ADVERTISEMENT

ವಿಮಾನ ಸೌಲಭ್ಯ | ದುಬೈ ಕನ್ನಡಿಗರಿಗೆ ಡಿಸಿಎಂ ಭರವಸೆ

ಕೇಂದ್ರದ ಜೊತೆ ಚರ್ಚೆ

​ಪ್ರಜಾವಾಣಿ ವಾರ್ತೆ
Published 3 ಮೇ 2020, 20:48 IST
Last Updated 3 ಮೇ 2020, 20:48 IST
   

ಬೆಂಗಳೂರು: ‘ದುಬೈನಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕನ್ನಡಿಗರು ತಾಯ್ನಾಡಿಗೆ ಮರಳಲು ವಿಮಾನಯಾನ ಸೌಕರ್ಯ ಕಲ್ಪಿಸುವಂತೆ ಕೇಂದ್ರಕ್ಕೆ ಮನವಿ ಮಾಡಲಾಗುವುದು’ ಎಂದು ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಭರವಸೆ ನೀಡಿದರು.

ದುಬೈ ಕನ್ನಡಿಗರ ಜತೆ ಭಾನುವಾರ ವಿಡಿಯೊ ಸಂವಾದ ನಡೆಸಿದ ಅವರು, ‘ವಿದೇಶಗಳಿಂದ ಬರುವ 12 ಸಾವಿರ ಜನರಿಗೆ ಕ್ವಾರಂಟೈನ್‌ ವ್ಯವಸ್ಥೆಯನ್ನೂ ಸರ್ಕಾರದಿಂದ ಮಾಡಲಾಗುವುದು’ ಎಂದೂ ಆಶ್ವಾಸನೆ ನೀಡಿದರು.

‘ವಿದೇಶದಲ್ಲಿ ಉದ್ಯೋಗ ಕಳೆದುಕೊಂಡು ಭಾರತಕ್ಕೆ ವಾಪಸಾದವರ ಪೈಕಿ ಅಗತ್ಯ ಇರುವವರಿಗೆ ವೃತ್ತಿಪರ ಕೌಶಲ ತರಬೇತಿಗೆ ವ್ಯವಸ್ಥೆ ಮಾಡಲಾಗುವುದು. ಮುದ್ರಾ ಯೋಜನೆಯಡಿ ಉದ್ದಿಮೆ ಆರಂಭಿಸಲು ಆರ್ಥಿಕ ನೆರವು ಪಡೆಯಬಹುದು. ಜತೆಗೆ, ಕೋರಿಕೆ ಮೇರೆಗೆ ನಿರ್ದಿಷ್ಟ ಸಿಬಿಎಸ್‌ಸಿ ಶಾಲೆಗಳಲ್ಲಿ ಅನಿವಾಸಿ ಭಾರತೀಯರ ಮಕ್ಕಳ ಪ್ರವೇಶಕ್ಕೆ ಸಹಕರಿಸಲಾಗುವುದು’ ಎಂದರು.

ADVERTISEMENT

‘ದುಬೈನಲ್ಲಿರುವ ಒಂದು ಲಕ್ಷ ಕನ್ನಡಿಗರ ಪೈಕಿ, ಸುಮಾರು 20 ಸಾವಿರ ಮಂದಿಗೆ ತೊಂದರೆಯಾಗಿದೆ. ಭಾರತಕ್ಕೆ ಮರಳಲು ಬಯಸುವವರಿಗೆ ನೆರವು ಬೇಕಾಗಿದೆ. ಪ್ರವಾಸಿ ವೀಸಾದಲ್ಲಿ ಬಂದಿರುವ 270 ಮಂದಿ ಉದ್ಯೋಗ, ಆಶ್ರಯ ಇಲ್ಲದೆ ಸಂಕಷ್ಟದಲ್ಲಿದ್ದಾರೆ’ ಎಂದು ಉದ್ಯಮಿ ಪ್ರವೀಣ್‌ ಶೆಟ್ಟಿ ಹೇಳಿದರು.

