ADVERTISEMENT

ಕನ್ನಡದಲ್ಲಿ ಕ್ಷೀಣಿಸಿದ ವಿಮರ್ಶೆಗಳು: ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ ಕಳವಳ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2021, 22:25 IST
Last Updated 21 ಫೆಬ್ರುವರಿ 2021, 22:25 IST
ಬಿಎಂಶ್ರೀ ಪ್ರತಿಷ್ಠಾನದ ವತಿಯಿಂದ (ಕುಳಿತವರು ಎಡದಿಂದ ಮೊದಲನೆಯವರು) ಓ.ಎಲ್.ನಾಗಭೂಷಣ ಸ್ವಾಮಿ ಅವರಿಗೆ ‘ಪ್ರೊ.ಎಲ್‌.ಎಸ್‌.ಶೇಷಗಿರಿರಾವ್‌ ವಿಮರ್ಶಾ ಪ್ರಶಸ್ತಿ’ ಹಾಗೂ ಡಿ.ವಿ.ರಾಜಶೇಖರ್ ಅವರಿಗೆ ‘ವಿ.ನಾಗರಾಜ ರಾವ್‌ ಸಮೂಹ ಮಾಧ್ಯಮ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಎಲ್.ಹನುಮಂತಯ್ಯ, ಹಿರಿಯ ಪತ್ರಕರ್ತ ಬಿ.ಎಂ.ಹನೀಫ್, ಲೇಖಕ ದಂಡಪ್ಪ, ಪ್ರತಿಷ್ಠಾನದ ಅಧ್ಯಕ್ಷ ಆರ್.ಲಕ್ಷ್ಮೀನಾರಾಯಣ ಹಾಗೂ ಇತರರು ಇದ್ದರು.
ಬಿಎಂಶ್ರೀ ಪ್ರತಿಷ್ಠಾನದ ವತಿಯಿಂದ (ಕುಳಿತವರು ಎಡದಿಂದ ಮೊದಲನೆಯವರು) ಓ.ಎಲ್.ನಾಗಭೂಷಣ ಸ್ವಾಮಿ ಅವರಿಗೆ ‘ಪ್ರೊ.ಎಲ್‌.ಎಸ್‌.ಶೇಷಗಿರಿರಾವ್‌ ವಿಮರ್ಶಾ ಪ್ರಶಸ್ತಿ’ ಹಾಗೂ ಡಿ.ವಿ.ರಾಜಶೇಖರ್ ಅವರಿಗೆ ‘ವಿ.ನಾಗರಾಜ ರಾವ್‌ ಸಮೂಹ ಮಾಧ್ಯಮ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಎಲ್.ಹನುಮಂತಯ್ಯ, ಹಿರಿಯ ಪತ್ರಕರ್ತ ಬಿ.ಎಂ.ಹನೀಫ್, ಲೇಖಕ ದಂಡಪ್ಪ, ಪ್ರತಿಷ್ಠಾನದ ಅಧ್ಯಕ್ಷ ಆರ್.ಲಕ್ಷ್ಮೀನಾರಾಯಣ ಹಾಗೂ ಇತರರು ಇದ್ದರು.   

ಬೆಂಗಳೂರು:‘ಕನ್ನಡದಲ್ಲಿ ಇಂದು ವಿಮರ್ಶೆಗಳು ತುಂಬಾ ಕ್ಷೀಣಿಸಿವೆ. ವಿಮರ್ಶೆ ಲೇಖಕನನ್ನು ಕೈಹಿಡಿದು ನಡೆಸುವ ದೀವಿಗೆ. ಆ ದೀವಿಗೆ ಇಂದು ಕಣ್ಮುಚ್ಚಿ ಕುಳಿತಿದೆ ಎಂಬ ಸಂಗತಿ ಬಹಳ ಕಾಡುತ್ತಿದೆ’ ಎಂದು ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ ಬೇಸರ ವ್ಯಕ್ತಪಡಿಸಿದರು.

ಬಿಎಂಶ್ರೀ ಪ್ರತಿಷ್ಠಾನವು ಭಾನುವಾರ ಹಮ್ಮಿಕೊಂಡಿದ್ದ‘ಪ್ರೊ.ಎಲ್‌.ಎಸ್‌. ಶೇಷಗಿರಿರಾವ್‌ ವಿಮರ್ಶಾ ಪ್ರಶಸ್ತಿ’ ಹಾಗೂ‘ವಿ.ನಾಗರಾಜ ರಾವ್‌ ಸಮೂಹ ಮಾಧ್ಯಮ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಈಗ ಬಹಳಷ್ಟು ಯುವಕರು ಬರೆಯುತ್ತಿದ್ದಾರೆ.ವಿಮರ್ಶೆಯ ವಿಚಾರದಲ್ಲಿ ಹಿರಿಯರು ಹೆಚ್ಚಾಗಿ ಮಾರ್ಗದರ್ಶನ ನೀಡುವ ಅಗತ್ಯವಿದೆ.ಎಡಪಂಥೀಯ ಚಿಂತನೆಗಳನ್ನು ಕಾಡಿದಂತಹ ಲೇಖಕ ಟಾಲ್‌ಸ್ಟಾಯ್‌. ಅನುವಾದದ ಮೂಲಕ ಅವರನ್ನು ಕನ್ನಡಕ್ಕೆ ಪರಿಚಯಿಸುವುದು ಮಹತ್ವದ ಕೆಲಸ’ ಎಂದರು.

