
ಬೆಂಗಳೂರು: ರಕ್ಷಣಾ ಕ್ಷೇತ್ರದಲ್ಲಿ ಅತಿ ದೊಡ್ಡ ಆಮದು ರಾಷ್ಟ್ರವಾಗಿದ್ದ ಭಾರತವು, ಸದ್ಯ ತನ್ನ ಅಗತ್ಯದ ಶೇಕಡ 90ರಷ್ಟು ಸಾಮಗ್ರಿಗಳನ್ನು ತಾನೇ ಉತ್ಪಾದಿಸಿಕೊಳ್ಳುವ ಮೂಲಕ ಆತ್ಮನಿರ್ಭರ ರಾಷ್ಟ್ರವಾಗಿ ಹೊರ ಹೊಮ್ಮಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ಐಎಂಎಸ್ ಫೌಂಡೇಷನ್, ಲಘು ಉದ್ಯೋಗ ಭಾರತಿ–ಕರ್ನಾಟಕ ಸಹಯೋಗದೊಂದಿಗೆ ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಗುರುವಾರ ಆಯೋಜಿಸಿದ್ದ ಭಾರತದ ಉತ್ಪಾದನಾ ಪ್ರದರ್ಶನ–7ನೇ ಆವೃತ್ತಿ ಉದ್ಘಾಟಿಸಿ ಮಾತನಾಡಿದರು.
‘ಈ ಹಿಂದೆ ಶೇಕಡ 70ರಷ್ಟು ರಕ್ಷಣಾ ಸಾಮಗ್ರಿಗಳು ಆಮದು ಆಗುತ್ತಿದ್ದವು. ಈಗ ಎಲ್ಲವೂ ಸ್ವದೇಶದಲ್ಲೇ ತಯಾರಾಗುತ್ತಿವೆ. ಇದು ದೇಶದ ಸೌರ್ವಭೌಮತ್ವಕ್ಕೆ ಹಿಡಿದ ಕನ್ನಡಿ. ಈ ಎಲ್ಲಾ ಬೆಳವಣಿಗೆಗೂ ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆ, ಸ್ಟಾರ್ಟ್‌ಅಪ್‌ಗಳು ಹಾಗೂ ಖಾಸಗಿ ಅನ್ವೇಷಕರ ಕೊಡುಗೆ ಬಹು ದೊಡ್ಡದು’ ಎಂದರು.
‘ಬೆಳವಣಿಗೆ ಹಾದಿಯಲ್ಲಿದ್ದರೂ ಕೈಗಾರಿಕೆಗಳನ್ನು ಅನುಮಾನಗಳಿಂದ ನೋಡುವ ಕಾಲವಿತ್ತು. ಆದರೆ, ಇಂದು ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ದೇಶ ಪ್ರಗತಿಯತ್ತ ಸಾಗುತ್ತಿದೆ’ ಎಂದು ಹೇಳಿದರು.
80ರ ದಶಕದ ಘಟನೆ ನೆನಪಿಸಿಕೊಂಡ ಸಚಿವರು, ‘1984ರಲ್ಲಿ ನನ್ನ ತಂದೆ ಒಂದು ಚೀಲ ಸಿಮೆಂಟ್‌ಗಾಗಿ ದಿನವಿಡೀ ಸರದಿ ಸಾಲಿನಲ್ಲಿ ನಿಂತಿದ್ದರು. ಅಂದು ಅಷ್ಟು ಅಭಾವವಿತ್ತು. ಇಂದು ಪರಿಸ್ಥಿತಿ ಬದಲಾಗಿದ್ದು, ಇಸ್ರೊ ಅಗ್ಗದ ವೆಚ್ಚದಲ್ಲಿ ಉಪಗ್ರಹಗಳನ್ನು ಉಡಾವಣೆ ಮಾಡುತ್ತಿದೆ. ಇದು ನವ ಭಾರತ’ ಎಂದರು.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ‘ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆ ಉದ್ಯಮವು ದೇಶದ ಆರ್ಥಿಕತೆಯ ಬೆನ್ನೆಲುಬು ಆಗಿದೆ. ಈ ಕ್ಷೇತ್ರದಲ್ಲಿ 30 ಕೋಟಿ ಜನರು ಕೆಲಸ ಮಾಡುತ್ತಿದ್ದು, ದೇಶದ ಆರ್ಥಿಕತೆಗೆ ಶೇಕಡ 30ರಷ್ಟು ಕೊಡುಗೆ ಇದೆ. ತಯಾರಿಕಾ ವಲಯದಲ್ಲಿ ಶೇಕಡ 45 ಹಾಗೂ ರಫ್ತು ಕ್ಷೇತ್ರದಲ್ಲಿ ಶೇಕಡ 40 ರಷ್ಟು ಕೊಡುಗೆ ನೀಡಿದೆ. ಇಸ್ರೊ, ಡಿಆರ್‌ಡಿಒ, ಎಚ್‌ಎಎಲ್, ಬಿಎಚ್‌ಇಎಲ್ ಸಂಸ್ಥೆಗಳು ತಮ್ಮ ಪೂರೈಕೆ ಸರಪಳಿಯಲ್ಲಿ ಸಣ್ಣ ಮತ್ತು ಕೈಗಾರಿಕಾ ವಲಯವನ್ನು ಸೇರಿಸಿಕೊಂಡು ಬೆಳೆಯಬೇಕು’ ಎಂದು ಹೇಳಿದರು.
