ADVERTISEMENT

ಲಿಂಗಾಯತ ಸಮುದಾಯದ ಎಲ್ಲ ಉಪ ಪಂಗಡಗಳನ್ನು ’ಒಬಿಸಿ’ ಪಟ್ಟಿ ಸೇರ್ಪಡೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 15 ಮೇ 2022, 11:05 IST
Last Updated 15 ಮೇ 2022, 11:05 IST
ಈಶ್ವರ ಖಂಡ್ರೆ
ಈಶ್ವರ ಖಂಡ್ರೆ   

ಬೆಂಗಳೂರು:ಲಿಂಗಾಯತ ವೀರಶೈವ ಸಮುದಾಯದ ಎಲ್ಲ ಉಪ ಪಂಗಡಗಳನ್ನು ಕೇಂದ್ರ ಸರ್ಕಾರದ ಇತರ ಹಿಂದುಳಿದ ವರ್ಗಗಳ (ಒಬಿಸಿ) ಪಟ್ಟಿಯಲ್ಲಿ ಸೇರಿಸಬೇಕು ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಒತ್ತಾಯಿಸಿದೆ.

ನಗರದಲ್ಲಿ ಭಾನುವಾರ ನಡೆದ ಮಹಾಸಭಾದ ‘ಪ್ರಾತಿನಿಧಿಕ ಸಭೆ’ಯಲ್ಲಿ ಕೈಗೊಂಡ ನಿರ್ಣಯಗಳನ್ನು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದ ಮಹಾಪ್ರಧಾನಕಾರ್ಯದರ್ಶಿ ಈಶ್ವರ ಖಂಡ್ರೆ, ’ಸರ್ವರಿಗೂ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಜಗತ್ತಿಗೆ ನೀಡಿದವರು ಬಸವಾದಿ ಶರಣರು. ಆದರೆ, ಬಸವತತ್ವ ಅನುಯಾಯಿಗಳಾದ ಲಿಂಗಾಯಿತ ವೀರಶೈವರೇ ಸಾಮಾಜಿಕ ನ್ಯಾಯದಿಂದ ವಂಚಿತರಾಗಿದ್ದಾರೆ. ಹೀಗಾಗಿ, ಸಂವಿಧಾನಬದ್ಧವಾಗಿ ನಮ್ಮ ಬೇಡಿಕೆ ಈಡೇರಿಸಬೇಕು. ಸರ್ಕಾರ ಸಮುದಾಯದ ಬೇಡಿಕೆಗೆ ಸ್ಪಂದಿಸದಿದ್ದರೆ ಹೋರಾಟ ನಡೆಸಲಾಗುವುದು’ ಎಂದು ತಿಳಿಸಿದರು.

‘ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ, ಕೇರಳ, ತೆಲಂಗಾಣ ಮತ್ತು ತಮಿಳುನಾಡು ರಾಜ್ಯಗಳಲ್ಲಿ ವೀರಶೈವ ಲಿಂಗಾಯತ ಸಮುದಾಯದ ಜನರಿದ್ದಾರೆ. ಕರ್ನಾಟಕದಲ್ಲಿ ಸುಮಾರು ಶೇ 18ರಿಂದ 20ರಷ್ಟು ಇದ್ದಾರೆ. ವೀರಶೈವ ಲಿಂಗಾಯತರು ಮುಂದುವರಿದವರು ಎಂದು ಕೆಲವರು ವಾದಿಸುತ್ತಾರೆ. ಆದರೆ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿಯೂ ಅತ್ಯಂತ ಹಿಂದುಳಿದಿರುವ ಸಮುದಾಯದಲ್ಲಿ ಲಿಂಗಾಯತ ವೀರಶೈವ ಸಮುದಾಯವೂ ಸೇರುತ್ತದೆ’ ಎಂದು ಪ್ರತಿಪಾದಿಸಿದರು.

ADVERTISEMENT

‘ಕೇಂದ್ರ ಲೋಕಸೇವಾ ಆಯೋಗ, ಬ್ಯಾಂಕಿಂಗ್, ರೈಲ್ವೆ ನೇಮಕಾತಿ ಮಂಡಳಿ, ಸ್ಟಾಫ್ ಸೆಲೆಕ್ಷನ್ ಕಮಿಷನ್ ಮತ್ತು ಕೇಂದ್ರ ಸರ್ಕಾರದ ಉದ್ದಿಮೆಗಳ ನೇಮಕಾತಿಯಲ್ಲಿ ಲಿಂಗಾಯತ ವೀರಶೈವ ಸಮುದಾಯದಿಂದ ಆಯ್ಕೆಯಾಗಿ ನೇಮಕಗೊಂಡಿರುವವರ ಪಾಲು ನಗಣ್ಯ. ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಈ ಸಮುದಾಯ ಹಿಂದುಳಿದಿರುವುದೇ ಕಾರಣವಾಗಿದೆ’ ಎಂದು ಹೇಳಿದರು.

’ಅಖಿಲ ಭಾರತ ವೀರಶೈವ ಮಹಾಸಭಾ ಎನ್ನುವುದನ್ನು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಎಂದು ತಿದ್ದುಪಡಿ ಮಾಡಲು ಹಾಗೂ ವಿಧಾನಸೌಧದ ಆವರಣದಲ್ಲಿ ಬಸವೇಶ್ವರರ ಪುತ್ಥಳಿ ಸ್ಥಾಪಿಸಬೇಕು ಎನ್ನುವ ನಿರ್ಣಯವನ್ನು ಸಭೆಯಲ್ಲಿ ಕೈಗೊಳ್ಳಲಾಗಿದೆ’ ಎಂದು ತಿಳಿಸಿದರು.

‘ವೀರಶೈವ ಲಿಂಗಾಯತದ ಬಗ್ಗೆ ಯಾವುದೇ ಗೊಂದಲ ಇಲ್ಲ. ನಾವು ಸಮುದಾಯವನ್ನು ಒಗ್ಗೂಡಿಸುವ ಕಾರ್ಯದಲ್ಲಿ ತೊಡಗಿದ್ದೇವೆ. ವಿಘಟನೆಗೆ ಅವಕಾಶ ನೀಡುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.