ADVERTISEMENT

434 ಕಾಲೇಜುಗಳಲ್ಲೂ ಪ್ರಭಾರ ಪ್ರಾಂಶುಪಾಲರು- 310 ಹುದ್ದೆಗಳ ನೇಮಕಾತಿ ನನೆಗುದಿಗೆ

434 ಕಾಲೇಜುಗಳಲ್ಲೂ ಪ್ರಭಾರ ಪ್ರಾಂಶುಪಾಲರು l 310 ಹುದ್ದೆಗಳ ನೇಮಕಾತಿ ನನೆಗುದಿಗೆ

ಚಂದ್ರಹಾಸ ಹಿರೇಮಳಲಿ
Published 31 ಮಾರ್ಚ್ 2023, 5:59 IST
Last Updated 31 ಮಾರ್ಚ್ 2023, 5:59 IST
   

ಬೆಂಗಳೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇದ್ದ 310 ಪ್ರಾಂಶುಪಾಲರ (ಗ್ರೇಡ್‌–1) ಹುದ್ದೆಗಳ ನೇರ ನೇಮಕಾತಿ ಪ್ರಕ್ರಿಯೆ ನನೆಗುದಿಗೆ ಬಿದ್ದಿದ್ದು, ರಾಜ್ಯದ 434 ಕಾಲೇಜುಗಳಲ್ಲೂ ‘ಪ್ರಭಾರ’ವೇ ಮುಂದುವರಿದಿದೆ.

ಪ್ರಥಮ ದರ್ಜೆ ಕಾಲೇಜುಗಳ ಪ್ರಾಂಶುಪಾಲರ ಹುದ್ದೆಗಳಿಗೆ ಕಾಯಂ ನೇಮಕ ಮಾಡುವ ಪ್ರಕ್ರಿಯೆ ಹಲವು ದಶಕಗಳಿಂದಲೂ ನಿಯಮಿತವಾಗಿ ನಡೆದಿಲ್ಲ. ಸೇವಾ ಹಿರಿತನದ ಆಧಾರದ ಮೇಲೆ ಹಲವು ಪ್ರಾಧ್ಯಾಪಕರಿಗೆ 2008–2009ನೇ ಸಾಲಿನಲ್ಲಿ ಪ್ರಾಂಶುಪಾಲರ ಹುದ್ದೆಗಳಿಗೆ ಬಡ್ತಿ ನೀಡಲಾಗಿತ್ತು. ಒಂದು ಸಾವಿರ ವಿದ್ಯಾರ್ಥಿಗಳಿಗಿಂತ ಕಡಿಮೆ ಇರುವ ಹಾಗೂ ಒಂದು ಸಾವಿರಕ್ಕಿಂತ ಹೆಚ್ಚಿರುವ ಕಾಲೇಜುಗಳನ್ನು ವಿಂಗಡಿಸಿ ಗ್ರಾಡ್‌–1 ಹಾಗೂ ಗ್ರೇಡ್‌–2 ಪ್ರಾಂಶುಪಾಲರು ಎಂದು ಪರಿಗಣಿಸಿ ಬಡ್ತಿಗೆ ಪರಿಗಣಿಸಲಾಗಿತ್ತು. ಹೀಗೆ ಕಾಯಂ ಪ್ರಾಂಶುಪಾಲರನ್ನು ನೇಮಕ ಮಾಡಿ 14 ವರ್ಷಗಳಾದರೂ ಮತ್ತೆ ಪ್ರಕ್ರಿಯೆಗಳೇ ನಡೆದಿರಲಿಲ್ಲ.

