ADVERTISEMENT

ಮಾದಿಗ ಸಂಘಟನೆಗಳು ಒಗ್ಗೂಡಲಿ: ಕಾರಜೋಳ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2020, 21:11 IST
Last Updated 29 ಡಿಸೆಂಬರ್ 2020, 21:11 IST
ಸಮಾವೇಶವನ್ನು ಗೋವಿಂದ ಎಂ.ಕಾರಜೋಳ ಉದ್ಘಾಟಿಸಿದರು. ನಿವೃತ್ತ ಐಎಎಸ್ ಅಧಿಕಾರಿ ಬಾಬುರಾವ್ ಮುಡಬಿ, ಜೈ ಮಾದಿಗರ ಬೌದ್ಧಿಕ ವೇದಿಕೆಯ ರಾಷ್ಟ್ರೀಯ ಅಧ್ಯಕ್ಷ ಗೆಡ್ಡಂ ಬಾಪಿರಾಜು, ರಾಜ್ಯಘಟಕದ ಅಧ್ಯಕ್ಷ ಬಿ.ಆರ್.ಮುನಿರಾಜು, ಗೌರವಾ ಧ್ಯಕ್ಷ ಜಂಬೂದ್ವೀಪ ಸಿದ್ದರಾಜು, ಉಪಾಧ್ಯಕ್ಷೆ ಸುಜಾತ ಬೈಲಪ್ಪ ಇತರರು ಇದ್ದರು.
ಸಮಾವೇಶವನ್ನು ಗೋವಿಂದ ಎಂ.ಕಾರಜೋಳ ಉದ್ಘಾಟಿಸಿದರು. ನಿವೃತ್ತ ಐಎಎಸ್ ಅಧಿಕಾರಿ ಬಾಬುರಾವ್ ಮುಡಬಿ, ಜೈ ಮಾದಿಗರ ಬೌದ್ಧಿಕ ವೇದಿಕೆಯ ರಾಷ್ಟ್ರೀಯ ಅಧ್ಯಕ್ಷ ಗೆಡ್ಡಂ ಬಾಪಿರಾಜು, ರಾಜ್ಯಘಟಕದ ಅಧ್ಯಕ್ಷ ಬಿ.ಆರ್.ಮುನಿರಾಜು, ಗೌರವಾ ಧ್ಯಕ್ಷ ಜಂಬೂದ್ವೀಪ ಸಿದ್ದರಾಜು, ಉಪಾಧ್ಯಕ್ಷೆ ಸುಜಾತ ಬೈಲಪ್ಪ ಇತರರು ಇದ್ದರು.   

ಯಲಹಂಕ: ‘ಮಾದಿಗ ಸಮುದಾಯದ ಎಲ್ಲ ಸಂಘಟನೆಗಳು ಒಗ್ಗೂಡಿ ಒಂದೇ ವೇದಿಕೆಗೆ ಬರಬೇಕು. ಇದರಿಂದ ಜನ ಸಂಖ್ಯೆಗೆ ಅನುಗುಣವಾಗಿ ಸರ್ಕಾರದಿಂದ ಮೀಸಲಾತಿ ಮತ್ತು ಅಗತ್ಯ ಅನುದಾನಗಳನ್ನು ಒದಗಿಸಲು ಸಾಧ್ಯವಾಗುತ್ತದೆ‘ ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ.ಕಾರಜೋಳ ಹೇಳಿದರು.

ಜೈ ಮಾದಿಗರ ಬೌದ್ಧಿಕ ವೇದಿಕೆ ಆಶ್ರಯದಲ್ಲಿ ಉಪನಗರದ ಹೊಯ್ಸಳ ಕ್ರೀಡಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವ ಮಾದಿಗರ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಕೇಂದ್ರ ಹಾಗೂ ರಾಜ್ಯಸರ್ಕಾರಗಳು ಈಗಾಗಲೇ ಪರಿಶಿಷ್ಟ ಜಾತಿ ಸಮುದಾಯಕ್ಕೆ ಹೆಚ್ಚಿನ ಅನುದಾನ ನೀಡಿವೆ. ಆದಿಜಾಂಬವ ಅಭಿ ವೃದ್ಧಿ ನಿಗಮದ ಮೂಲಕ ಜನಾಂಗದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಲು ಸರ್ಕಾರ ಬದ್ಧವಾಗಿದೆ’ ಎಂದರು.

