ಮೀಸಲಾತಿ
ಬೆಂಗಳೂರು: ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಪ್ರಮಾಣ ನಿಗದಿಪಡಿಸಲು ರಚನೆಯಾಗಿರುವ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ನೇತೃತ್ವದ ಆಯೋಗವು ಸರ್ಕಾರಕ್ಕೆ ಮಧ್ಯಂತರ ವರದಿ ಸಲ್ಲಿಸಿ, ಅದನ್ನು ಜಾರಿಗೊಳಿಸಲು ಶಿಫಾರಸು ಮಾಡಬೇಕು ಎಂದು ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಕ್ಕೂಟದ ರಾಜ್ಯ ಸಮಿತಿ ಒತ್ತಾಯಿಸಿದೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಸಮಿತಿಯ ರಾಜ್ಯ ಪ್ರಧಾನ ಸಂಚಾಲಕ ಬಸವರಾಜ್ ಕೌತಾಳ್, ‘ಆಯೋಗವು ಮಧ್ಯಂತರ ವರದಿ ಸಲ್ಲಿಸಿದರೆ, ವಿವಿಧ ಹುದ್ದೆಗಳ ನೇಮಕಾತಿ ಹಾಗೂ ಬಜೆಟ್‌ನಲ್ಲಿ ಅನುದಾನ ಹಂಚಿಕೆಗೆ ಅನುಕೂಲ ಆಗುತ್ತದೆ. ಪರಿಶಿಷ್ಟ ಜಾತಿಗಳ ಯಾವುದೇ ಸಮುದಾಯಕ್ಕೆ ಅನ್ಯಾಯವಾಗದಂತೆ ಒಳ ಮೀಸಲಾತಿ ವರ್ಗೀಕರಣ ಮಾಡಬೇಕು’ ಎಂದು ಆಗ್ರಹಿಸಿದರು.
‘ಕಡಿಮೆ ಹುದ್ದೆಗಳ ನೇಮಕಾತಿ ಸಂದರ್ಭದಲ್ಲಿ ಪರಿಶಿಷ್ಟ ಜಾತಿಯ ಯಾವ ಗುಂಪಿಗೆ ಮೊದಲ ಆದ್ಯತೆ ಸಿಗಬೇಕು ಎಂಬ ಶ್ರೇಣೀಕರಣ ನಿಗದಿಪಡಿಸಬೇಕು. ಬಡ್ತಿ ಮೀಸಲಾತಿ, ಗುತ್ತಿಗೆ ನೌಕರರ ನೇಮಕಾತಿ ಸಂದರ್ಭದಲ್ಲೂ ಒಳ ಮೀಸಲಾತಿ ಪರಿಗಣಿಸಬೇಕು. ಮತಕ್ಷೇತ್ರಗಳ ಮೀಸಲಾತಿಯಲ್ಲೂ ಒಳ ಮೀಸಲಾತಿ ಕಡ್ಡಾಯಗೊಳಿಸಬೇಕು. ಒಳ ಮೀಸಲಾತಿ ಜಾರಿಯಲ್ಲಿ ಕುಂದುಕೊರತೆಗಳು ಹಾಗೂ ಪ್ರಗತಿಯ ಮೇಲ್ವಿಚಾರಣೆಗೆ ರಾಜ್ಯ ಪರಿಶಿಷ್ಟ ಜಾತಿಗಳ ಆಯೋಗದಡಿ ಸ್ವತಂತ್ರ ಸಮಿತಿ ರಚಿಸಬೇಕು’ ಎಂದು ಒತ್ತಾಯಿಸಿದರು.
‘ಇಂದಿರಾ ಸಹಾನಿ ಪ್ರಕರಣದ ತೀರ್ಪಿನನ್ವಯ ಮೀಸಲಾತಿಗೆ ವಿಧಿಸಿರುವ ಶೇ 50ರ ಮಿತಿ ರದ್ದುಪಡಿಸಲು ಕ್ರಮಕೈಗೊಳ್ಳಬೇಕು. ಉದ್ಯೋಗಾಂಕಾಕ್ಷಿಗಳಿಗೆ ಸಮಸ್ಯೆ ಆಗದಂತೆ ನಿಗದಿತ ಗಡುವಿನೊಳಗೆ ಆಯೋಗ ವರದಿ ಸಲ್ಲಿಸಬೇಕು’ ಎಂದು ಕೋರಿದರು.
ಸಮಿತಿಯ ಮುಖಂಡರಾದ ಶಿವಣ್ಣ ಕನಕಪುರ, ವಿನಯ್ ಶ್ರೀನಿವಾಸ್, ಚಂದ್ರು ತರಹುಣಿಸೆ, ವೇಣುಗೋಪಾಲ್ ಮೌರ್ಯ, ಮಂಜುನಾಥ್, ರಘು ಸುದ್ದಿಗೋಷ್ಠಿಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.