ಬಂಧನ
(ಸಾಂದರ್ಭಿಕ ಚಿತ್ರ)
ಬೆಂಗಳೂರು: ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ(ಡಿಸಿಆರ್‌ಇ) ಸಂಗ್ರಹ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದ ನೌಕರರೊಬ್ಬರು ₹65 ಲಕ್ಷಕ್ಕೂ ಹೆಚ್ಚು ಅನುದಾನವನ್ನು ದುರ್ಬಳಕೆ ಮಾಡಿಕೊಂಡಿರುವ ಆರೋಪದಡಿ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಸಂಗ್ರಹ ಶಾಖೆಯ ಪ್ರಥಮದರ್ಜೆ ಸಹಾಯಕ ಸಂತೋಷ್‌ಕುಮಾರ್ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ನೌಕರ ಕಚೇರಿಗೂ ಬಾರದೇ ತಲೆಮರೆಸಿಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.
ಡಿಸಿಆರ್‌ಇ ಕಚೇರಿಯ ಪ್ರಭಾರ ಆಡಳಿತಾಧಿಕಾರಿ ಎಂ.ಕಿರಣ್ ಅವರು ನೀಡಿದ ದೂರು ಆಧರಿಸಿ ಶುಕ್ರವಾರ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.
‘ಆರೋಪಿ ಸಂತೋಷ್ ಕುಮಾರ್ ಅವರು 2004ರಲ್ಲಿ ಡಿಸಿಆರ್‌ಇ ಘಟಕಕ್ಕೆ ದ್ವಿತೀಯ ದರ್ಜೆ ಸಹಾಯಕರಾಗಿ ನೇಮಕಕೊಂಡಿದ್ದರು. 2007ರಿಂದ ಡಿಸಿಆರ್‌ಇ ಕೇಂದ್ರ ಕಚೇರಿಯಲ್ಲಿ ಸಂಗ್ರಹ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಸಂತೋಷ್ ಅವರು ಇತರರ ಜತೆಗೆ ಸೇರಿಕೊಂಡು, ಒಳಸಂಚು ರೂಪಿಸಿ ₹65 ಲಕ್ಷಕ್ಕೂ ಮೇಲ್ಪಟ್ಟು ಹಣ ದುರುಪಯೋಗ ಮಾಡಿ ಇಲಾಖೆಗೆ ನಷ್ಟವುಂಟು ಮಾಡಿದ್ದಾರೆ’ ಎಂಬ ದೂರು ಆಧರಿಸಿ ಎಫ್‌ಐಆರ್ ದಾಖಲಾಗಿದೆ.
ಇಲಾಖೆಯ ವಿಚಾರಣೆಯಲ್ಲೂ ಅಕ್ರಮ ಪತ್ತೆ: ‘ತುಮಕೂರು ಡಿಸಿಆರ್‌ಒ ಘಟಕದ ಇನ್‌ಸ್ಪೆಕ್ಟರ್ ಎನ್.ಎನ್.ಜಯಲಕ್ಷ್ಮಮ್ಮ ಅವರು ನಡೆಸಿದ ಇಲಾಖೆಯ ಪ್ರಾಥಮಿಕ ತನಿಖೆಯಲ್ಲೂ ಸಂತೋಷ್ ಅವರು ಅಕ್ರಮ ಎಸಗಿರುವುದು ಸಾಬೀತಾಗಿದೆ. ತನಿಖೆ ವೇಳೆ 2017ರಿಂದ 2024ರ ಅಕ್ಟೋಬರ್‌ವರೆಗೆ ಸಂಗ್ರಹ ಶಾಖೆಯ ಕಡತ ಪರಿಶೀಲನೆ ನಡೆಸಲಾಗಿತ್ತು. ಸಂತೋಷ್ ಕುಮಾರ್ ಅವರು ಅಧಿಕಾರಿಗಳ ದಿಕ್ಕುತಪ್ಪಿಸುವ ಉದ್ದೇಶದಿಂದ ಒಂದೇ ಕಡತ ಸಂಖ್ಯೆಯಲ್ಲಿ ಬೇರೆ ಬೇರೆ ಸಾಮಗ್ರಿಗಳನ್ನು ಖರೀದಿಸಿ ಎರಡೆರಡು ಬಿಲ್ಲು ತಯಾರಿಸಿ ಒಂದು ಬಿಲ್ ಅನ್ನು ಕಡತದಲ್ಲಿ ಇರಿಸಿದ್ದರು. ನಕಲಿ ಬಿಲ್‌ಗೆ ಮಂಜೂರಾತಿ ಪಡೆದು ಹಣ ದುರ್ಬಳಕೆ ಮಾಡಿಕೊಂಡಿರುವುದು ಪತ್ತೆಯಾಗಿದೆ. ಸಂಗ್ರಹ ಶಾಖೆಯ ನೋಂದಣಿ ಪುಸ್ತಕ ಹಾಗೂ ದಾಖಲಾತಿಗಳನ್ನೂ ಸಮರ್ಪಕವಾಗಿ ನಿರ್ವಹಣೆ ಮಾಡದೇ ಇರುವುದು ಕಂಡುಬಂದಿದೆ’ ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.