ಇಸ್ರೊ ನಡೆದು ಬಂದ ಹಾದಿಯನ್ನು ವಿವರಿಸಿದ ಅಧ್ಯಕ್ಷ ವಿ.ನಾರಾಯಣನ್, ‘ಕೆಲ ದಿನಗಳ ಹಿಂದೆ ಸ್ವದೇಶಿ ನಿರ್ಮಿತ ‘ಬಾಹುಬಲಿ’ ರಾಕೆಟ್ ಮೂಲಕ ಅತ್ಯಂತ ಭಾರವಾದ ಉಪಗ್ರಹವನ್ನು ಕಕ್ಷೆಗೆ ಸೇರಿಸುವುದರೊಂದಿಗೆ ಚಾರಿತ್ರಿಕ ಸಾಧನೆ ಮಾಡಿದ್ದೇವೆ. 4,410 ಕೆ.ಜಿ ತೂಕದ ಸಂವಹನ ಉಪಗ್ರಹವನ್ನು (ಸಿಎಂಎಸ್–03) ಹೊತ್ತು ನಭಕ್ಕೆ ಚಿಮ್ಮಿದ ಲಾಂಚ್ ವೆಹಿಕಲ್ ಮಾರ್ಕ್–3 (ಎಲ್‌ವಿಎಂ3-ಎಂ5) ‘ಬಾಹುಬಲಿ’ಯು ‘ಆತ್ಮನಿರ್ಭರ ಭಾರತ’ದ ಸಾಧನೆಗೆ ಸಾಕ್ಷಿ. ಪ್ರಸ್ತುತ 450 ಕ್ಕೂ ಹೆಚ್ಚು ದೇಶಿಯ ಕಂಪನಿಗಳೊಂದಿಗೆ ಇಸ್ರೊ ಪಾಲುದಾರಿಕೆ ಹೊಂದಿದೆ’ ಎಂದು ತಿಳಿಸಿದರು.
ಸಂಸದ ತೇಜಸ್ವಿ ಸೂರ್ಯ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಧ್ಯಕ್ಷ ಸಮೀರ್ ವಿ.ಕಾಮತ್, ಎಲ್ ಆ್ಯಂಡ್ ಟಿ ರಕ್ಷಣಾ ವಿಭಾಗದ ಮುಖ್ಯಸ್ಥ ಅರುಣ್ ರಾಮಚಾಂದಿನಿ, ಭಾರತ ಫೋರ್ಜ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಬಾಬಾ ಕಲ್ಯಾಣಿ, ಲಘು ಉದ್ಯೋಗ ಭಾರತಿ– ಕರ್ನಾಟಕ ಘಟಕದ ಅಧ್ಯಕ್ಷ ಕೆ. ನಾರಾಯಣ ಪ್ರಸನ್ನ, ಐಎಂಎಸ್ ಫೌಂಡೇಷನ್ ಅಧ್ಯಕ್ಷ ಎಚ್.ವಿ.ಎಸ್.ಕೃಷ್ಣ ಹಾಜರಿದ್ದರು.
ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಅಂದರೆ ಬಡವರ ಸಬಲೀಕರಣ ಮತ್ತು ದೇಶದ ಬಲವರ್ಧನೆ ಎಂದರ್ಥಪ್ರಲ್ಹಾದ ಜೋಶಿ ಕೇಂದ್ರ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.