ADVERTISEMENT

ಮೈ ಮೇಲೆ ‘ದೇವರು’: ವಂಚಿಸಿದ ದಂಪತಿ

₹50 ಲಕ್ಷ, 820ಗ್ರಾಂ ಚಿನ್ನಾಭರಣ ಸಮೇತ ದಂಪತಿ ಪರಾರಿ

​ಪ್ರಜಾವಾಣಿ ವಾರ್ತೆ
Published 4 ಜನವರಿ 2019, 20:06 IST
Last Updated 4 ಜನವರಿ 2019, 20:06 IST

ಬೆಂಗಳೂರು: ‘ಮೈ ಮೇಲೆ ದೇವರು ಬರುತ್ತದೆ‘ ಎಂದು ಹೇಳಿ ಉದ್ಯಮಿ ಹಾಗೂ ಅವರ ಪತ್ನಿಯನ್ನು ನಂಬಿಸಿದ್ದ ದಂಪತಿ, ₹50 ಲಕ್ಷ ನಗದು ಹಾಗೂ 820 ಗ್ರಾಂ ಚಿನ್ನಾಭರಣ ಸಮೇತ ಪರಾರಿಯಾಗಿದ್ದಾರೆ.

ಹಣ ಹಾಗೂ ಚಿನ್ನಾಭರಣ ಕಳೆದುಕೊಂಡಿರುವ ಉದ್ಯಮಿ ನಹೀಂ ಅಲಿಬೇಗ್ ಎಂಬುವರು ಪುಲಿಕೇಶಿನಗರ ಠಾಣೆಗೆ ಗುರುವಾರ ದೂರು ನೀಡಿದ್ದಾರೆ. ಅದರನ್ವಯ ಮೊಹಮ್ಮದ್ ಮುಕ್ತಿಯಾರ್‌, ಆತನ ಪತ್ನಿ ಶಬಾನಂ ಹಾಜಿರಾ ಹಾಗೂ ಸಂಬಂಧಿ ಅದ್ನಾನ್ ಅಹಮದ್ ಎಂಬುವರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

‘ದುರ್ಗಾ ಎಂಟರ್‌ಪ್ರೈಸಸ್’ ಹೆಸರಿನಲ್ಲಿ ಒಳವಿನ್ಯಾಸ ಹಾಗೂ ಕನ್‌ಸ್ಟ್ರಕ್ಷನ್ ಕಂಪನಿ ನಡೆಸುತ್ತಿರುವನಹೀಂ ಅಲಿಬೇಗ್ ಅವರಿಗೆ 2015ರಲ್ಲಿ ಪರಿಚಯವಾಗಿದ್ದ ದಂಪತಿ, ಹಣ ಹಾಗೂ ಚಿನ್ನಾಭರಣ ಪಡೆದು ವಂಚಿಸಿದ್ದಾರೆ. 2017ರ ಮೇ ತಿಂಗಳಿನಿಂದಲೇ ಆ ದಂಪತಿ ತಲೆಮರೆಸಿಕೊಂಡಿದ್ದಾರೆ. ಉದ್ಯಮಿಯೇ ತಡವಾಗಿ ದೂರು ನೀಡಿದ್ದಾರೆ’ ಎಂದು ತಿಳಿಸಿದರು.

ADVERTISEMENT

ಮೈ ಮೇಲೆ ‘ದೇವರು’ ಬರುತ್ತದೆಂದು ನಂಬಿಸಿದ್ದರು: ‘ಆರೋಪಿ ಮುಕ್ತಿಯಾರ್, ತನ್ನ ಪತ್ನಿಶಬಾನಂಳನ್ನು ನನಗೆ ಹಾಗೂ ನನ್ನ ಪತ್ನಿಗೆ ಪರಿಚಯ ಮಾಡಿಸಿದ್ದ. ‘ನನ್ನ ಪತ್ನಿ ಮೈ ಮೇಲೆ ದೇವರು ಬರುತ್ತದೆ. ನಮ್ಮ ಮನೆಯಲ್ಲೂ ದೇವರು ಇದ್ದು, ಅಲ್ಲಿಯೇ ಆಕೆ ನಿತ್ಯವೂ ಪೂಜೆ ಮಾಡುತ್ತಾಳೆ. ನಮ್ಮೊಂದಿಗೆ ದೇವರು ಇದ್ದಾನೆ. ಆತನ ಮೂಲಕ ನಿಮಗೆ ಒಳವಿನ್ಯಾಸ ಹಾಗೂ ಕನ್‌ಸ್ಟ್ರಕ್ಷನ್ ಕೆಲಸ ಕೊಡಿಸುತ್ತೇವೆ’ ಎಂದಿದ್ದ. ಅದನ್ನು ನಾವು ನಂಬಿದ್ದೆವು’ ಎಂದು ನಹೀಂ ದೂರಿನಲ್ಲಿ ಹೇಳಿದ್ದಾರೆ.

‘ನನ್ನ ಖಾತೆಯಲ್ಲಿದ್ದ ₹15 ಲಕ್ಷವನ್ನು ಶಬಾನಂ, 2015ರಲ್ಲಿ ಚೆಕ್ ಮೂಲಕ ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದಳು. ಮುಕ್ತಿಯಾರ್ ಸಹ ನನ್ನಿಂದ ₹20 ಲಕ್ಷ ಪಡೆದುಕೊಂಡಿದ್ದ. ನಂತರವೂ ದಂಪತಿಗೆ ₹15 ಲಕ್ಷ ಕೊಟ್ಟಿದ್ದೆ. ಅತ್ತ ನನ್ನ ಪತ್ನಿಯಿಂದಲೂ ದಂಪತಿ, 820 ಗ್ರಾಂ ಚಿನ್ನಾಭರಣ ಪಡೆದುಕೊಂಡಿದ್ದರು. ಅದು ನನಗೆ ತಡವಾಗಿ ಗೊತ್ತಾಯಿತು’ ಎಂದಿದ್ದಾರೆ.

‘ದೇವರು ಹೆಸರಿನಲ್ಲೇ ಆರೋಪಿಗಳು ನಮ್ಮನ್ನು ವಂಚಿಸಿ ಪರಾರಿಯಾಗಿದ್ದಾರೆ. ಅವರ ಕೃತ್ಯಕ್ಕೆ ಸಂಬಂಧಿ ಅದ್ನಾನ್ ಸಹಕಾರ ನೀಡಿದ್ದ’ ಎಂದು ದೂರಿನಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.