ADVERTISEMENT

ಮರೆವಿನ ಕಾಯಿಲೆ: ಚಿಕಿತ್ಸೆಗೆ ‘ಡೆಮ್‌ಕ್ಲಿನಿಕ್‌’

ನೈಟಿಂಗೇಲ್ಸ್‌ ವೈದ್ಯಕೀಯ ಟ್ರಸ್ಟ್‌ ಆರಂಭಿಸಿರುವ ನಿರಂತರ ಆರೈಕೆ ಕೇಂದ್ರ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2022, 4:19 IST
Last Updated 28 ಸೆಪ್ಟೆಂಬರ್ 2022, 4:19 IST

ಬೆಂಗಳೂರು: ಬಾಣಸವಾಡಿ ಕಸ್ತೂರಿ ನಗರದ ನೈಟಿಂಗೇಲ್ಸ್‌ ವೈದ್ಯಕೀಯ ಟ್ರಸ್ಟ್‌, ಮರೆವಿನ ಕಾಯಿಲೆಯ ಚಿಕಿತ್ಸೆಗಾಗಿ ನಿರಂತರ ಆರೈಕೆ ಕೇಂದ್ರ ‘ಡೆಮ್‌ಕ್ಲಿನಿಕ್‌’ ಆರಂಭಿಸಿದೆ.

ಕೇಂದ್ರದಲ್ಲಿ ನೋಂದಣಿಯಾಗುವ ರೋಗಿಗಳ ರೋಗವನ್ನು ಖಚಿತವಾಗಿ ಪತ್ತೆ ಹಚ್ಚುವುದು, ಪತ್ತೆ ಹಚ್ಚಿದ ನಂತರ ಸೂಕ್ತ ಚಿಕಿತ್ಸೆ ನೀಡಿ, ನಿರಂತರ ಆರೈಕೆಯ ವ್ಯವಸ್ಥೆ ಇದೆ. ಮರೆವಿನ ಕಾಯಿಲೆ ಸಮಸ್ಯೆ ಇರುವವರಿಗೆ, ಅವರ ಕುಟುಂಬದವರಿಗೆ ಕಾಯಿಲೆ ಕುರಿತು ಸೂಕ್ತ ಮಾಹಿತಿ ಒದಗಿಸುವುದು, ರೋಗಿಯ ನಡವಳಿಕೆ ಹಾಗೂ ಸಾಮಾಜಿಕ ಅಗತ್ಯಗಳ ಕುರಿತು ತಿಳಿವಳಿಕೆ ಮೂಡಿಸುವ ಕೆಲಸವನ್ನೂ ಈ ಕೇಂದ್ರ ಮಾಡಲಿದೆ.

ವಿಶ್ವ ಮರೆವಿನ ತಿಂಗಳ (ಅಲ್ಜೈಮರ್ಸ್) ಆಚರಣೆಯ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿಡೆಮ್‌ಕ್ಲಿನಿಕ್ ಉದ್ಘಾಟಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಯೋಜನಾ ನಿರ್ದೇಶಕ ಡಾ.ಶ್ರೀನಿವಾಸ್‌,ದೇಶದಲ್ಲಿ 60 ವರ್ಷದ ಮೇಲಿನ 53 ಲಕ್ಷ ಜನರು ಮರೆವಿನ ಕಾಯಿಲೆಯಿಂದ ಬಳಲುತ್ತಿದ್ದಾರೆ. ಮುಂದಿನ 15 ವರ್ಷಗಳಲ್ಲಿ ಈ ಸಂಖ್ಯೆ ದ್ವಿಗುಣಗೊಳ್ಳುವ ಸಾಧ್ಯತೆ ಇದೆ. ಮರೆವು ನರಶಮನಕಾರಿ ಕಾಯಿಲೆ, ಪೀಡಿತ ವ್ಯಕ್ತಿ ಹಾಗೂ ಆರೈಕೆ ಮಾಡುವವರು ಸಾಕಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ. ಈ ಕಾಯಿಲೆಗೆ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಆರೋಗ್ಯ ಸಮಸ್ಯೆಯಿಂದ ಬಳಲುವವರು, ಅಂಗವಿಕಲರು ಸಾಕಷ್ಟು ಸಮಸ್ಯೆ ಅನುಭವಿಸುತ್ತಾರೆ. ನಿರಂತರ ಆರೈಕೆ, ಕಾಳಜಿ ಅಗತ್ಯ ಎಂದರು.

ADVERTISEMENT

ವ್ಯವಸ್ಥಾಪಕ ಟ್ರಸ್ಟಿಡಾ.ರಾಧಾ ಎಸ್. ಮೂರ್ತಿ ಮಾತನಾಡಿ, ನೈಟಿಂಗೇಲ್ಸ್ ವೈದ್ಯಕೀಯ ಟ್ರಸ್ಟ್‌ ಆರಂಭಿಸಿರುವ ಡೆಮ್‌ಕ್ಲಿನಿಕ್ ಮರೆವಿನ ಕಾಯಿಲೆಯಿಂದ ಬಳಲುತ್ತಿರುವವರಿಗೆ ವರದಾನವಾಗಲಿದೆ. ಹೆಸರು ನೋಂದಾಯಿಸಲುwww.demclinic.com ಸಂಪರ್ಕಿಸಬಹುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.