ADVERTISEMENT

ವಿಮರ್ಶಕ ಓ.ಎಲ್.ನಾಗಭೂಷಣ ಸ್ವಾಮಿ,‘ವಿಮರ್ಶೆ ಎನ್ನುವ ಪ್ರಕಾರ ಕಣ್ಮರೆಯಾಗುತ್ತಿರುವುದು ವಿಷಾದನೀಯ. ‘ನಮ್ಮ ಸಂಸ್ಕೃತಿ, ನಮ್ಮ ಹೆಮ್ಮೆ’ ಎಂದು ಎಷ್ಟೇ ಹೆಗ್ಗಳಿಕೆ ಹೊಂದಿದ್ದರೂ ಈಗಿನ ಕಾಲದಲ್ಲಿ ಸಂವೇದನೆ ಇಲ್ಲದ, ಸೂಕ್ಷ್ಮತೆ ಬೇಕಾಗಿಲ್ಲದ, ಪ್ರೀತಿಗಿಂತಲೂ ದ್ವೇಷ, ಆಕ್ರೋಶವೇ ಮುಖ್ಯವಾಗಿರುವ ಸಾಹಿತ್ಯಗಳು ರಚನೆಯಾಗುತ್ತಿವೆ. ಕೇವಲ ರಾಷ್ಟ್ರ ಧೋರಣೆ ಹೊಂದಿರುವ ರಾಷ್ಟ್ರದಲ್ಲಿ ವಿಮರ್ಶಕರನ್ನೂ ರಾಷ್ಟ್ರದ್ರೋಹಿಗಳೆಂದು ಪರಿಗಣಿಸುವ ದಿನಗಳು ದೂರವಿಲ್ಲ. ಎಲ್ಲೆಲ್ಲೂ ರಾಷ್ಟ್ರಭಕ್ತಿ, ದೇಶದ್ರೋಹಿ, ಪ್ರಗತಿ ವಿರೋಧಿ ಎಂಬ ಪದಗಳೇ ಕೇಳುತ್ತಿವೆ’ ಎಂದು ಟೀಕಿಸಿದರು.

ಪತ್ರಕರ್ತ ಡಿ.ವಿ.ರಾಜಶೇಖರ್,‘ ಹಿಂದಿನ ಹಾಗೂ ಇಂದಿನ ಮಾಧ್ಯಮಗಳಲ್ಲಿ ಹಲವು ವ್ಯತ್ಯಾಸಗಳಿವೆ. ಮೇಲ್ನೋಟಕ್ಕೆ ಇದು ಎಲ್ಲರಿಗೂ ತಿಳಿದಿರುವ ಸಂಗತಿ. ಆದರೆ, ತಪ್ಪು ನಡೆಯುತ್ತಿರುವುದೆಲ್ಲಿ, ಎಲ್ಲಿ ಎಡವುತ್ತಿದ್ದಾರೆ ಎಂದು ಹೇಳುವರರು ಮರೆಯಾಗಿದ್ದಾರೆ’ ಎಂದು ಹೇಳಿದರು.

ಪ್ರಶಸ್ತಿ ಪ್ರದಾನ:ಬಿ.ಎಂ.ಶ್ರೀ.ಪ್ರತಿಷ್ಠಾನದ ವತಿಯಿಂದಓ.ಎಲ್.ನಾಗಭೂಷಣ ಸ್ವಾಮಿ ಅವರಿಗೆ ‘ಪ್ರೊ.ಎಲ್‌.ಎಸ್‌.ಶೇಷಗಿರಿರಾವ್‌ ವಿಮರ್ಶಾ ಪ್ರಶಸ್ತಿ’ ಹಾಗೂಡಿ.ವಿ.ರಾಜಶೇಖರ್ ಅವರಿಗೆ‘ವಿ.ನಾಗರಾಜರಾವ್‌ ಸಮೂಹ ಮಾಧ್ಯಮ ಪ್ರಶಸ್ತಿ’ ಪ್ರದಾನ ಮಾಡಲಾಯಿತು.ಈ ಎರಡೂ ಪ್ರಶಸ್ತಿಗಳು ತಲಾ ₹10 ಸಾವಿರ ನಗದು ಮತ್ತು ಸ್ಮರಣಿಕೆಗಳನ್ನು ಒಳಗೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.