಡ್ಡಿ: ಪ್ರಿಯಕರನ ಜತೆಗೂಡಿ ತಾಯಿಯನ್ನೇ ಕೊಂದ ಮಗಳು

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2024, 16:09 IST
Last Updated 13 ಸೆಪ್ಟೆಂಬರ್ 2024, 16:09 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಪ್ರೀತಿಗೆ ಅಡ್ಡಿ ಪಡಿಸಿದ ಕಾರಣಕ್ಕೆ ತಾಯಿಯನ್ನು ಕೊಲೆ ಮಾಡಿದ ಆರೋಪದಡಿ ಅವರ ಮಗಳು ಹಾಗೂ ಆಕೆಯ ಪ್ರಿಯಕರನನ್ನು ಬೊಮ್ಮನಹಳ್ಳಿ ಠಾಣೆ ಪೊಲೀಸರು ಶುಕ್ರವಾರ ರಾತ್ರಿ ಬಂಧಿಸಿದ್ದಾರೆ.

ಜಯಲಕ್ಷ್ಮಿ(47) ಕೊಲೆಯಾದವರು. ಬೊಮ್ಮನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಕೊಲೆ ಮಾಡಿದ ಆರೋಪದಡಿ ಹೊಂಗಸಂದ್ರದ ನಿವಾಸಿ, ವಿಜಯಲಕ್ಷ್ಮಿಅವರ ಮಗಳು ಪವಿತ್ರಾ(27) ಹಾಗೂ ಆಕೆಯ ಪ್ರಿಯಕರ ಲನೀಶ್‌(20) ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ADVERTISEMENT

‘ಜಯಲಕ್ಷ್ಮಿ ಅವರು ಹೊಂಗಸಂದ್ರದಲ್ಲಿ ನೆಲೆಸಿದ್ದರು. ದಿನಸಿ ಅಂಗಡಿ ನಡೆಸುತ್ತಿದ್ದರು. ಅವರ ತಮ್ಮ ಸುರೇಶ್ ಅವರಿಗೇ ಮಗಳನ್ನು ಕೊಟ್ಟು ಎರಡು ವರ್ಷಗಳ ಹಿಂದೆ ಮದುವೆ ಮಾಡಿದ್ದರು. ಸುರೇಶ್ ಅವರು ಅಂಗಡಿಗೆ ದಿನಸಿ ತಂದುಕೊಡುವ ಮೂಲಕ ಅತ್ತೆಗೆ ನೆರವಾಗುತ್ತಿದ್ದರು. ಕಳೆದ ಕೆಲವು ತಿಂಗಳಿಂದ ಪವಿತ್ರಾ ಅವರು ಲನೀಶ್‌ ಅವರನ್ನು ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಇದೇ ವಿಷಯಕ್ಕೆ ದಂಪತಿ ಮಧ್ಯೆ ಭಿನ್ನಾಭಿಪ್ರಾಯ ಉಂಟಾಗಿತ್ತು. ತಾಯಿ ಸಹ ವಿರೋಧ ವ್ಯಕ್ತಪಡಿಸಿ ಪುತ್ರಿಗೆ ಬುದ್ಧಿಮಾತು ಹೇಳಿದ್ದರು. ಇದರಿಂದ ಪವಿತ್ರಾ ಕುಪಿತಗೊಂಡಿದ್ದರು’ ಎಂದು ಪೊಲೀಸರು ಹೇಳಿದರು.

‘ಪ್ರೀತಿಗೆ ಅಡ್ಡಿಪಡಿಸುತ್ತಿದ್ದಾರೆ ಎಂಬ ಕಾರಣಕ್ಕೆ ಪ್ರಿಯಕರನ ಜೊತೆಗೂಡಿ ತಾಯಿಯ ಕೊಲೆಗೆ ಸಂಚು ರೂಪಿಸಿದ್ದರು. ಹೊಂಗಸಂದ್ರದ ಮನೆಗೆ ಲನೀಶ್‌ ಅವರನ್ನು ಶುಕ್ರವಾರ ಮಧ್ಯಾಹ್ನ ಕರೆಸಿಕೊಂಡು ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಇಬ್ಬರನ್ನೂ ಬಂಧಿಸಿ, ವಿಚಾರಣೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.