ADVERTISEMENT

‘ಸ್ಮಶಾನ’ ಸಿಬ್ಬಂದಿಗೆ ಸಂಬಳ ಪಾವತಿಗೆ ಮೀನ ಮೇಷ

ಕೋವಿಡ್‌ಗೆ ಕಂಗೆಡದೆ ಕಾಯಕ ನಿರ್ವಹಿಸಿದ ಕಾರ್ಮಿಕರು l ಕುಟುಂಬ ನಿರ್ವಹಣೆ ಕಷ್ಟಸಾಧ್ಯ – ಅಳಲು

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2021, 21:46 IST
Last Updated 14 ಏಪ್ರಿಲ್ 2021, 21:46 IST
ಕಲ್ಪಳ್ಳಿಯ ಸ್ಮಶಾನದಲ್ಲಿ ಗುಂಡಿ ತೋಡುತ್ತಿರುವ ಸಿಬ್ಬಂದಿ
ಕಲ್ಪಳ್ಳಿಯ ಸ್ಮಶಾನದಲ್ಲಿ ಗುಂಡಿ ತೋಡುತ್ತಿರುವ ಸಿಬ್ಬಂದಿ   

ಬೆಂಗಳೂರು: ಕೋವಿಡ್‌ ಕಾಲದಲ್ಲೂ ಕಂಗೆಡದೆ ಅಂತ್ಯಕ್ರಿಯೆಗೆ ನೆರವಾಗುವ ಕಾಯಕ ನಿರ್ವಹಿಸುತ್ತಿರುವ ಸ್ಮಶಾನ ಹಾಗೂ ಚಿತಾಗಾರಗಳ ಕಾರ್ಮಿಕರು ತಿಂಗಳಾನುಗಟ್ಟಲೆ ಸಂಬಳ ಕೈಸೇರದೇ ಕಂಗೆಟ್ಟಿದ್ದಾರೆ. ಬಿಬಿಎಂಪಿಯ ಕೆಲವು ವಲಯಗಳಲ್ಲಿ ಸ್ಮಶಾನ ನಿರ್ವಹಣೆ ಸಿಬ್ಬಂದಿ ಸಂಬಳದ ಮುಖ ನೋಡದೇ 10 ತಿಂಗಳಿಗೂ ಹೆಚ್ಚು ಕಾಲ ಕಳೆದಿದೆ.

‘ಈ ಹಿಂದೆ ನಮಗೆ ಇಂತಿಷ್ಟು ಸಂಬಳ ಎಂಬುದು ಇರಲಿಲ್ಲ. ತಿಂಗಳಿಗೋ ಸಾವಿರವೋ ಎರಡು ಸಾವಿರವನ್ನೋ ನೀಡುತ್ತಿದ್ದರು. ಜಿ.ಪದ್ಮಾವತಿ ಅವರು ಮೇಯರ್‌ ಆಗಿದ್ದಾಗ ನಮಗೆ ಮಾಸಿಕ ಸಂಬಳ ನಿಗದಿಯಾಯಿತು. ನಮಗೆ ತಿಂಗಳಿಗೆ ₹ 10,500 ಸಂಬಳ ನೀಡುತ್ತಿದ್ದರು. ಇದು ಕಡಿಮೆಯಾಗುತ್ತದೆ ಎಂದು ಪ್ರತಿಭಟನೆ ನಡೆಸಿದ್ದೆವು. ಆ ಬಳಿಕ ತಿಂಗಳಿಗೆ ₹ 17 ಸಾವಿರ ಕನಿಷ್ಠ ವೇತನ ನಿಗದಿಪಡಿಸುವಂತೆ ಹಿಂದಿನ ಬಿಬಿಎಂಪಿ ಆಯುಕ್ತರು ಆದೇಶ ಮಾಡಿದ್ದರು. ಆ ಆದೇಶವೂ ಜಾರಿಯಾಗಿಲ್ಲ. ತಿಂಗಳ ಸಂಬಳವನ್ನೂ ನೀಡುತ್ತಿಲ್ಲ. ಯಲಹಂಕ ಮತ್ತು ದಕ್ಷಿಣ ವಲಯಗಳಲ್ಲಿ ಸಂಬಳವಾಗದೇ 10 ತಿಂಗಳುಗಳು ಕಳೆದಿವೆ. ಪಶ್ಚಿಮ ವಲಯದಲ್ಲಿ 9 ತಿಂಗಳುಗಳಿಂದ ಸಂಬಳದ ಮುಖ ನೋಡಿಲ್ಲ. ರಾಜರಾಜೇಶ್ವರಿನಗರ ವಲಯದಲ್ಲಿ ಮೂರು ತಿಂಗಳುಗಳಿಂದ ಕಾರ್ಮಿಕರಿಗೆ ಕೈಗೆ ಹಣ ಸೇರಿಲ್ಲ’ ಎಂದುಹೆಸರು ಬಹಿರಂಗಪಡಿಸಲು ಬಯಸದ ಚಿತಾಗಾರ ನಿರ್ವಹಣೆ ಸಿಬ್ಬಂದಿ ಅಳಲು ತೋಡಿಕೊಂಡರು.