ಅಂದು ಪ್ರಾಂಶುಪಾಲರಾಗಿ ಬಡ್ತಿ ಹೊಂದಿದ್ದ ಎಲ್ಲರೂ ನಿವೃತ್ತರಾಗಿದ್ದಾರೆ. ಸುದೀರ್ಘ ಅವಧಿ ಬಡ್ತಿ ನೀಡದ ಕಾರಣ ಸಾವಿರಕ್ಕೂ ಹೆಚ್ಚು ಪ್ರಾಧ್ಯಾಪಕರು ಪ್ರಾಂಶುಪಾಲರ ಹುದ್ದೆ ದೊರಕದೆ ನಿವೃತ್ತರಾಗಿದ್ದಾರೆ. ರಾಜ್ಯದ ಎಲ್ಲ ಪ್ರಥಮ ದರ್ಜೆ ಕಾಲೇಜುಗಳಲ್ಲೂ ಹಿರಿಯ ಪ್ರಾಧ್ಯಾಪಕರೇ ಪ್ರಭಾರ ವಹಿಸಿಕೊಂಡಿದ್ದಾರೆ. ಒಂದು ಕಾಲೇಜಿನಲ್ಲೂ ಕಾಯಂ ಪ್ರಾಂಶುಪಾಲರಿಲ್ಲ.

ADVERTISEMENT

ನೇರ ನೇಮಕಾತಿ ಪ್ರಕ್ರಿಯೆಯೂ ನನೆಗುದಿಗೆ: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ ಪ್ರಾಂಶುಪಾಲರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಉನ್ನತ ಶಿಕ್ಷಣ ಇಲಾಖೆ ಮಾರ್ಚ್‌ 2022ರಲ್ಲಿ ಅಧಿಸೂಚನೆ ಹೊರಡಿಸಿತ್ತು. ಪರೀಕ್ಷೆ ನಡೆಸುವ ಹೊಣೆಗಾರಿಕೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (ಕೆಇಎ) ವಹಿಸಲಾಗಿತ್ತು. ಪ್ರಾಧಿಕಾರ ಡಿಸೆಂಬರ್‌ನಲ್ಲಿ ಲಿಖಿತ ಪರೀಕ್ಷೆ ನಡೆಸಲು ಅರ್ಜಿ ಆಹ್ವಾನಿಸಿತ್ತು. 15 ವರ್ಷಗಳು ಸೇವೆ ಪೂರೈಸಿದ, ಪಿಎಚ್‌.ಡಿ ಪಡೆದ ಅಧ್ಯಾಪಕರು ಅರ್ಜಿ ಸಲ್ಲಿಸಿದ್ದರು. ಇದೇ ಫೆಬ್ರುವರಿ 28ರಂದು ಪರೀಕ್ಷೆ ನಿಗದಿಯಾಗಿತ್ತು. ಕೊನೆ ಕ್ಷಣಗಳಲ್ಲಿ ಪರೀಕ್ಷೆ ಮುಂದೂಡಲಾಗಿತ್ತು.

ನಿರ್ದೇಶಕ ಸ್ಥಾನವೂ ಪ್ರಭಾರ: ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಪ್ರಾಧ್ಯಾಪಕರಿಗೆ ಬಡ್ತಿ ನೀಡದ ಕಾರಣ ಪ್ರಾಂಶುಪಾಲರ ಹುದ್ದೆಗಳ ಜತೆಗೆ, ಪ್ರಾಂಶುಪಾಲರ ಸ್ಥಾನದಿಂದ ಬಡ್ತಿ ಹೊಂದುವ ಜಂಟಿ ನಿರ್ದೇಶಕರು, ಹೆಚ್ಚುವರಿ ನಿರ್ದೇಶಕರು ಹಾಗೂ ನಿರ್ದೇಶಕ ಹುದ್ದೆಗಳೂ ಖಾಲಿ ಇವೆ. ಸೇವಾ ಹಿರಿತನ ಹೊಂದಿರುವ ಪ್ರಾಧ್ಯಾಪಕರೇ ಪ್ರಭಾರ ವಹಿಸಿ
ಕೊಂಡು ಆ ಸ್ಥಾನಗಳ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಪ್ರಾಧ್ಯಾಪಕರಾಗಿರುವ ಅಪ್ಪಾಜಿ ಗೌಡ ಅವರು ಪ್ರಭಾರದ ಮೇಲೆ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.