ADVERTISEMENT

ಪ್ರತಿ 700 ಮಕ್ಕಳಲ್ಲಿ ಒಂದು ಮಗುವಿಗೆ ಸೀಳು ತುಟಿ: ರಾಜ್ಯಪಾಲ ಗೆಹಲೋತ್ ಕಳವಳ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2023, 23:30 IST
Last Updated 4 ಆಗಸ್ಟ್ 2023, 23:30 IST
ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರಚಂದ್‌ ಗೆಹಲೋತ್ ಹಾಗೂ ಡಾ. ಬಲ್ವಿಂದರ್ ಸಿಂಗ್ ಠಕ್ಕರ್ ಅವರು ಉಭಯ ಕುಶಲೋಪರಿ ವಿಚಾರಿಸಿಕೊಂಡರು. ಡಾ. ಸಂಜಯ್ ಲಾಭ್ ಇದ್ದಾರೆ.
ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರಚಂದ್‌ ಗೆಹಲೋತ್ ಹಾಗೂ ಡಾ. ಬಲ್ವಿಂದರ್ ಸಿಂಗ್ ಠಕ್ಕರ್ ಅವರು ಉಭಯ ಕುಶಲೋಪರಿ ವಿಚಾರಿಸಿಕೊಂಡರು. ಡಾ. ಸಂಜಯ್ ಲಾಭ್ ಇದ್ದಾರೆ.   

ಬೆಂಗಳೂರು: ‘ದೇಶದಲ್ಲಿ ಪ್ರತಿ 700 ಮಕ್ಕಳಲ್ಲಿ ತಲಾ ಒಂದು ಮಗು ಸೀಳು ತುಟಿ ಸಮಸ್ಯೆಯಿಂದ ಜನಿಸುತ್ತಿದೆ. ‌ಪ್ರತಿ ವರ್ಷ 35 ಸಾವಿರಕ್ಕೂ ಹೆಚ್ಚು ಮಕ್ಕಳು ಇಂತಹ ಸಮಸ್ಯೆಯೊಂದಿಗೆ ಜನಿಸುತ್ತಾರೆ’ ಎಂದು ರಾಜ್ಯಪಾಲ ಥಾವರಚಂದ್‌ ಗೆಹಲೋತ್ ತಿಳಿಸಿದರು. 

ದಯಾನಂದ್ ಸಾಗರ್ ದಂತ ವಿಜ್ಞಾನಗಳ ಕಾಲೇಜು ನಗರದಲ್ಲಿ ಶುಕ್ರವಾರ ಹಮ್ಮಿಕೊಂಡ ರಾಷ್ಟ್ರಮಟ್ಟದ ಸೀಳುತುಟಿ ಕಾರ್ಯಾಗಾರ ಉದ್ಘಾಟಿಸಿ, ಮಾತನಾಡಿದರು.

‘ಸೀಳು ತುಟಿ ಸಮಸ್ಯೆ ಇರುವವರ ಜೀವನದಲ್ಲಿ ಸುಧಾರಣೆ ತರುವುದು ಅತ್ಯಂತ ಮಹತ್ವದ ಕೆಲಸವಾಗಿದೆ. ಹುಟ್ಟಿನಿಂದಲೇ ಕಾಣಿಸಿಕೊಳ್ಳುವ ಸೀಳು ತುಟಿ ಸಮಸ್ಯೆಯು ದೈಹಿಕ ಪರಿಣಾಮದ ಜತೆಗೆ ಭಾವನಾತ್ಮಕ, ಸಾಮಾಜಿಕ ಮತ್ತು ಮಾನಸಿಕ ಪರಿಣಾಮವನ್ನೂ ಬೀರಲಿದೆ. ಜನ್ಮತಃವಾಗಿ ಬರುವ ಇಂತಹ ಸಮಸ್ಯೆಗಳಿಗೆ ಆಧುನಿಕ ಚಿಕಿತ್ಸೆ ಜೊತೆಗೆ ಮಾನವೀಯತೆಯ ವೈದ್ಯಕೀಯ ಸೇವೆಯೂ ಅಗತ್ಯ’ ಎಂದು ಹೇಳಿದರು. 

ADVERTISEMENT

ದಯಾನಂದ್ ಸಾಗರ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಮತ್ತು ಕುಲಪತಿ ಡಾ. ಹೇಮಚಂದ್ರ ಸಾಗರ್, ‘ಅತ್ಯುನ್ನತ ಕೌಶಲ್ಯ ಹೊಂದಿರುವ ಪರಿಣಿತರ ಸಮ್ಮುಖದಲ್ಲಿ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದು ಭವಿಷ್ಯದ ಚಿಕಿತ್ಸೆಗಳಿಗೆ ಮುನ್ನುಡಿಯಾಗಲಿದ್ದು, ಗುಣಮಟ್ಟದ ವೈದ್ಯಕೀಯ ಸೇವೆ ಒದಗಿಸಲು ಕೂಡ ಸಹಕಾರಿ ಆಗುತ್ತದೆ’ ಎಂದು ತಿಳಿಸಿದರು. 

ಇಂಡಿಯನ್ ಆರ್ಥೊಡಾಂಟಿಕ್ ಸೊಸೈಟಿ ಅಧ್ಯಕ್ಷ ಡಾ. ಬಲ್ವಿಂದರ್ ಸಿಂಗ್ ಠಕ್ಕರ್, ‘ಮಗು ಹುಟ್ಟಿದಾಗಲೇ ಚಿಕಿತ್ಸೆ ನೀಡಿದರೆ ಮುಖ ವಿರೂಪವಾಗುವುದನ್ನು ತಡೆಗಟ್ಟಲು ಸಾಧ್ಯ. ಮಕ್ಕಳ ತಜ್ಞರು, ವಾಕ್–ಶ್ರವಣ ತಜ್ಞರ ನೆರವಿನಿಂದ ಸಮಸ್ಯೆಯನ್ನು ಶಾಶ್ವತವಾಗಿ ನಿವಾರಿಸಬಹುದಾಗಿದೆ’ ಎಂದರು. 

ದಯಾನಂದ ಸಾಗರ್ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲ ಡಾ. ಹೇಮಂತ್, ಇಂಡಿಯನ್ ಆರ್ಥೊಡಾಂಟಿಕ್ ಸೊಸೈಟಿ ಕಾರ್ಯದರ್ಶಿ ಡಾ. ಸಂಜಯ್ ಲಾಭ್, ದಯಾನಂದ ಸಾಗರ್ ಸಂಸ್ಥೆಗಳ ಕಾರ್ಯದರ್ಶಿ ಗಾಲಿಸ್ವಾಮಿ ಮತ್ತು ಜಂಟಿ ಕಾರ್ಯದರ್ಶಿ ಟಿಂಟಿಶಾ ಎಚ್. ಸಾಗರ್ ಇದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.