ADVERTISEMENT

ಸ್ಯಾಂಕಿ ಕೆರೆ ಬಳಿ ಜಲಪಾತ ಆಕರ್ಷಣೆ

ಸ್ಥಳ ಪರಿಶೀಲಿಸಿದ ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2021, 21:38 IST
Last Updated 11 ಮಾರ್ಚ್ 2021, 21:38 IST
ಸ್ಯಾಂಕಿ ಕೆರೆ ಬಳಿ ಜಲಪಾತ ನಿರ್ಮಾಣಕ್ಕೆ ಸಂಬಂಧಿಸಿದಂತೆ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು
ಸ್ಯಾಂಕಿ ಕೆರೆ ಬಳಿ ಜಲಪಾತ ನಿರ್ಮಾಣಕ್ಕೆ ಸಂಬಂಧಿಸಿದಂತೆ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು   

ಬೆಂಗಳೂರು: ನಗರದ ಸ್ಯಾಂಕಿ ಕೆರೆ ಬಳಿ ಶೀಘ್ರದಲ್ಲಿಯೇ ಜಲಪಾತ ನಿರ್ಮಾಣವಾಗಲಿದ್ದು, ಇದು ಜನಾಕರ್ಷಣೆಯ ಕೇಂದ್ರವಾಗಲಿದೆ. ಉಪಮುಖ್ಯಮಂತ್ರಿ ಮತ್ತು ಕ್ಷೇತ್ರದ ಶಾಸಕ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರುಈ ಕುರಿತು ಗುರುವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಮಲ್ಲೇಶ್ವರದ ಸ್ಯಾಂಕಿ ಕೆರೆಯ ಈಜುಕೊಳದ ಪಕ್ಕದಲ್ಲಿ ಜಲಪಾತ ನಿರ್ಮಿಸುವ ಸಂಬಂಧ ಸ್ಥಳ ಪರಿಶೀಲನೆಯನ್ನೂ ಮಾಡಿದರು.

‘ಸದಾಶಿವನಗರದ ಸ್ಯಾಂಕಿ ಕೆರೆ ನವೀಕರಣ ಕಾಮಗಾರಿ‌‌‌ ನಡೆಯುತ್ತಿದೆ. ಇದರ ಜೊತೆಗೆ, ಕೆರೆ ಪಕ್ಕದ ಈಜುಕೊಳಕ್ಕೆ ಹೊಂದಿಕೊಂಡಂತೆ ಜಲಪಾತದ ಗೋಡೆ‌ ನಿರ್ಮಿಸಲಾಗುವುದು’ ಎಂದು ಅವರು ಹೇಳಿದರು.

ADVERTISEMENT

‘ಜಲಪಾತದ ಬಳಿಯೇ ‘ಏರಿಯೇಟರ್ಸ್’ ಕೂಡ ಅಳವಡಿಸಲಾಗುವುದು. ಇದರಿಂದ ಕೆರೆ ನೀರು ಸ್ವಚ್ಛ ಆಗಲಿದೆ. ಈಗಾಗಲೇ ಸರ್ವಋತುಗಳಲ್ಲಿಯೂ ನಳನಳಿಸುವ ಉದ್ಯಾನಗಳಿಂದ ಪ್ರಸಿದ್ಧವಾಗಿರುವ ಬೆಂಗಳೂರು ನಗರಕ್ಕೆ ಈ ಜಲಪಾತ ಮತ್ತಷ್ಟು ಮೆರಗು ನೀಡಲಿದೆ. ಮಲ್ಲೇಶ್ವರದ ಪಾರಂಪರಿಕ ವೈಭವಕ್ಕೆ ಪೂರಕವಾಗಿರಲಿದೆ. ಇದಕ್ಕೆ ₹1.50 ಕೋಟಿ ಖರ್ಚಾಗುವ ಅಂದಾಜಿದೆ’ ಎಂದು ತಿಳಿಸಿದರು.

‘12ರಿಂದ 15 ಅಡಿ ಎತ್ತರ ಹಾಗೂ ಸುಮಾರು 100 ಅಡಿ ಅಗಲ ಇರಲಿರುವ ಈ ಜಲಪಾತ ನಗರದ ಪ್ರವಾಸೋದ್ಯಮಕ್ಕೂ ಪೂರಕವಾಗಿರಲಿದೆ’ ಅಶ್ವತ್ಥನಾರಾಯಣ ಮಾಹಿತಿ ನೀಡಿದರು.

‘ಮುಂದಿನ ದಿನಗಳಲ್ಲಿ ಸ್ಯಾಂಕಿ ಕೆರೆಯನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲಾಗುವುದು. ನಗರದಲ್ಲಿನ ಪ್ರತಿಯೊಬ್ಬರೂ ಇಲ್ಲಿಗೆ ಭೇಟಿ ನೀಡಲೇಬೇಕು ಎಂಬ ರೀತಿಯಲ್ಲಿ ಕೆರೆಗೆ ಕಾಯಕಲ್ಪ ಒದಗಿಸಲಾಗುವುದು’ ಎಂದರು.

ಪಾಲಿಕೆ‌ಯ ಮುಖ್ಯ ಎಂಜಿನಿಯರ್ (ಕೆರೆ ವಿಭಾಗ) ಬಿ.ಟಿ.ಮೋಹನಕೃಷ್ಣ, ಪಾಲಿಕೆ ಕಾರ್ಯನಿರ್ವಾಹಕ ಎಂಜಿನಿಯರ್ ಪಾಪರೆಡ್ಡಿ, ಸಹಾಯಕ ಎಂಜಿನಿಯರ್‌ಗಳಾದ ಸುಷ್ಮಾ, ಸ್ವಪ್ನಾ ಹಾಗೂ ಬಿಜೆಪಿಯ ಸ್ಥಳೀಯ ಮುಖಂಡರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.