‘ಕೇರಳ ಮಾದರಿಯಲ್ಲಿ ಹಣ ಪಡೆದು ಅನಿವಾಸಿ ಭಾರತೀಯ ಕನ್ನಡಿಗರಿಗೆ ಕ್ವಾರಂಟೈನ್‌ ವ್ಯವಸ್ಥೆ ಮಾಡಬಹುದು. ವೃದ್ಧರು, ಗರ್ಭಿಣಿಯರು ಹಾಗೂ ಆಸ್ಪತ್ರೆಯಲ್ಲಿ ಎಲ್ಲರ ಜತೆ ಇರಲು ಬಯಸದವರು ಪ್ರತ್ಯೇಕ ವ್ಯವಸ್ಥೆ ಪಡೆಯಲು ಇಚ್ಛಿಸಿದರೆ ಅಂಥವರಿಂದಲೂ ಹಣ ಪಡೆದು ಸೌಕರ್ಯ ನೀಡಬಹುದು’ ಎಂದೂ ಅನಿವಾಸಿ ಕನ್ನಡಿಗರು ಸಲಹೆ ನೀಡಿದರು.

‘ಅನಿವಾಸಿ ಕನ್ನಡಿಗರು ದುಬೈ’ ನ ಅಧ್ಯಕ್ಷ ಮೊಹಮ್ಮದ್‌ ನವೀದ್‌, ಉದ್ಯಮಿ ಹರೀಶ್‌ ಶೇರಿಗಾರ್‌, ತುಳು ರಕ್ಷಣಾ ವೇದಿಕೆಯ ಹಿದಾಯತ್ ಅಡ್ಡೂರು, ಕಾನೂನು ಸಲಹೆಗಾರ ಸುನೀಲ್‌ ಅಂಬಳತರೆ, ಬಸವ ಸಮಿತಿ ಅಧ್ಯಕ್ಷ ಚಂದ್ರಶೇಖರ್‌ ಲಿಂಗದಹಳ್ಳಿ, ಮೀಡಿಯಾ ಫೋರಂನ ಇಮ್ರಾನ್‌ ಖಾನ್‌, ಕನ್ನಡ ಶಿಕ್ಷಕ ಶಶಿಧರ್‌ ನಾಗರಾಜಪ್ಪ, ಉದ್ಯಮಿ ರೊನಾಲ್ಡ್‌ ಮಾರ್ಟಿಸ್‌, ದುಬೈ ಕರ್ನಾಟಕ ಸಂಘದ ದಯಾ ಕಿರೋಡಿಯನ್‌, ಉದ್ಯಮಿಗಳಾದ ನೊಯಲ್‌ ಅಲ್ಮೇಡಾ, ಯಶ್ವಂತ್‌ ಕರ್ಕೇರ, ಅಶ್ಫಕ್‌ ಸದ, ಯೂಸುಫ್‌ ಬೆರ್ಮವೆರ್‌, ಅಫ್ಜಲ್‌ ಸಂವಾದದಲ್ಲಿ ಇದ್ದರು.

ದುಬೈ ಕನ್ನಡಿಗರ ನೆರವಿಗೆ ಅನಿವಾಸಿ ಭಾರತೀಯ ಉದ್ಯಮಿಗಳು ಹಾಗೂ ವೃತ್ತಿಪರರ 20 ಜನರ ಸಮಾನ ಮನಸ್ಕರ ತಂಡ ‘ಕನ್ನಡಿಗ ಹೆಲ್ಪ್‌ ಲೈನ್‌- ವೆಬ್‌ಸೈಟ್‌’ ಆರಂಭಿಸಿ ನೆರವು ಒದಗಿಸುತ್ತಿರುವ ಬಗ್ಗೆ ಉಪಮುಖ್ಯಮಂತ್ರಿ ಮೆಚ್ಚುಗೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.