ADVERTISEMENT

ಬಾಂಬ್ ಬೆದರಿಕೆ: ಬೆಂಗಳೂರು ಪೊಲೀಸರಿಂದ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 3 ಮೇ 2024, 15:50 IST
Last Updated 3 ಮೇ 2024, 15:50 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಬೆಂಗಳೂರು: ದೆಹಲಿಯ 100ಕ್ಕೂ ಅಧಿಕ ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್ ಬಂದಿದ್ದು, ಈ ಪ್ರಕರಣಕ್ಕೂ ಬೆಂಗಳೂರಿನ ಬಾಂಬ್‌ ಬೆದರಿಕೆ ಪ್ರಕರಣಕ್ಕೂ ಸಾಮ್ಯತೆ ಇರುವ ಅನುಮಾನದಡಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

2023ರ ಡಿಸೆಂಬರ್‌ನಲ್ಲಿ ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ 70 ಶಾಲೆಗಳಿಗೆ ಬಾಂಬ್‌ ಬೆದರಿಕೆ ಇ–ಮೇಲ್ ಬಂದಿತ್ತು. ಯಶವಂತಪುರದ ಕೇಂದ್ರೀಯ ವಿದ್ಯಾಲಯಕ್ಕೂ ಫೆಬ್ರುವರಿಯಲ್ಲಿ ಬಾಂಬ್‌ ಬೆದರಿಕೆ ಹಾಕಲಾಗಿತ್ತು.

ADVERTISEMENT

ಇದೀಗ, ದೆಹಲಿಯ 100ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ ಇ–ಮೇಲ್ ಬಂದಿದೆ. ಈ ಸಂಬಂಧ ಅಲ್ಲಿಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ರಷ್ಯಾದ ಕಂಪನಿಯೊಂದರ ಸರ್ವರ್‌ನಿಂದ ಇ–ಮೇಲ್ ಬಂದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ದೆಹಲಿ ಶಾಲೆಗಳ ಮಾದರಿಯಲ್ಲಿಯೇ ಬೆಂಗಳೂರಿನ ಶಾಲೆಗಳಿಗೂ ಬಾಂಬ್ ಬೆದರಿಕೆ ಬಂದಿರುವ ಸಂಶಯ ವ್ಯಕ್ತವಾಗಿದೆ. ಇದೇ ಕಾರಣಕ್ಕೆ ಬೆಂಗಳೂರು ಪೊಲೀಸರು, ದೆಹಲಿ ಪೊಲೀಸರನ್ನು ಸಂಪರ್ಕಿಸಿ ಮಾಹಿತಿ ಕಲೆಹಾಕಲು ಯತ್ನಿಸುತ್ತಿದ್ದಾರೆ.

‘ದೆಹಲಿ ಶಾಲೆಗಳ ಬಾಂಬ್ ಬೆದರಿಕೆ ಪ್ರಕರಣಕ್ಕೂ ಬೆಂಗಳೂರು ಪ್ರಕರಣಕ್ಕೂ ಸದ್ಯಕ್ಕೆ ಹೋಲಿಕೆ ಕಂಡುಬರುತ್ತಿಲ್ಲ’ ಎಂದು ನಗರ ಪೊಲೀಸ್ ಕಮಿಷನರ್ ಬಿ. ದಯಾನಂದ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಮಾಹಿತಿ ನೀಡದ ಕಂಪನಿಗಳು: ‘ವಿದೇಶದ ಕಂಪನಿಯೊಂದರ ಸರ್ವರ್‌ನಿಂದ ಬೆಂಗಳೂರು ಶಾಲೆಗಳಿಗೆ ಬಾಂಬ್ ಬೆದರಿಕೆ ಇ–ಮೇಲ್ ಬಂದಿತ್ತು. ಇದನ್ನು ಪತ್ತೆ ಮಾಡಿರುವ ಪೊಲೀಸರು, ಇ–ಮೇಲ್ ಬಳಕೆದಾರರ ಬಗ್ಗೆ ಮಾಹಿತಿ ಕೋರಿ ವಿದೇಶದ ಕಂಪನಿಗೆ ಪತ್ರ ಬರೆದಿದ್ದಾರೆ. ಆದರೆ, ಕಂಪನಿಯಿಂದ ಇದುವರೆಗೂ ಉತ್ತರ ಬಂದಿಲ್ಲ’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.