ADVERTISEMENT

ಹೆಚ್ಚುವರಿ ₹534 ಕೋಟಿಗೆ ಬೇಡಿಕೆ: ಸಚಿವೆ ಶಶಿಕಲಾ ಜೊಲ್ಲೆ

ಅಪೌಷ್ಟಿಕತೆ ಮತ್ತು ರಕ್ತ ಹೀನತೆ ತಡೆಯಲು ಹೊಸ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2021, 10:42 IST
Last Updated 10 ಫೆಬ್ರುವರಿ 2021, 10:42 IST
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ   

ಬೆಂಗಳೂರು: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಕಾಡುತ್ತಿರುವ ಅಪೌಷ್ಟಿಕತೆ ಮತ್ತು ರಕ್ತಹೀನತೆ ಸಮಸ್ಯೆಗಳನ್ನು ಹೋಗಲಾಡಿಸಲು ವಿಶೇಷ ಕಾರ್ಯಕ್ರಮ ರೂಪಿಸಲಾಗುವುದು. ಇದಕ್ಕಾಗಿ ಬಜೆಟ್‌ನಲ್ಲಿ ₹534 ಕೋಟಿ ಹೆಚ್ಚುವರಿ ಹಣ ನೀಡಲು ಮುಖ್ಯಮಂತ್ರಿಯವರಿಗೆ ಮನವಿ ಮಾಡಿರುವುದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.

ಇಲಾಖೆಗೆ ಪ್ರತಿ ವರ್ಷ ಸುಮಾರು ₹5,000 ಕೋಟಿ ಬಜೆಟ್‌ನಲ್ಲಿ ನೀಡಲಾಗುತ್ತದೆ. ಇದಲ್ಲದೇ ಕೇಂದ್ರ ಪ್ರಾಯೋಜಿತ ಯೋಜನೆಗಳ ಅನುಷ್ಠಾನಕ್ಕೆ ಕೇಂದ್ರವೇ ಅನುದಾನ ನೀಡುತ್ತದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕೋವಿಡ್‌ನಿಂದಾಗಿ ಕಳೆದ ವರ್ಷ ಬಜೆಟ್‌ನಲ್ಲಿ ನೀಡಿದ್ದ ಒಟ್ಟು ಹಣದಲ್ಲಿ ₹600 ಕೋಟಿ ಕಡಿತ ಮಾಡಲಾಗಿತ್ತು. ಈ ಬಾರಿ ಬಜೆಟ್‌ನಲ್ಲಿ ಹೆಚ್ಚುವರಿ ಹಣ ಸಿಗುವ ನಿರೀಕ್ಷೆ ಇದೆ ಎಂದರು.

ADVERTISEMENT

ಮಹಿಳೆಯರು ತಯಾರಿಸುವ ಉತ್ಪನ್ನಗಳ ಮಾರಾಟಕ್ಕೆ ಆನ್‌ಲೈನ್‌ ಮೂಲಕ ವೇದಿಕೆ ಕಲ್ಪಿಸಲು ಉದ್ದೇಶಿಸಲಾಗಿದೆ. ಅಂಗವಿಕಲರು, ಗರ್ಭಿಣಿ ಮತ್ತು ಬಾಣಂತಿಯರಿಗೆ ಹೊಸ ಯೋಜನೆ ಆರಂಭಿಸಲು ಉದ್ದೇಶಿಸಿದ್ದು, ಬಜೆಟ್‌ನಲ್ಲಿ ಅದರ ಮಾಹಿತಿ ಸಿಗಲಿದೆ ಎಂದು ಜೊಲ್ಲೆ ತಿಳಿಸಿದರು.

ಕೇಂದ್ರದ ಪ್ರಾಯೋಜಿತ ಪೋಷಣ್‌ ಅಭಿಯಾನ ರಾಜ್ಯದಲ್ಲಿ ಅತ್ಯುತ್ತಮ ರೀತಿಯಲ್ಲಿ ಅನುಷ್ಠಾನಗೊಂಡಿದೆ. ಮಾತೃ ವಂದನಾ ಶೇ 100 ರಷ್ಟು ಜಾರಿ ಆಗಿದೆ. ಪೋಷಣ್‌ ಅಭಿಯಾನದಲ್ಲಿ 23 ನೇ ಸ್ಥಾನದಲ್ಲಿದ್ದ ರಾಜ್ಯವು ಈಗ 5 ನೇ ಸ್ಥಾನಕ್ಕೇರಿದೆ ಎಂದರು ಹೇಳಿದರು.

ಹಿರಿಯ ನಾಗರಿಕರ ದಿನಾಚರಣೆ:ವಿಶ್ವ ವಿಕಲಚೇತನರ ಮತ್ತು ಹಿರಿಯ ನಾಗರಿಕರ ದಿನಾಚರಣೆ ಗುರುವಾರ ನಡೆಯಲಿದ್ದು, ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ 7 ಸಾಧಕರಿಗೆ ಪ್ರಶಸ್ತಿಗಳನ್ನು ನೀಡಲಾಗುವುದು. ಪ್ರಶಸ್ತಿ ವಿಜೇತರಿಗೆ ತಲಾ ₹1 ಲಕ್ಷ ನೀಡಲಾಗುವುದು ಎಂದು ಜೊಲ್ಲೆ ತಿಳಿಸಿದರು.

ಅಂಗವಿಕಲರಿಗೆ ಸಂಬಂಧಿಸಿದಂತೆ ವಿವಿಧ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳು, ವಿಶೇಷ ಶಿಕ್ಷಕರು ಮತ್ತು ಸಾಧನೆಗೈದ ವ್ಯಕ್ತಿಗಳಿಗೆ ಒಟ್ಟು 30 ಪ್ರಶಸ್ತಿ ನೀಡಲಾಗುವುದು. ನಗರದ ರವೀಂದ್ರ ಕಲಾ ಕ್ಷೇತ್ರದಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದರು.

ಅಂಗನವಾಡಿ ಪುನರಾರಂಭ: ಅಂಗನವಾಡಿ ಪುನರಾರಂಭಿಸಲು ಸುಪ್ರೀಂಕೋರ್ಟ್‌ ಅನುಮತಿ ನೀಡಿರುವುದರಿಂದ ಮತ್ತು ಕೇಂದ್ರ ಸರ್ಕಾರದ ಸೂಚನೆಯ ಮೇರೆಗೆ ರಾಜ್ಯದಲ್ಲೂ ಅಂಗನವಾಡಿಗಳನ್ನು ಪುನರಾರಂಭಿಸಲಾಗುವುದು. ಇದಕ್ಕೆ ಕೋವಿಡ್‌ ಮಾರ್ಗಸೂಚಿ ಪಾಲಿಸಲಾಗುವುದು ಎಂದು ಜೊಲ್ಲೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.