‘ಸಂಬಳ ಇಲ್ಲದ ಕಾರಣ ಕುಟುಂಬ ನಿರ್ವಹಣೆಯೂ ಕಷ್ಟವಾಗಿದೆ. ಸಂಬಳ ಬಿಡುಗಡೆಗೆ ಕೆಲವು ಅಧಿಕಾರಿಗಳು ಲಂಚಕ್ಕಾಗಿ ಬೇಡಿಕೆ ಇಡುತ್ತಿದ್ದಾರೆ. ಏನು ಮಾಡಬೇಕು ಎಂದು ದಿಕ್ಕೇ ತೋಚದಂತಾಗಿದೆ. ನಮ್ಮ ಅಳಲನ್ನು ಕೇಳುವವರಿಲ್ಲ’ ಎಂದರು.

ADVERTISEMENT

‘ಈ ಹಿಂದೆ ಮೃತರ ಅಂತ್ಯಕ್ರಿಯೆಗೆ ಬಳಸುವ ಅಕ್ಕಿಗಳನ್ನು ಬಳಸುತ್ತಿದ್ದೆವು. ಕೋವಿಡ್‌ ಕಾಣಿಸಿಕೊಂಡ ಬಳಿಕ ಅದನ್ನು ಬಳಸುವುದಕ್ಕೂ ಭಯವಾಗುತ್ತಿದೆ. ಈ ಹಿಂದೆ ಜನರು ನಮ್ಮ ಕೆಲಸ ಮೆಚ್ಚಿ ಒಂದಿಷ್ಟು ಭಕ್ಷೀಸು ನೀಡುತ್ತಿದ್ದರು. ಕೋವಿಡ್‌ ಬಳಿಕ ಭಕ್ಷೀಸು ಕೂಡಾ ವಿರಳವಾಗಿದೆ’ ಎಂದು ಅವರು ತಿಳಿಸಿದರು.

‘ಕೋವಿಡ್‌ನಿಂದ ಮೃತಪಟ್ಟವರ ಕಳೆಬರದ ಅಂತ್ಯಕ್ರಿಯೆ ವೇಳೆ ವೈಯಕ್ತಿಕ ಸುರಕ್ಷಾ ಸಾಧನ (ಪಿಪಿಇ ಕಿಟ್‌) ಧರಿಸಬೇಕು. ಚಿತಾಗಾರದಲ್ಲಿ ಮೊದಲೇ ಬೆಂಕಿಯ ಬೇಗೆ. ಪಿಪಿಇ ಕಿಟ್‌ ಧರಿಸಿದರೆ ಅರ್ಧ ತಾಸು ಕೂಡಾ ಕೆಲಸ ಮಾಡಲು ಸಾಧ್ಯವಿಲ್ಲ. ಈ ಕೆಲಸವೇ ಬೇಡ ಎಂಬಂತಾಗಿದೆ. ತಲೆತಲಾಂತರದಿಂದ ಮಾಡಿಕೊಂಡು ಬಂದ ಕಾಯಕವನ್ನು ನಿಲ್ಲಿಸುವುದು ಬೇಡ ಎಂಬ ಕಾರಣಕ್ಕೆ ಮುಂದುವರಿಸುತ್ತಿದ್ದೇವೆ’ ಎಂದು ಸುಮನಹಳ್ಳಿಯ ಚಿತಾಗಾರದ ಸಿಬ್ಬಂದಿ ಎನ್‌.ರವಿ ತಮ್ಮ ಕಷ್ಟ ಹೇಳಿಕೊಂಡರು.

ಚಿತಾಗಾರದಲ್ಲೇ ವಾಸ:‘ಕೋವಿಡ್‌ನಿಂದ ಮೃತಪಟ್ಟವರ ಅಂತ್ಯಕ್ರಿಯೆ ನಡೆಸುವ ಅನೇಕ ಸಿಬ್ಬಂದಿ ತಿಂಗಳಾನುಗಟ್ಟಲೆ ಚಿತಾಗಾರದಲ್ಲೇ ಉಳಿಯುತ್ತಿದ್ದಾರೆ. ಮನೆಗೆ ಹೋದರೆ ಕುಟುಂಬವನ್ನು ಅಪಾಯಕ್ಕೆ ಸಿಲುಕಿಸಿದಂತಾಗುತ್ತದೆ ಎಂಬ ಕಾರಣಕ್ಕೆ ಈ ರೀತಿ ಮಾಡುತ್ತಿದ್ದಾರೆ’ ಎಂದರು.

