ADVERTISEMENT

ಡಿಸಿಪಿಗೆ ವಂಚನೆ: ಬ್ಯಾಂಕ್ ಸಿಬ್ಬಂದಿ ವಿರುದ್ದ ಎಫ್‌ಐಆರ್

ಸಾಲ ಮರೆಮಾಚಿ ₹28 ಲಕ್ಷದ ಫ್ಲ್ಯಾಟ್ ಮಾರಾಟ ಮಾಡಿದ ಆರೋಪ

​ಪ್ರಜಾವಾಣಿ ವಾರ್ತೆ
Published 11 ಜುಲೈ 2025, 15:30 IST
Last Updated 11 ಜುಲೈ 2025, 15:30 IST
<div class="paragraphs"><p>ಎಫ್‌ಐಆರ್</p></div>

ಎಫ್‌ಐಆರ್

   

ಬೆಂಗಳೂರು: ಸಹಕಾರ ಬ್ಯಾಂಕ್‌ನಲ್ಲಿ ಸಾಲವಿದ್ದ ವಿಚಾರವನ್ನು ಮರೆಮಾಚಿ ನಗರ ಸಶಸ್ತ್ರ ಮೀಸಲು ಪಡೆ (ಸಿಎಆರ್) ಪಶ್ಚಿಮ ವಿಭಾಗದ ಡಿಸಿಪಿಗೆ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ ಅನ್ನು ₹28 ಲಕ್ಷಕ್ಕೆ ಮಾರಾಟ ಮಾಡಿ ವಂಚಿಸಿದ ಆರೋಪ ಸಂಬಂಧ ಸಿಸಿಬಿ ಪೊಲೀಸರು ಜನಸ್ಮಾಲ್‌ ಬ್ಯಾಂಕ್‌ ಸಿಬ್ಬಂದಿ ಹಾಗೂ ಸ್ವರ್ಣ ಭಾರತಿ ಸಹಕಾರ ಬ್ಯಾಂಕ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಡಿಸಿಪಿ ವಿ.ಸಿ.ಗೋಪಾಲ ರೆಡ್ಡಿ ಅವರ ದೂರು ಆಧರಿಸಿ, ಜನಸ್ಮಾಲ್‌ ಬ್ಯಾಂಕ್‌ ಸಿಬ್ಬಂದಿ ರಾಜೇಶ್‌, ಬಾಬು ಸರ್ಜಿತ್‌, ಉಮೇಶ್‌ ಹಾಗೂ ಸ್ವರ್ಣ ಭಾರತಿ ಸಹಕಾರ ಬ್ಯಾಂಕ್‌ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ADVERTISEMENT

ಉತ್ತರಹಳ್ಳಿ ಹೋಬಳಿ ಕಗ್ಗಲಿಪುರದಲ್ಲಿರುವ ಶಂಕರ ಮೆಡೋಸ್‌ ಅಪಾರ್ಟ್‌ಮೆಂಟ್‌ನ ನಾಲ್ಕನೇ ಮಹಡಿಯ ಫ್ಲ್ಯಾಟ್‌ವೊಂದನ್ನು 2023ರ ಜುಲೈನಲ್ಲಿ ಜನಸ್ಮಾಲ್‌ ಬ್ಯಾಂಕ್‌ ಹರಾಜಿಗಿಟ್ಟಿತ್ತು. ಹರಾಜಿನಲ್ಲಿ ಪಾಲ್ಗೊಂಡಿದ್ದ ಡಿಸಿಪಿ ಗೋಪಾಲ ರೆಡ್ಡಿ , ಬ್ಯಾಂಕ್ ಆಫ್ ಬರೋಡಾದಲ್ಲಿ ಸಾಲ ಪಡೆದು, ₹28 ಲಕ್ಷ ಪಾವತಿಸಿ ತಮ್ಮ ಹೆಸರಿಗೆ ಫ್ಲ್ಯಾಟ್‌ ನೋಂದಣಿ ಮಾಡಿಸಿಕೊಂಡು ಕುಟುಂಬದ ಜತೆ ವಾಸಿಸುತ್ತಿದ್ದರು.

ಈ ನಡುವೆ, ಮೇ 8ರಂದು ಫ್ಲ್ಯಾಟ್‌ ಬಳಿ ಬಂದಿದ್ದ ಸ್ವರ್ಣ ಭಾರತಿ ಸಹಕಾರ ಬ್ಯಾಂಕ್‌ ಸಿಬ್ಬಂದಿ, ‘ಈ ಫ್ಲ್ಯಾಟ್‌ನ ಮೇಲೆ ಸಾಲ ನೀಡಿದ್ದು, ಮರುಪಾವತಿಯಾಗಿಲ್ಲ’ ಎಂದು ಹೇಳಿ ನ್ಯಾಯಾಲಯದ ಆದೇಶದ ಮುಖೇನ ಫ್ಲ್ಯಾಟ್‌ ಮುಟ್ಟುಗೋಲು ಹಾಕಿಕೊಂಡಿದ್ದರು.

ಗೋಪಾಲ ರೆಡ್ಡಿ ಅವರು ಜನಸ್ಮಾಲ್‌ ಬ್ಯಾಂಕ್‌ನ ರಾಜೇಶ್‌ ಮತ್ತು ಇತರರನ್ನು ಪ್ರಶ್ನಿಸಿದಾಗ ಸರಿಯಾದ ಮಾಹಿತಿ ನೀಡದೆ ನುಣುಚಿಕೊಂಡಿದ್ದರು. ಜತೆಗೆ, ಫ್ಲ್ಯಾಟ್‌ ಖರೀದಿಗೆ ನೀಡಿದ್ದ ಹಣವನ್ನು ನೀಡುವಂತೆ ಪತ್ರ ಬರೆದರೂ ಸ್ಪಂದಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

‘ಬ್ಯಾಂಕ್‌ನಲ್ಲಿ ಸಾಲ ಮಾಡಿ ಹರಾಜಿನಲ್ಲಿ ಫ್ಲ್ಯಾಟ್‌ ಖರೀದಿ ಮಾಡಿದ್ದೆ. ಆದರೆ, ಫ್ಲ್ಯಾಟ್‌ ಮೇಲೆ ಸ್ವರ್ಣ ಭಾರತಿ ಸಹಕಾರ ಬ್ಯಾಂಕ್‌ನಲ್ಲೂ ಸಾಲವಿದೆ ಎಂಬ ವಿಚಾರವನ್ನು ಮರೆಮಾಚಿದ್ದ ಜನಸ್ಮಾಲ್‌ ಬ್ಯಾಂಕ್‌ ಸಿಬ್ಬಂದಿ ಫ್ಲ್ಯಾಟ್‌ ಮಾರಾಟ ಮಾಡಿ ನಂಬಿಕೆ ದ್ರೋಹ ಹಾಗೂ ವಂಚನೆ ಮಾಡಿದ್ದು, ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಕೋರಿ ಗೋಪಾಲ ರೆಡ್ಡಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ’ ಎಂದು ಪೊಲೀಸರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.