ADVERTISEMENT

ಇಲಾಖಾ ವಿಚಾರಣೆ: ರಕ್ಷಣೆಗೆ ‘ವಿಳಂಬ’ ಅಸ್ತ್ರ

ಅರಣ್ಯ ಇಲಾಖೆ ಒಂದರಲ್ಲೇ ಸಾವಿರಕ್ಕೂ ಹೆಚ್ಚು ಇಲಾಖಾ ವಿಚಾರಣೆ ಪ್ರಕರಣ ಬಾಕಿ

ವಿಜಯಕುಮಾರ್ ಎಸ್.ಕೆ.
Published 23 ಆಗಸ್ಟ್ 2022, 18:56 IST
Last Updated 23 ಆಗಸ್ಟ್ 2022, 18:56 IST

ಬೆಂಗಳೂರು: ‘ಗುರುತರ ಆರೋಪ ಗಳಲ್ಲಿ ವಿಚಾರಣೆ ಎದುರಿಸುತ್ತಿರುವ ಅಧಿಕಾರಿಗಳನ್ನು ರಕ್ಷಿಸಲು ‘ವಿಳಂಬ’ ಅಸ್ತ್ರವನ್ನು ಅರಣ್ಯ ಇಲಾಖೆ ಅನುಸರಿಸುತ್ತಿದೆ’ ಎಂಬ ಆರೋಪ ಕೇಳಿಬಂದಿದೆ.

ವಿಚಾರಣಾ ಪ್ರಕ್ರಿಯೆಯನ್ನು ಮೂರ್ನಾಲ್ಕು ವರ್ಷ ವಿಳಂಬ ಮಾಡಿ, ಅವುಗಳ ಗಂಭೀರತೆ ಕಡಿಮೆಯಾದ ಬಳಿಕ ಮುಚ್ಚಿ ಹಾಕುವ ಪ್ರಯತ್ನಗಳು ಸದ್ದಿಲ್ಲದೆ ನಡೆಯುತ್ತಿವೆ’ ಎಂದು ಇಲಾಖೆಯ ನಿವೃತ್ತಿ ಅಧಿಕಾರಿಗಳು ಆಪಾದಿಸಿದ್ದಾರೆ.

‘ಇಲಾಖಾ ವಿಚಾರಣೆ ಎಂಬುದು ಅರಣ್ಯ ಇಲಾಖೆಯಲ್ಲಿ ನಪಮಾತ್ರಕ್ಕೆ ಎಂಬಂತಾಗಿದೆ. ಸಾವಿರಕ್ಕೂ ಹೆಚ್ಚು ಪ್ರಕರಣಗಳು ಬಾಕಿ ಉಳಿದುಕೊಂಡಿವೆ. ಈ ರೀತಿ ವಿಳಂಬ ಮಾಡುವ ಮೂಲಕ ಗುರುತರ ಆರೋಪದ ಪ್ರಕರಣಗಳಲ್ಲಿ ಅಧಿಕಾರಿಗಳಿಗೆ ಅನುಕೂಲ ಮಾಡಿಕೊಟ್ಟರೆ, ಕ್ಷುಲ್ಲಕ ಆರೋಪಗಳನ್ನು ಹೊತ್ತ ಅಧಿಕಾರಿಗಳಿಗೆ ಅನಗತ್ಯ ಕಿರುಕುಳವನ್ನೂ ನೀಡಲಾಗುತ್ತಿದೆ’ ಎಂದು ಹೆಸರು ಹೇಳಲಿಚ್ಛಿಸದ ನಿವೃತ್ತ ಅಧಿಕಾರಿಯೊಬ್ಬರು ಹೇಳಿದರು.