ರಾಜ್ಯಸಭೆ ಸದಸ್ಯ ಡಾ.ಎಲ್. ಹನುಮಂತಯ್ಯ ಮಾತನಾಡಿ, ‘ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸುವ ಸಂಬಂಧ ರಾಜ್ಯಸರ್ಕಾರವು ಕೂಡಲೇ ವಿಧಾನಸಭೆ ಯಲ್ಲಿ ನಿರ್ಣಯ ಅಂಗೀಕರಿಸಿ ಕೇಂದ್ರಕ್ಕೆ ಕಳುಹಿಸಬೇಕು. ಮೀಸಲಾತಿಯ ಒಳವರ್ಗೀಕರಣ ಮಾಡುವುದರ ಜೊತೆಗೆ ಆದಿಜಾಂಬವ ಅಭಿವೃದ್ಧಿ ಮತ್ತು ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ ಗಳ ಮೂಲಕ ಹೆಚ್ಚಿನ ಅನುದಾನ ಒದಗಿಸಬೇಕು‘ ಎಂದು ಒತ್ತಾಯಿಸಿದರು.

ADVERTISEMENT

ವೇದಿಕೆಯ ರಾಷ್ಟ್ರೀಯ ಅಧ್ಯಕ್ಷ ಗೆಡ್ಡಂ ಬಾಪಿರಾಜು ಮಾತನಾಡಿ, ‘ಕೇಂದ್ರ ಹಾಗೂ ರಾಜ್ಯಸರ್ಕಾರಗಳು ಜನಾಂಗದ ಅಭಿವೃದ್ಧಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಬೇಕು. ಈ ದಿಸೆಯಲ್ಲಿ 10 ವರ್ಷಗಳೊಳಗಾಗಿ ಎಲ್ಲ ರಾಜ್ಯಗಳ ಪ್ರತಿಗ್ರಾಮಗಳಿಗೂ ಭೇಟಿನೀಡಿ, ಸಮು ದಾಯದ ಹಿರಿಯರ ಮಾರ್ಗದರ್ಶನದಲ್ಲಿ ಬೇರುಮಟ್ಟದಿಂದ ಜನಾಂಗವನ್ನು ಸಂಘಟಿಸಲು ಶ್ರಮಿಸಲಾಗುವುದು‘ ಎಂದು ತಿಳಿಸಿದರು.

ವೇದಿಕೆಯ ರಾಜ್ಯಘಟಕದ ಅಧ್ಯಕ್ಷ ಬಿ.ಆರ್.ಮುನಿರಾಜು, ಮಾದಿಗ ಸಮುದಾಯದವರೆಲ್ಲರನ್ನೂ ಸಂಘಟಿಸುವ ಮೂಲಕ ಈ ದಿನವನ್ನು ವಿಶ್ವ ಮಾದಿಗ ದಿನವನ್ನಾಗಿ ಆಚರಿಸಲು ಸರ್ಕಾರ ಘೋಷಣೆ ಮಾಡಬೇಕೆಂದು ಒತ್ತಾಯಿಸುವ ಮುಖ್ಯ ಉದ್ದೇಶದಿಂದ ಈ ಸಮಾವೇಶ ಆಯೋಜಿಸಲಾಗಿದೆ‘ ಎಂದರು. ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಳ್ಳಾರಿ ಹನುಮಂತಪ್ಪ, ರಾಜ್ಯಸಮಿತಿ ಸದಸ್ಯ ರಾಚೇನಹಳ್ಳಿ ವೆಂಕಟೇಶ್, ಮುಖಂಡರಾದ ರಾಮಚಂದ್ರ, ಆನಂದ್, ಸೋಮಶೇಖರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.