ಬಾಡಿಗೆ ಮನೆ ತೊರೆಯುವಂತೆ ಒತ್ತಡ

‘ನಾವು ಕೋವಿಡ್‌ನಿಂದ ಮೃತಪಟ್ಟವರ ಅಂತ್ಯಕ್ರಿಯೆಯನ್ನೂ ನಿರ್ವಹಿಸುತ್ತೇವೆ. ನಮ್ಮ ಮೂಲಕ ಕೋವಿಡ್‌ ಹರಡಬಹುದು ಎಂಬ ಆತಂಕ ನಮಗೆ ಮನೆ ಬಾಡಿಗೆಗೆ ನೀಡಿದವರಿಗೆ ಕಾಡುತ್ತಿದೆ. ಬಾಡಿಗೆ ಮನೆ ತೊರೆಯುವಂತೆ ಮಾಲೀಕರು ಒತ್ತಡ ಹೇರುತ್ತಿದ್ದಾರೆ. ಸಂಬಳ ಕೈಸೇರದ ಕಾರಣ ಮನೆ ಬಾಡಿಗೆ ಪಾವತಿಸುವುದೂ ಕಷ್ಟವಾಗಿದೆ’ ಎಂದು ರವಿ ಸಂಕಷ್ಟವನ್ನು ಹೇಳಿಕೊಂಡರು.

ವಾರದೊಳಗೆ ಸಂಬಳ ನೀಡದಿದ್ದರೆ ಮುಷ್ಕರ: ಆ.ಸುರೇಶ

‘ಅನೇಕ ಬಾರಿ ಮನವಿ ಮಾಡಿದರೂ, ಪ್ರತಿಭಟನೆ ನಡೆಸಿದರೂ ಸ್ಮಶಾನ ನಿರ್ವಹಣೆ ಸಿಬ್ಬಂದಿಯ ಸಂಬಳ ಬಿಡುಗಡೆಗೆ ಬಿಬಿಎಂಪಿ ಕ್ರಮ ಕೈಗೊಂಡಿಲ್ಲ. ಸಂಬಳವನ್ನು ತಕ್ಷಣವೇ ನೀಡಲು ಕ್ರಮ ಕೈಗೊಳ್ಳದಿದ್ದರೆ ಮುಂದಿನ ವಾರದಿಂದ ಮುಷ್ಕರ ಕೈಗೊಳ್ಳಲಿದ್ದೇವೆ. ಮೃತದೇಹಗಳ ಅಂತ್ಯಕ್ರಿಯೆಗೆ ಸಮಸ್ಯೆ ಉಂಟಾದರೆ ಅದಕ್ಕೆ ಬಿಬಿಎಂಪಿಯೇ ಹೊಣೆ’ ಎಂದು ಅಂಬೇಡ್ಕರ್‌ ದಲಿತ ಸಂಘರ್ಷ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಆ.ಸುರೇಶ ಎಚ್ಚರಿಕೆ ನೀಡಿದರು.

‘ಕೋವಿಡ್‌ ಕಾಣಿಸಿಕೊಂಡಾಗ ಒಂದು ತಿಂಗಳ ಸಂಬಳವನ್ನು ಕೋವಿಡ್‌ ಪರಿಹಾರ ಕಾರ್ಯಕ್ಕೆ ದೇಣಿಗೆ ನೀಡಿದ ಉದಾರಿಗಳು ಇವರು. ಇವರಿಗೆ ಸಂಬಳ ಪಾವತಿಸದಿರುವುದು ಅಕ್ಷಮ್ಯ’ ಎಂದರು.

ಕೋವಿಡ್‌: ಪ್ರೋತ್ಸಾಹಧನ ಕನ್ನಡಿಯೊಳಗಿನ ಗಂಟು

ಕೋವಿಡ್‌ನಿಂತ ಮೃತಪಟ್ಟವರ ಅಂತ್ಯಕ್ರಿಯೆ ನಡೆಸಲು ಚಿತಾಗಾರ ಸಿಬ್ಬಂದಿ ಹಿಂದೇಟು ಹಾಕುತ್ತಿದ್ದರು. ಅಪಾಯ ಲೆಕ್ಕಿಸದೇ ಕಾರ್ಯ ನಿರ್ವಹಿಸುವ ಸಿಬ್ಬಂದಿಗೆ ಪ್ರತಿ ಅಂತ್ಯಕ್ರಿಯೆಗೆ ₹ 500 ನೀಡಬೇಕು ಎಂದು ಬಿಬಿಎಂಪಿ ವಿಶೇಷ ಆಯುಕ್ತರು (ಆರೋಗ್ಯ) 2020ರ ಜುಲೈ 24ರಂದು ಆದೇಶ ಮಾಡಿದ್ದರು.

‘ಇದುವರೆಗೂ ಯಾವುದೇ ಸಿಬ್ಬಂದಿಗೂ ಕೋವಿಡ್‌ ಪ್ರೋತ್ಸಾಹಧನ ಸಿಕ್ಕಿಲ್ಲ. ಈ ಬಗ್ಗೆ ಆರೋಗ್ಯ ವೈದ್ಯಾಧಿಕಾರಿಗಳ ಬಳಿ ವಿಚಾರಿಸಿದರೆ ಆದೇಶ ತೋರಿಸಿ ಎನ್ನುತ್ತಾರೆ. ನಾವೆಲ್ಲಿಂದ ಆದೇಶದ ಪ್ರತಿ ತರೋಣ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಚಿತಾಗಾರ ನಿರ್ವಹಣಾ ಸಿಬ್ಬಂದಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.