ADVERTISEMENT

ಅರಣ್ಯ ಇಲಾಖೆಗೆ ಬೆಳಗಾವಿ ವಿಭಾಗದ ಭೀಮಗಡ ವನ್ಯಜೀವಿ ವಲಯದಲ್ಲಿ ಅರಣ್ಯ ಇಲಾಖೆ ಅನುಮತಿ ಪಡೆಯದೆ 5.70 ಕಿಲೋ ಮೀಟರ್‌ ವ್ಯಾಪ್ತಿಯಲ್ಲಿ 218 ವಿದ್ಯುತ್ ಕಂಬಗಳನ್ನು ಅಳವಡಿಸಲಾಗಿತ್ತು. ಈ ಬಗ್ಗೆ ಮಾಹಿತಿ ಇದ್ದರೂ ಕ್ರಮ ಕೈಗೊಳ್ಳದೆ ಕರ್ತವ್ಯ ಲೋಪ ಎಸಗಿದ ಆರೋಪದಲ್ಲಿ ಅಂದಿನ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸೇರಿ ಐವರ ವಿರುದ್ಧ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ(ಅರಣ್ಯ ಪಡೆ) ಸರ್ಕಾರಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

2018ರ ಪ್ರಕರಣದ ಇಲಾಖಾ ವಿಚಾರಣೆಯನ್ನು 2022ರ ತನಕ ಬಾಕಿ ಉಳಿಸಿಕೊಳ್ಳಲಾಗಿತ್ತು. ಆ ವೇಳೆಗೆ ಇಬ್ಬರು ನಿವೃತ್ತಿ ಹೊಂದಿದ್ದು, ಅವರಲ್ಲಿ ಒಬ್ಬರು ನಿಧನ ಹೊಂದಿದ್ದಾರೆ. ನಾಲ್ಕು ವರ್ಷಗಳ ಬಳಿಕ ಎಲ್ಲರನ್ನು ದೋಷಮುಕ್ತಗೊಳಿಸಿ ಸರ್ಕಾರ ಆದೇಶಿಸಿದೆ.

‘ಇಲಾಖಾ ವಿಚಾರಣೆಗೆ ಸರ್ಕಾರಕ್ಕೆ ಹೋದ ಪ್ರಸ್ತಾವನೆಗಳು ನಾಲ್ಕು ವರ್ಷವಾದರೂ ವಿಚಾರಣೆ ಪೂರ್ಣಗೊಳ್ಳುವುದಿಲ್ಲ. ಈ ರೀತಿ ವಿಳಂಬ ಮಾಡಿ ಲಂಚಕ್ಕಾಗಿ ಕಾಯಲಾಗುತ್ತದೆ. ಹಣ ಕೊಟ್ಟರೆ ಆರೋಪಿತರ ಪರವಾಗಿ ಆದೇಶಗಳನ್ನು ಹೊರಡಿಸಲಾಗುತ್ತದೆ. ಆರೋಪದಲ್ಲಿ ಹುರುಳಿಲ್ಲದ ಪ್ರಕರಣವಾಗಿದ್ದರೂ ಅನಗತ್ಯವಾಗಿ ಸತಾಯಿಸಲಾಗುತ್ತದೆ. ಆರೋಪ ಸತ್ಯ ಆಗಿದ್ದರೂ ಹಣ ಕೊಡಬೇಕು, ಸುಳ್ಳಾಗಿದ್ದರೂ ಹಣ ಕೊಡಬೇಕಾದ ಸ್ಥಿತಿ ಇದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

‘ಜಿಲ್ಲಾ ಪಂಚಾಯಿತಿ ಪ್ರಗತಿ ಪರಿಶೀಲನಾ ಸಭೆಗೆ ಹಾಜರಾಗಿಲ್ಲ ಎಂಬ ಆರೋಪದಲ್ಲಿ ಅಧಿಕಾರಿಯೊಬ್ಬರ ವಿರುದ್ಧ ಇಲಾಖಾ ವಿಚಾರಣೆಗೆ ಆದೇಶಿಸಲಾಗಿತ್ತು. ಹಾಜರಾಗಿದ್ದರು ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾ
ರಿಯೇ ಪತ್ರ ಬರೆದಿದ್ದು, ಆರೋಪದಲ್ಲಿ ಹುರುಳಿಲ್ಲ ಎಂಬುದು ಸಾಬೀತಾಯಿತು. ಈ ಪ್ರಕರಣದಲ್ಲಿ ದೋಷಮುಕ್ತ ಗೊಳಿಸಲು ಲಕ್ಷಗಟ್ಟಲೆ ಲಂಚ ಕೊಡಬೇಕಾಯಿತು’ ಎಂದು ಅವರು ನೋವು ತೋಡಿಕೊಂಡರು.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಅರಣ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸ
ಲಾಯಿತು. ಅವರು ಕರೆ ಸ್ವೀಕರಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.